ಜಿಲ್ಲೆ

ನೈಸರ್ಗಿಕ ಕೃಷಿಯಿಂದ ಲಾಭ ಪಡೆಯಿರಿ

ಧಾರವಾಡ: ನಗರದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಕೃವಿವಿ ಹಾಗೂ ಕೃಷಿ ಇಲಾಖೆ ವತಿಯಿಂದ 2 ದಿನ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕಾರ್ಯಾಗಾರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

ಕೃವಿವಿ ಕುಲಪತಿ ಡಾ. ಎಂ.ಬಿ. ಚೆಟ್ಟಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕರ್ನಾಟಕದಲ್ಲಿ ಕೃಷಿಗೆ ಸಂಬಂಧಿಸಿದ 6 ವಿವಿಗಳು ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಕುರಿತು ಸಂಶೋಧನೆ ಹಾಗೂ ಪ್ರಾತ್ಯಕ್ಷಿಕೆಗಳನ್ನು ಕೈಗೊಂಡಿವೆ. ಪ್ರಸಕ್ತ ಸನ್ನಿವೇಶದಲ್ಲಿ ನಿರ್ಜೀವವಾಗಿರುವ ಮಣ್ಣನ್ನು ಜೀವಂತ ಮಾಡಲು ನೈಸರ್ಗಿಕ ಕೃಷಿ ಅಥವಾ ಸಾವಯವ ಕೃಷಿ ಬಹಳ ಮುಖ್ಯವಾಗಿದೆ ಎಂದರು.

ರೈತರು ಬೆಳೆದ ಪದಾರ್ಥಗಳನ್ನು ಕೀಟನಾಶಕಗಳ ಅವಶೇಷ ಪರೀಕ್ಷಣಾ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ದಾಖಲಾತಿ ಪಡೆದು ಬೇರೆಯವರಿಗೆ ನೈಸರ್ಗಿಕ ಅಥವಾ ಸಾವಯವ ಪದಾರ್ಥ ಎಂದು ಮಾರಾಟ ಮಾಡಬಹುದು. ರೈತರು ಖರ್ಚು ಕಡಿಮೆ ಮಾಡಿ ನೈಸರ್ಗಿಕ ಮತ್ತು ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಗಳನ್ನು ಬೆಳೆದು ಲಾಭ ಪಡೆಯಬೇಕು ಎಂದರು.

ಅಪರ ಕೃಷಿ ನಿರ್ದೇಶಕ (ಸಾವಯವ ಕೃಷಿ) ವೆಂಕಟರಾಮ ರೆಡ್ಡಿ ಪಾಟೀಲ ಮಾತನಾಡಿ, ಒಂದೂವರೆ ವರ್ಷದಿಂದ ಈ ಯೋಜನೆ ಜಾರಿಗೆ ತರಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಧನ ಸಹಾಯ ಒದಗಿಸಲಾಗುತ್ತಿದೆ. ಸಂಶೋಧನೆ ಫಲಿತಾಂಶಗಳನ್ನು ನಿಖರವಾಗಿ ಅಭ್ಯಸಿಸಿ ರೈತರ ತಾಕುಗಳ ಫಲಿತಾಂಶವನ್ನು ಸೂಕ್ತ ರೀತಿಯಲ್ಲಿ ಬಿಂಬಿಸಬೇಕು. ಈ ದಿಸೆಯಲ್ಲಿ ಕೇಂದ್ರ ಸರ್ಕಾರವು ಆಸಕ್ತಿ ಹೊಂದಿದ್ದು, ಶೀಘ್ರವೇ ರಾಜ್ಯದಲ್ಲಿ ಈ ಯೋಜನೆ ಪ್ರಗತಿ ಹಾಗೂ ಫಲಿತಾಂಶವನ್ನು ಕೇಂದ್ರಕ್ಕೆ ಸಲ್ಲಿಸಲಾಗುವುದು ಎಂದರು. ಡಾ. ಬಿ.ಡಿ. ಬಿರಾದಾರ ಮಾತನಾಡಿದರು. ಹರಪನಹಳ್ಳಿಯ ಶೂನ್ಯ ಬಂಡವಾಳದ ಪ್ರಗತಿಪರ ರೈತ ಶಿವಯೋಗಿ ಸ್ವಾಮಿ ಅನುಭವ ಹಂಚಿಕೊಂಡರು. ನೈಸರ್ಗಿಕ ಕೃಷಿಗೆ ಬೇಕಾಗುವ ಪರಿಕರಗಳ ತಯಾರಿಕೆ ಕುರಿತ ಕಿರು ಹೊತ್ತಿಗೆಗಳನ್ನು ಬಿಡುಗಡೆಗೊಳಿಸಲಾಯಿತು. ಕೃಷಿ ಇಲಾಖೆ ಅಧಿಕಾರಿಗಳು, ಪ್ರಗತಿಪರ ರೈತರು, ಯೋಜನಾ ತಂಡದ ಸಂಯೋಜಕರು, ತಂಡದ ವಿಜ್ಞಾನಿಗಳು ಹಾಗೂ ಹಿರಿಯ ಸಂಶೋಧನಾ ಸಹಾಯಕರು ಭಾಗವಹಿಸಿದ್ದರು. ಸಂಶೋಧನಾ ನಿರ್ದೇಶಕ ಡಾ. ಪಿ.ಎಲ್. ಪಾಟೀಲ ಸ್ವಾಗತಿಸಿದರು. ಡಾ. ಸಿ. ಪಿ. ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುಣಭಾಗ್ಯ ಕಾರ್ಯಕ್ರಮ ನಿರೂಪಿಸಿದರು. ಡಾ. ಎಸ್. ಬಿ. ಬಬಲಾದ ವಂದಿಸಿದರು.