ಜಿಲ್ಲೆ

ನೈಜ ವರದಿಗೆ ಪ್ರಾಮುಖ್ಯ ನೀಡಲಿ

ಚಿಕ್ಕೋಡಿ: ಸಮಾಜದ ಓರೆ ಕೋರೆ ತಿದ್ದುವ ಪತ್ರಕರ್ತರು ಸತ್ಯ ಪರಾಮರ್ಶಿಸಿ ವರದಿ ಮಾಡಬೇಕು ಎಂದು ಚಿಕ್ಕೋಡಿ ಸಿಪಿಐ ವಿಶ್ವನಾಥ ಚೌಗಲಾ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಚಿಕ್ಕೋಡಿ ಪತ್ರಕರ್ತರ ಬಳಗದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಹಿತಿ ಕೊರತೆಯಿಂದ ಓದುಗರಿಗೆ ನ್ಯಾಯ ಕೊಡಲು ಸಾಧ್ಯವಿಲ್ಲ. ಹಾಗಾಗಿ ಪತ್ರಕರ್ತರು ಸಮಗ್ರ ಮಾಹಿತಿ ವಿಷಯ ಕಲೆ ಹಾಕಿ ವರದಿ ಮಾಡಬೇಕು. ಸಮಾಜ ತಿದ್ದುವ ಜವಾಬ್ದಾರಿ ಪತ್ರಕರ್ತರ ಮೇಲಿದೆ ಎಂದರು.

ತಹಸೀಲ್ದಾರ್ ಚಿದಂಬರ ಕುಲಕರ್ಣಿ ಮಾತನಾಡಿ, ತಾಲೂಕು ಪತ್ರಕರ್ತರ ಕಚೇರಿಗಾಗಿ ನಿವೇಶನ ನೀಡಲು ಇಲಾಖೆ ಬದ್ಧವಾಗಿದೆ. ಪತ್ರಕರ್ತರ ಸಮಸ್ಯೆ ನಿವಾರಣೆಗೆ ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಕೆಎಲ್‌ಇ ಸಂಸ್ಥೆಯ ಬಿ.ಕೆ. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಸದಾಶಿವ ಹಾದಿಮನಿ ಮಾತನಾಡಿ, ಸಾಮಾಜಿಕ ಮಾಧ್ಯಮಗಳ ಹಾವಳಿಯಿಂದ ನೈಜ ಪತ್ರಿಕೋದ್ಯಮಕ್ಕೆ ಪೆಟ್ಟು ಬೀಳುತ್ತಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ನೈಜ ಪತ್ರಿಕೋದ್ಯಮ ಪ್ರೋತ್ಸಾಹಿಸಬೇಕು. ಯೂಟ್ಯೂಬ್ ವರದಿಗಾರಿಕೆ ಸಮಾಜಕ್ಕೆ ಮಾರಕವಾಗಿದೆ ಎಂದು ಹೇಳಿದರು.

ಚಿಕ್ಕೋಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಂದ್ರ ಕೋಳಿ, ವಿಡಿಯೋ ಜರ್ನಲಿಸ್ಟ್ ಸಂಘದ ಅಧ್ಯಕ್ಷ ಸಿದ್ದೇಶ ಪುಠಾಣಿ, ಪ್ರೆಸ್‌ಕ್ಲಬ್ ಅಧ್ಯಕ್ಷ ರಾಜು ಸಂಕೇಶ್ವರಿ, ವರದಿಗಾರರಾದ ಸುಭಾಷ ದಲಾಲ, ವಿರುಪಾಕ್ಷಿ ಕವಟಗಿ, ಸಂತೋಷ ಕಾಮತ, ಅಜಿತ್ ಸಣ್ಣಕ್ಕಿ, ಸಂಜು ಅರಬಾಂವಿ, ಸಂಜು ಕವಲಗಿ, ಮಹಾದೇವ ಪೂಜಾರಿ ಇತರರಿದ್ದರು. ಸಂಜೀವ ಕಾಂಬಳೆ ಸ್ವಾಗತಿಸಿದರು. ಚಂದ್ರಶೇಖರ ಚಿನಕೇಕರ ನಿರೂಪಿಸಿದರು.