ಏಕಲವ್ಯ ಪ್ರಶಸ್ತಿ ವಿಜೇತ ಪಾಂಡವಪುರ ತಾಲೂಕಿನ ಬೇವಿನಕುಪ್ಪೆ ಗ್ರಾಮದ ಹರಿಪ್ರಸಾದ್ ಅವರನ್ನು ಶಾಸಕ ಸಿ.ಎಸ್.ಪುಟ್ಟರಾಜು ಸನ್ಮಾನಿಸಿದರು.  
ಜಿಲ್ಲೆ

ನೈರುತ್ಯ ರೈಲ್ವೆ ತಂಡಕ್ಕೆ ಪ್ರಥಮ ಸ್ಥಾನ

ಪಾಂಡವಪುರ: ತಾಲೂಕಿನ ಸೀತಾಪುರ ಗ್ರಾಮದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಆಹ್ವಾನಿತ ಪಂದ್ಯಾವಳಿಯಲ್ಲಿ ನೈರುತ್ಯ ರೈಲ್ವೆ, ಕ್ರೀಡಾ ಹಾಸ್ಟೆಲ್, ಭಾರತೀಯ ಜೀವ ವಿಮಾ ನಿಗಮ ಹಾಗೂ ಕರ್ನಾಟಕ ಪೊಲೀಸ್ ತಂಡಗಳು ಪ್ರಥಮ ಸ್ಥಾನಕ್ಕಾಗಿ ಸೆಣಸಾಡಿದವು.

ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ರಾಯಲ್ ಯೂತ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ಗ್ರಾಮದ ಹೊರವಲಯದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ರಾಷ್ಟೀಯ ತಂಡವನ್ನು ಪ್ರತಿನಿಧಿಸುವ ಆಟಗಾರರು ಸೇರಿದಂತೆ ಏಕಲವ್ಯ ಪ್ರಶಸ್ತಿ ಪುರಸ್ಕೃತರು ವಿವಿಧ ತಂಡಗಳ ಪರವಾಗಿ ತಮ್ಮ ಆಟ ಪ್ರದರ್ಶಿಸಿದರು.

ಪ್ರತಿ ಪಂದ್ಯಕ್ಕೂ (ಬೆಸ್ಟ್ ಆಫ್ ತ್ರಿ) ಮೂರು ಸುತ್ತುಗಳು ನಿಗದಿಯಾಗಿತ್ತು. ಮೊದಲ ಎರಡು ಸುತ್ತುಗಳಿಗೆ 25 ಅಂಕ ಹಾಗೂ ಮೂರನೇ ಸುತ್ತಿಗೆ 15 ಅಂಕ ನಿಗದಿ ಪಡಿಸಲಾಗಿತ್ತು. ಒಂದು ತಂಡ ಸತತ ಎರಡು ಸುತ್ತುಗಳಲ್ಲಿ ಗರಿಷ್ಠ ಅಂಕ ಪಡೆದ ತಂಡವನ್ನು ವಿಜೇತ ತಂಡ ಎಂದು ಘೋಷಿಸಲಾಯಿತು.

ನೈರುತ್ಯ ರೈಲ್ವೆಗೆ ಪ್ರಥಮ ಸ್ಥಾನ: ಮೊದಲ ಪಂದ್ಯದಿಂದಲೂ ಎಲ್ಲ ವಿಭಾಗಗಳಲ್ಲೂ ಉತ್ತಮವಾಗಿ ಆಟವಾಡಿದ ನೈರುತ್ಯ ರೈಲ್ವೆ ತಂಡ ಪ್ರಥಮ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಯಿತು. ಮೊದಲ ಪಂದ್ಯದಲ್ಲಿ ನೈರುತ್ಯ ರೈಲ್ವೆ ಮತ್ತು ಕ್ರೀಡಾ ಹಾಸ್ಟೇಲ್ ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ 25-20, 20-25, 15-13 ಅಂಕಗಳೊಂದಿಗೆ ನೈರುತ್ಯ ರೈಲ್ವೆ ಗೆಲುವು ಸಾಧಿಸಿತು. ಎರಡನೇ ಪಂದ್ಯದಲ್ಲಿ ಭಾರತೀಯ ಜೀವ ವಿಮಾ ನಿಗಮ ಮತ್ತು ಕರ್ನಾಟಕ ಪೊಲೀಸ್ ತಂಡಗಳು ಸೆಣಸಾಡಿ 25-12, 25-13 ಅಂಕಗಳೊಂದಿಗೆ ಎಲ್‌ಐಸಿ ತಂಡ ಗೆಲವಿನ ನಗೆ ಬೀರಿತು.

ಎಲ್‌ಐಸಿ ಮತ್ತು ಕರ್ನಾಟಕ ಪೊಲೀಸ್ ತಂಡದ ನಡುವೆ ನಡೆದ ಮೂರನೇ ಪಂದ್ಯದಲ್ಲಿ 25-24, 25-24 ಅಂಕಗಳೊಂದಿಗೆ ರೈಲ್ವೆ ತಂಡ ಗೆಲುವು ಸಾಧಿಸಿತು. ನಾಲ್ಕನೇ ಪಂದ್ಯದಲ್ಲಿ ಕರ್ನಾಟಕ ಪೊಲೀಸ್ ತಂಡ ಮತ್ತು ಕ್ರೀಡಾ ಹಾಸ್ಟೆಲ್ ತಂಡ ಸೆಣಸಾಡಿ 19-25, 21-25 ಅಂಕಗಳೊಂದಿಗೆ ಕ್ರೀಡಾ ಹಾಸ್ಟೆಲ್ ವಿಜೇತ ತಂಡವಾಗಿ ಹೊರಹೊಮ್ಮಿತು. ಐದನೇ ಪಂದ್ಯದಲ್ಲಿ ಎಲ್‌ಐಸಿ ಮತ್ತು ಕ್ರೀಡಾ ಹಾಸ್ಟೆಲ್ ತಂಡಗಳು ಮುಖಾಮುಖಿಯಾಗಿ 25-23, 25-18 ಅಂಕದಲ್ಲಿ ಎಲ್‌ಐಸಿ ತಂಡ ಗೆಲುವು ಪಡೆಯಿತು.

ಅಂತಿಮವಾಗಿ ಗರಿಷ್ಠ ಅಂಕಗಳೊಂದಿಗೆ ನೈರುತ್ಯ ರೈಲ್ವೆ ತಂಡ ಪ್ರಥಮ ಸ್ಥಾನ ಪಡೆದು 50 ಸಾವಿರ ರೂ. ನಗದು ಬಹುಮಾನ, ಎರಡನೇ ತಂಡವಾದ ಎಲ್‌ಐಸಿಗೆ 40 ಸಾವಿರ ರೂ., ಮೂರನೇ ತಂಡವಾದ ಕ್ರೀಡಾ ಹಾಸ್ಟೆಲ್ 30 ಸಾವಿರ ರೂ. ಹಾಗೂ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟ ಕರ್ನಾಟಕ ಪೊಲೀಸ್ ತಂಡ 20 ಸಾವಿರ ರೂ.ನಗದು ಬಹುಮಾನ ಪಡೆಯಿತು.

ತವರೂರಿನ ಸನ್ಮಾನ: ತಾಲೂಕಿನ ಬೇವಿನಕುಪ್ಪೆ ಗ್ರಾಮದ ಸುರೇಶ್ ಮತ್ತು ಮಮತಾ ಎಂಬುವರ ಪುತ್ರ ಹರಿಪ್ರಸಾದ್ ಅವರು ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ಮಾಡಿರುವ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಏಕಲವ್ಯ ಪ್ರಶಸ್ತಿ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ಅವರು ಕ್ರೀಡಾಭಿಮಾನಿಗಳೊಂದಿಗೆ ಹರಿಪ್ರಸಾದ್ ಅವರನ್ನು ಅಭಿನಂದಿಸಿದರು. ಹರಿಪ್ರಸಾದ್ ಅವರು ನೈರುತ್ಯ ತಂಡವನ್ನು ಪ್ರತಿನಿಧಿಸಿದ್ದರು.

ರಾಷ್ಟ್ರೀಯ ವಾಲಿಬಾಲ್ ತರಬೇತುದಾರರಾದ ಕೃಷ್ಣೇಗೌಡ, ಪಾಂಡಿಚೇರಿಯ ಬುಷ್ ಹಾಗೂ ಪರಮೇಶ್ ಅವರನ್ನು ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್, ಬಸವರಾಜು ಅವರು ಪಂದ್ಯಾವಳಿಯ ನಿರ್ವಹಣೆ ಜವಬ್ದಾರಿ ವಹಿಸಿದ್ದರು.

ಪಂದ್ಯಾವಳಿಯಲ್ಲಿ ಉಪವಿಭಾಗಾಧಿಕಾರಿ ನೋಂಗ್ಜಾಯ್ ಮಹಮದ್ ಅಲಿ ಅಕ್ರಮ್ ಶಾ, ಎಸ್‌ಟಿಸಿ ಶಿಕ್ಷಣ ಸಂಸ್ಥೆಯ ಸಿಇಒ ಸಿ.ಪಿ.ಶಿವರಾಜು, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಸಾಹಿತಿ ಜಯಲಕ್ಷ್ಮಿ ಸೀತಾಪುರ, ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚೆಲುವರಾಜು, ತಾಪಂ ಮಾಜಿ ಸದಸ್ಯ ನಿಂಗೇಗೌಡ ಇತರರು ಇದ್ದರು.