ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮವನ್ನು ಡಾ.ಆನಂದ ಮಾಸ್ತಿಹೊಳಿ ಉದ್ಘಾಟಿಸಿದರು. ಡಾ.ಎಸ್.ಎಸ್. ಹಿರೇಮಠ, ಜಿ. ಬಿ. ವಿಶ್ವನಾಥ, ಪ್ರವೀಣ ಯಡಹಳ್ಳಿ, ಶಂಕರಗೌಡ ಪಾಟೀಲ, ವಿನೋದ ಕೋಚಿ ಇದ್ದರು. 
ಜಿಲ್ಲೆ

ನೈಸರ್ಗಿಕ ಕೃಷಿಗೆ ಇಲಾಖೆಯಿಂದ ನಿರಂತರ ಪ್ರೋತ್ಸಾಹ

ಬೆಳಗಾವಿ: ರೈತರ ಹೊಲದಲ್ಲಿಯೇ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಕಡಿಮೆ ಖರ್ಚಿನಲ್ಲಿ ಅಳವಡಿಸಬಹುದಾದ ರಸಾಯನಿಕ ಮುಕ್ತ ಕೃಷಿ ಪದ್ಧತಿಯಾಗಿ ನೈಸರ್ಗಿಕ ಕೃಷಿಗೆ ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ತೋಟಗಾರಿಕೆ ಇಲಾಖೆಯಿಂದ ಪ್ರೋತ್ಸಾಹಿಸಲಾಗುತ್ತಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆ ಮುಖ್ಯಸ್ಥ ಡಾ.ಆನಂದ ಮಾಸ್ತಿಹೊಳಿ ಹೇಳಿದರು.

ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನೈಸರ್ಗಿಕ ಕೃಷಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನೈಸರ್ಗಿಕ ಕೃಷಿಯಲ್ಲಿ ಹಸು ಮೂಲ ಆಧಾರವಾಗಿದ್ದು, ಹಸುವಿನ ಸಗಣಿ ಮತ್ತು ಗಂಜಲು ಬಳಸಿ ನೈಸರ್ಗಿಕ ಕೃಷಿ ಪರಿಕರಗಳನ್ನು ತಯಾರಿಸಿ ಬಳಸಲಾಗುವುದು. ಆದ್ದರಿಂದ ದೇಸಿ ಹಸುಗಳನ್ನು ಸಂರಕ್ಷಿಸಿ ಪಾಲನೆ ಮಾಡಬೇಕೆಂದು ಸಲಹೆ ನೀಡಿದರು.

ನೈಸರ್ಗಿಕ ಕೃಷಿಯಲ್ಲಿ ನಾಲ್ಕು ಮೂಲ ತತ್ವಗಳಾದ ಬೀಜಾಮೃತ, ಜೀವಾಮೃತ, ಬೆಳೆಗಳ ಹೊದಿಕೆ ಮತ್ತು ವಾಫಸಾ ಆಧಾರದಲ್ಲಿ ಸಸ್ಯಗಳಿಗೆ ಬೇಕಾಗುವ ಪೋಷಕಾಂಶಗಳನ್ನು ಪೂರೈಸುವ ಸೂಕ್ಷ್ಮಾಣು ಜೀವಿಗಳನ್ನು ಹಾಗೂ ನೈಸರ್ಗಿಕ ಎರೆಹುಳುಗಳ ಅಭಿವೃದ್ಧಿಗಾಗಿ ಹಲವು ಯೋಜನೆಗಳ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಸತ್ತಿಗೇರಿ ಗ್ರಾಮದ ಪ್ರಗತಿಪರ ರೈತ ವೀರನಗೌಡ ಸರನಾಡಗೌಡ್ರ ಮಾತನಾಡಿ, ರೈತರು ಕೃಷಿ ವ್ಯವಸ್ಥೆಯನ್ನು ರಸಾಯನಿಕಗಳಿಂದ ಮುಕ್ತಗೊಳಿಸಲು ಹಾಗೂ ವಿಷಮುಕ್ತ ಆಹಾರ ಉತ್ಪಾದಿಸಲು ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು. ಪ್ರವೀಣ ಯಡಹಳ್ಳಿ, ಶಂಕರಗೌಡ ಪಾಟೀಲ ಹಾಗೂ ವಿನೋದ ಕೋಚಿ ಸೇರಿ ತರಬೇತಿಯಲ್ಲಿ ವಿವಿಧ ತಾಲೂಕುಗಳ 45 ರೈತರು ಪಾಲ್ಗೊಂಡಿದ್ದರು. ಕೇಂದ್ರದ ವಿಜ್ಞಾನಿ ಡಾ.ಎಸ್.ಎಸ್. ಹಿರೇಮಠ ಸ್ವಾಗತಿಸಿದರು. ಜಿ.ಬಿ.ವಿಶ್ವನಾಥ ವಂದಿಸಿದರು.