ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.
ಬಾಗಲಕೋಟೆಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ನಿಖಿಲ್, ಹಿಂದೆ ಬಿಎಸ್‌ವೈ ಮೇಲೆ ಆರೋಪ ಬಂದಾಗ ಇದೇ ಸಿದ್ದರಾಮಯ್ಯ ಅವರು ಅಂದು ಏನು ಹೇಳಿದ್ದರೆಂದು ಇಂದು ನನೆಪಿಸಿಕೊಳ್ಳಬೇಕು. ಕಾನೂನು ಹೋರಾಟದ ಶಕ್ತಿ ಎಲ್ಲರಿಗೂ ಇದೆ. ಆದರೆ, ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದರು.
ಸದ್ಯ ಸಿದ್ದರಾಮಯ್ಯ ಜೊತೆಗೆ ಇದ್ದರೂ ಮುಖ್ಯಮಂತ್ರಿ ಸ್ಥಾನಕ್ಕೆ ಅನೇಕರು ಟಾವಲ್ ಹಾಕಿ ಕೂತಿದ್ದಾರೆ. ಹೀಗಾಗಿ ಪಕ್ಷದ ಯಾವ ಯಾವ ನಾಯಕರ ಮನಸ್ಸಿನಲ್ಲಿ ಏನೇನೀದೆಯೋ ಎನ್ನುವುದನ್ನು ಸಿದ್ದರಾಮಯ್ಯ ಅವರೇ ಹೇಳಬೇಕಿದೆ. ಅವರ ಜೊತೆಗಿದ್ದವರಿಂದಲೇ ಸಿಎಂ ಸ್ಥಾನಕ್ಕೆ ಪೈಪೋಟಿ ಶುರುವಾಗಿರಬಹುದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.