ಜಿಲ್ಲೆ

ನೈರ್ಮಲ್ಯ ಕಾಪಾಡಲು ಸಹಕರಿಸಿ


ಯಾದಗಿರಿ: ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡುವುದು ಜನರ ಮೊದಲ ಆದ್ಯತೆಯಾಗಬೇಕು. ಪ್ರತಿನಿತ್ಯ ನಿಮ್ಮ ಮನೆಮುಂದೆ ಬರುವ ಸ್ವಚ್ಛತಾ ವಾಹಿನಿ ವಾಹನದಲ್ಲಿ ಹಸಿ ಮತ್ತು ಒಣಕಸ ಸಂಗ್ರಹಿಸಿ ಹಾಕಬೇಕು ಎಂದು ಜಿಪಂ ಸಿಇಒ ಗರೀಮಾ ಪನ್ವಾರ ಸಲಹೆ ನೀಡಿದರು.

ತಾಲೂಕಿನ ಅಲ್ಲಿಪುರ ಗ್ರಾಮಕ್ಕೆ ಶುಕ್ರವಾರ ಭೇಟಿ ನೀಡಿ, ಸ್ವಚ್ಛ ಸಂಕೀರ್ಣ ಘಟಕ ಪರಿಶೀಲಿಸಿದ ನಂತರ ಸಿಬ್ಬಂದಿ ಜತೆ ಚಚರ್ಿಸಿದ ಅವರು, ಮನೆ, ಅಂಗಡಿ, ಹೋಟೆಲ್, ಕಿರಾಣಿ, ಇತರೆ ವಾಣಿಜ್ಯ ಮಳಿಗೆಗಳ ಮೂಲಕ ಉತ್ಪಾದನೆಯಾಗುವ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿಕೊಂಡು ಬರಬೇಕು ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.

ಪಂಚಾಯಿತಿ ಸಿಬ್ದಂದಿ ಜವಾಬ್ದಾರಿ ಕೇವಲ ತ್ಯಾಜ್ಯ ಸಂಗ್ರಹಿಸಿಕೊಂಡು ಬರವುದಷ್ಟೇ ಅಲ್ಲ. ಪ್ರತಿದಿನ ಉತ್ಪಾದನೆಯಾಗುವ ತ್ಯಾಜ್ಯವನ್ನು ಕಡಿಮೆ ಮಾಡುವುದು, ಮರುಬಳಿಕೆ ಮಾಡುವುದು ಹಾಗೂ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು ತ್ಯಜ್ಯಿಸುವಂತೆ ಜನರಲ್ಲಿ ಅರಿವು ಮೂಡಿಸಿ, ಪರಿಸರ ಸ್ನೇಹಿ ಕೈ ಚೀಲಗಳನ್ನು ಬಳಕೆ ಮಾಡಲು ಉತ್ತೇಜಿಸಬೇಕು ಎಂದು ಕಿವಿಮಾತು ಹೇಳಿದರು.

ಬಳಕೆ ಮಾಡಿರುವ ಬಿಸಾಡುವ, ಬಾಟಲಿ, ಪ್ಲಾಸ್ಟಿಕ್ ಕವರ್, ಕುರುಕಲು ಪದಾರ್ಥಗಳ ಪಾಕೇಟ್ ಇತರೆ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡವುದರಿಂದ ಚರಂಡಿಯಲ್ಲು ಕಸ ಶೇಖರಣೆಯಾಗಿ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ಅಲ್ಲದೆ, ಇಂಥ ವಸ್ತುಗಳನ್ನು ಪ್ರಾಣಿ, ಪಕ್ಷಿಗಳು ತಿನ್ನುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಮನುಷ್ಯ ಮಾಡುವ ತಪ್ಪಿಗೆ ಪ್ರಾಣಿಗಳು ಬಲಿಯಾಗುತ್ತಿವೆ ಎಂದರು.

ದಿನ ಬಳಕೆಯ ವಸ್ತುಗಳನ್ನು ಸ್ವಚ್ಛವಾಹಿನಿಗೆ ವೈಜ್ಞಾನಿಕ ವಿಧಾನಗಳ ಮೂಲಕ ವಿಲೇವಾರಿ ಮಾಡುವುದರಿಂದ ಗ್ರಾಮದಲ್ಲಿನ ರಸ್ತೆಯ ಪಕ್ಕದಲ್ಲಿ, ರಸ್ತೆಯ ಕೂಡುವಿಕೆಯ ಸ್ಥಳದಲ್ಲಿ ಕಸದ ರಾಶಿ ಬೀಳದಂತೆ ಗ್ರಾಪಂ ಸದಸ್ಯರು, ಜನತೆ ಮತ್ತು ಸಿಬ್ಬಂದಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.