ಬ್ಯಾಡಗಿ: ನೀರು, ಭೂಮಿ, ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ ಹೇಳಿದರು.
ನೀರಿನ ಬಳಕೆ ಹಾಗೂ ಒಳಚರಂಡಿ ಅನುಕೂಲತೆಗಳ ಕುರಿತು ಹಡಪದ ಅಪ್ಪಣ್ಣ ಸಮಾಜ ಬಾಂಧವರಿಗೆ ಪುರಸಭೆ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ಪಟ್ಟಣದಲ್ಲಿ ಒಳಚರಂಡಿ, 247 ಕುಡಿಯುವ ನೀರು ಪೂರೈಕೆ ಯೋಜನೆ ಜಾರಿಯಲ್ಲಿದೆ. ಒಳಚರಂಡಿ ನಿರ್ವಣದಿಂದ ಚರಂಡಿಯಲ್ಲಿ ನೀರು ನಿಂತು ಸೊಳ್ಳೆ, ಕ್ರಿಮಿಕೀಟಗಳ ಕಾಟ ತಪ್ಪಲಿದೆ. ಆರೋಗ್ಯ ರಕ್ಷಣೆ ಸಾಧ್ಯವಾಗಲಿದೆ. 247 ನೀರು ವಿತರಣೆಗಾಗಿ ಮನೆಮನೆಗೂ ಮೀಟರ್ ಅಳವಡಿಸಿದ್ದು, ನಿಗದಿತ ದರ ಪ್ರಕಟಿಸಲಾಗಿದೆ. ಹಂತಹಂತವಾಗಿ 23 ವಾರ್ಡ್ಗಳಲ್ಲಿ ಈ ಯೋಜನೆ ಜಾರಿಗೊಳ್ಳಲಿದೆ. ಇದಕ್ಕಾಗಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ, ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ ವತಿಯಿಂದ 120 ಕೋಟಿ ರೂ. ಅನುದಾನ ಬಳಸಲಾಗಿದೆ ಎಂದರು.
ನವೋದಯ ಶಿಕ್ಷಣ ಮತ್ತು ಪರಿಸರ ಅಭಿವೃದ್ಧಿ ಸೇವಾ ಸಂಸ್ಥೆ ಮುಖ್ಯಸ್ಥ ಎಚ್.ಎಫ್. ಅಕ್ಕಿ ಮಾತನಾಡಿ, ಒಳಚರಂಡಿ ಹಾಗೂ ನೀರು ಪೂರೈಕೆ ಯೋಜನೆ ಯಶಸ್ವಿಯಾಗುವಲ್ಲಿ ನಾಗರಿಕರ ಪಾತ್ರ ಹಿರಿದಾಗಿದೆ. ಪುರಸಭೆ ಸಿಬ್ಬಂದಿ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಬೇಕು. ಗ್ರಾಹಕರಿಗೆ ದೂರು ಸಲ್ಲಿಸಲು ಗ್ರಾಹಕರ ಸೇವಾ ಕೇಂದ್ರ ತೆರೆಯಲಾಗಿದೆ. ಪ್ರತಿಯೊಬ್ಬರೂ ನಗರ ಸ್ವಚ್ಛತೆಗೆ ಸಹಕರಿಸಬೇಕು ಎಂದರು.
ತರಬೇತಿಯಲ್ಲಿ 60ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಹಡಪದ ಅಪ್ಪಣ್ಣ ಸಮಾಜದ ತಾಲೂಕಾಧ್ಯಕ್ಷ ದುಂಡೆಪ್ಪ ಕಾಯಕದ, ಪದಾಧಿಕಾರಿಗಳಾದ ಕರಿಬಸಪ್ಪ ಎಂ., ಬಿ.ಎ. ಲಕ್ಕಣ್ಣನವರ, ಎಸ್.ಎಚ್. ದೊಡ್ಡಮನಿ, ಬಸವರಾಜ ಹೊಸಳ್ಳಿ, ಉದಯ ಕಾಯಕದ, ಇಂಜಿನಿಯರ್ ಉಮೇಶ ಡಾವಣಗೇರಿ ಇತರರಿದ್ದರು.