ಜಿಲ್ಲೆ

ನೈತಿಕತೆ ಇಲ್ಲದಿದ್ದರೆ ಒಳ-ಹೊರ ಬದುಕು ಶಿಥಿಲ

ಮೈಸೂರು: ನೈತಿಕತೆ ಇಲ್ಲದಾಗ ಒಳ-ಹೊರ ಬದುಕು ಶಿಥಿಲವಾಗುತ್ತದೆ ಎಂದು ಲೇಖಕ ತುಕಾರಾಂ ಕಳವಳ ವ್ಯಕ್ತಪಡಿಸಿದರು.

ನಿರಂತರ ಫೌಂಡೇಷನ್ ವತಿಯಿಂದ ಕಿರು ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸಹಜ ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಿರಂತರ ತಂಡವು ಕಾಲಕ್ಕೆ ಕನ್ನಡಿಯನ್ನು ಹಿಡಿಯುವ ಕಾರ್ಯ ಮಾಡುತ್ತಿದೆ. ಜನಗಣಮನ ನಾಟಕವು ಸಂವಿಧಾನವನ್ನು ಬದುಕಿನ ವಿಧಾನವಾಗಿ ರೂಪಿಸುವ ಪ್ರಯತ್ನವಾಗಿದೆ ಎಂದು ಅಭಿಪ್ರಾಯಪಟ್ಟರು.

ಡಾ.ಬಿ.ಆರ್.ಅಂಬೇಡ್ಕರ್ ತರಬೇತಿ, ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ಸಲಹೆಗಾರ ಬಸವರಾಜ ದೇವನೂರು ಮಾತನಾಡಿ, ಜಾತಿ ಸಮಸ್ಯೆಯ ಆತಂಕ ಗಾಢವಾಗಿರುವ ಈ ಕಾಲದಲ್ಲಿ ನಿರಂತರ ತಂಡವು ಜಾತಿ ಮತ್ತು ವ್ಯವಸ್ಥೆಗೆ ರಾಜಿಯಾಗದೆ ಬೆಳೆಯುತ್ತಿರುವುದು ಶ್ಲಾಘನೀಯ. ಇನ್ನಷ್ಟು ಜನಾಂಗೀಯ ಭಾವೈಕ್ಯತೆ ಬಿಂಬಿಸುವ ನಾಟಕಗಳನ್ನು ಸಮಾಜಕ್ಕೆ ನೀಡಬೇಕಾಗಿದೆ ಎಂದು ಹೇಳಿದರು.

ನಿರಂತರದ ರಂಗ ನಿರ್ದೇಶಕ ಎಂ.ಎಂ.ಸುಗುಣ ಮಾತನಾಡಿ, ರಂಗಭೂಮಿಗೆ ಭೂಮಿ ತೂಕದ ಶಕ್ತಿ ಇದೆ ಎಂಬ ಆಶಯದೊಂದಿಗೆ ಆರಂಭವಾದ ಸಹಜ ರಂಗ ಈ ಬಾರಿ ಸಂವಿಧಾನ ಮತ್ತು ಅದರ ಮೌಲ್ಯ ಎಂಬ ವಿಷಯವನ್ನು ಕೇಂದ್ರೀಕರಿಸಿತು.

ಶಿಕ್ಷಣ ಜಡವಾಗುತ್ತಿರುವ ಈ ಸಮಯದಲ್ಲಿ ಸಂವಿಧಾನವನ್ನು ಬದುಕಿನ ಅವಿಭಾಜ್ಯ ಅಂಗವಾಗಿ ನೋಡಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಶಿಬಿರಾರ್ಥಿಗಳಿಗೆ ವಿಶೇಷ ರಂಗರೂಪಕವನ್ನು ರೂಪಿಸಲಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ಸಹಜ ರಂಗ ಮತ್ತು ನಿರಂತರ ಎಂಬ ಹೆಸರೇ ರಂಗಭೂಮಿಯ ಧ್ಯೇಯ ಪ್ರತಿಬಿಂಬಿಸುತ್ತದೆ. ರಂಗಭೂಮಿಯ ಶಕ್ತಿ ಸಮಾಜಕ್ಕೆ ದಾರಿದೀಪವಾಗಬಲ್ಲದು ಎಂದು ಹೇಳಿದರು.

ತಮ್ಮ ಅನುಭವ ಹಂಚಿಕೊಂಡ ಶಿಬಿರಾರ್ಥಿಗಳು, ಹೊಸ ಮುಖಗಳ ಪರಿಚಯ, ಶಿಕ್ಷಕರ ಪ್ರೋತ್ಸಾಹ ಮತ್ತು ರಂಗಭೂಮಿಯ ಮೂಲಕ ಬೆಸೆಯುವ ಕಲೆಯು ನಮಗೆ ಸಿಕ್ಕಿದೆ. ಸಂವಿಧಾನವು ದಲಿತ ಸಮುದಾಯದ ಆತ್ಮಗೌರವ ಶತಮಾನಗಳಿಂದ ಬಲಪಡಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಪ್ರೊ. ಕೆ.ಸಿ. ಬಸವರಾಜ್, ಪ್ರೊ. ಕಾಳಚನ್ನೇಗೌಡ, ಪ್ರೊ. ಎಂ.ಕೆ.ಮಾಧವಿ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಅಪ್ಪಾಜಿಗೌಡ್ರು, ಪ್ರೊ.ಮಂಗಳಾ, ನಿರಂತರ ಫೌಂಡೇಷನ್‌ನ ಶ್ರೀನಿವಾಸ್, ಪ್ರಸಾದ್ ಕುಂದೂರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಬಳಿಕ ನಿರಂತರ ರಂಗತಂಡ ಅಭಿನಯಿಸಿದ ಜನಗಣಮನ ನಾಟಕ ಪ್ರದರ್ಶನವಾಯಿತು.