ಜಿಲ್ಲೆ

ನೈರ್ಮಲ್ಯ ಸಾಧಿಸಲು ಸಾರ್ವಜನಿಕರು ಕೈಜೋಡಿಸಿ

ಬಳ್ಳಾರಿ : ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನರಲ್ಲಿ ನೈರ್ಮಲ್ಯ ಶುಚಿತ್ವ ಕುರಿತು ಅರಿವು ಮೂಡಿಸಲು ಜಿಲ್ಲಾದ್ಯಂತ ಸೆ. 14 ರಿಂದ ಅ. 01 ರ ವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಹೇಳಿದರು.
ನಗರದ ಜಿಪಂ ಕಚೇರಿಯ ಕಚೇರಿಯಲ್ಲಿ ಶುಕ್ರವಾರ ನಡೆದ ವಿಡೀಯೋ ಸಂವಾದದ ಮೂಲಕ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು. ಸ್ವಚ್ಛತೆಗಾಗಿ ಬೃಹತ್ ಪ್ರಮಾಣದಲ್ಲಿ ಸಾರ್ವಜನಿಕರ ಸಹಭಾಗಿತ್ವ ಮತ್ತು ಸಮುದಾಯದ ಭಾಗವಹಿಸುವಿಕೆಯು ಅಗತ್ಯವಾಗಿದೆ. ಪ್ರತಿ ವರ್ಷವು ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮವನ್ನು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರಗಳ ಸಚಿವಾಲಯವು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಈ ವರ್ಷ ಸ್ವಚ್ಛ ಭಾರತ ಅಭಿಯಾನದ 10 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಯೋಜನೆಯ ಸಾಧನೆಯ ಮೈಲಿಗಲ್ಲನ್ನು ಗೌರವಿಸಲು ಸ್ವಚ್ಛತಾ ಹೀ ಸೇವಾ ಅಭಿಯಾನವನ್ನು ಸೆ. 14 ರಿಂದ ಅ. 1 ರವರಗೆ ಸ್ವಭಾವ್ ಸ್ವಚ್ಛತಾ-ಸಂಸ್ಕಾರ್ ಸ್ವಚ್ಛತಾ ಎಂಬ ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ಬೃಹತ್ ಶ್ರಮದಾನ ಚಟುವಟಿಕೆಗಳ ಮೂಲಕ ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಲು ಕ್ರಮವಹಿಸಬೇಕು. ಜಲಮೂಲ, ರಸ್ತೆಗಳು, ರೈಲ್ವೆ ನಿಲ್ದಾಣ , ಕಸದ ರಾಶಿ, ನಾಲಾ ಸೇರಿ ಮುಂತಾದ ಸಮುದಾಯ ಸ್ವತ್ತುಗಳ ಮೇಲೆ ಕೇಂದ್ರಿಕರಿಸಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯ ಸ್ವಚ್ಛತೆಯ ಮೇಲೆ ಕೇಂದ್ರೀಕರಿಸುವ ಜನರ ಶ್ರಮದಾನದೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನಗಳನ್ನು ಆಯೋಜಿಸಬೇಕು ಎಂದು ನಿರ್ದೇಶಿಸಿದರು.
ಸ್ವಚ್ಛತಾ ಕಿ ಭಾಗಿದಾರಿ ಕಾರ್ಯಕ್ರಮದಡಿ ಪ್ರತಿ ತಾಲೂಕು ಮತ್ತು ಗ್ರಾಪಂ, ಗ್ರಾಮಗಳಲ್ಲಿ ಸ್ಪರ್ಧೆಗಳು, ವಾಕಾಥಾನ್, ಸಸಿ ನೆಡುವಿಕೆಯಂತಹ ತೋಟಗಾರಿಕಾ ಅಭಿಯಾನಗಳು ಸೇರಿ ಮುಂತಾದ ವಿವಿಧ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಲು ನಾಗರಿಕರು, ಸಮುದಾಯಗಳು ಮತ್ತು ಸಂಸ್ಥೆಗಳನ್ನು ವ್ಯಾಪಕವಾಗಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.