ಜಿಲ್ಲೆ

ನೈತಿಕ ಸಂಸ್ಕಾರಯುತ ಶಿಕ್ಷಣ ಇಂದಿನ ಅಗತ್ಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ಆಧುನಿಕ ಜಗತ್ತಿನ ಭಾಷೆಯಲ್ಲಿ ಕೇವಲ ಪಾಶ್ಚಿಮಾತ್ಯ ಶಿಕ್ಷಣದ ಅನುಕರಣೆ ಮಾಡದೆ ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇಂದು ಹಿಂದಿಗಿಂತ ಹೆಚ್ಚಾಗಿದೆ ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಅಭಿಪ್ರಾಯಪಟ್ಟರು.
ನಗರದ ಜೆಎಸ್‌ಎಸ್ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರ ಸ್ವೀಕರಿಸಿ ಅವರು ಮಾತನಾಡಿದರು.
ಡಾ. ಡಿ. ವೀರೇಂದ್ರ ಹೆಗ್ಗಡೆ ಜನ್ಮದಿನ ಸಂದರ್ಭದಲ್ಲಿ ಅವರ ಆರೋಗ್ಯಕ್ಕಾಗಿ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ 1231 ವಿದ್ಯಾರ್ಥಿಗಳು, 63 ಸಿಬ್ಬಂದಿ 108 ಬಾರಿ ಧನ್ವಂತರಿ ಮಂತ್ರ ಪಠಿಸಿರುವುದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ಅವರಲ್ಲಿ ನೈತಿಕತೆ, ಇನ್ನೊಬ್ಬರ ಬಗ್ಗೆ ಕಾಳಜಿ ಬೆಳೆಯಲಿದೆ ಎಂದರು.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸನ ಪ್ರತಿನಿಧಿ ಗಿರೀಶ ಬಣವಿ ಮಾತನಾಡಿ, ಜೆಎಸ್‌ಎಸ್ ಸಂಸ್ಥೆ ನೈತಿಕ ನೆಲೆಗಟ್ಟಿನ ಮೇಲೆ ಭದ್ರವಾಗಿ ನಿಂತಿದೆ. ಮೊದಲ ಬಾರಿಗೆ ಆಂಗ್ಲ ಮಾಧ್ಯಮ ಶಾಲೆ ಮಕ್ಕಳು ಸಂಸ್ಕೃತದಲ್ಲಿ ಧನ್ವಂತರಿ ಮಂತ್ರ ಪಠಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳಿಂದ ಮೊಬೈಲ್ ದಾಸರಾಗುತ್ತಿರುವ ಮಕ್ಕಳನ್ನು ಸರಿದಾರಿಗೆ ತರಬಹುದು ಎಂದರು.
ಅನಿಕೇತ ಬಣವಿ, ಪ್ರಾಚಾರ್ಯೆ ಉಷಾ ಸಂತೋಷ, ಮಹಾವೀರ ಉಪಾಧ್ಯೆ, ನಿರ್ಮಲಾ ಪಾಟೀಲ, ಸಾವಿತ್ರಿ ದತಾಡೆ, ಭಾರತಿ ನೀರಲಕಟ್ಟಿ, ವಿದ್ಯಾರ್ಥಿಗಳು, ಇತರರು ಇದ್ದರು.