ಜಿಲ್ಲೆ

ನೈಜ ಪತ್ರಿಕೋದ್ಯಮ ಉಳಿಸುವ ಕಾರ್ಯವಾಗಲಿ

ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಪ್ರಸಾರವಾಗುವ ಸುದ್ದಿ ಮಾದ್ಯಮಗಳು ನೈಜತೆಗೆ ಹೆಚ್ಚು ಒತ್ತು ಕೊಟ್ಟು ಉಳಿಸಿ, ಬೆಳೆಸುವ ಕಾರ್ಯವಾಗಬೇಕು ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.

ನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಹಿರಿಯ ಪತ್ರಕರ್ತರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತು ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಮಾದ್ಯಮ ವೇಗವಾಗಿ ಬೆಳೆಯುತ್ತಿದೆ. ಸ್ವಾತಂತ್ರ ಪೂರ್ವದಲ್ಲಿರುವ ಪತ್ರಿಕೆಯ ನೈತಿಕೆ ನಂತರದ ಪತ್ರಿಕೆಯ ವೃತ್ತಿಯಲ್ಲಿ ಕಂಡುಬರುತ್ತಿಲ್ಲ. ದಿನಂಪ್ರತಿ ಪತ್ರಿಕೆಗಳು, ಯುಟೂಪ್ ಚಾನೆಲ್‍ಗಳು, ಫಸ್‍ಬುಕ್ ಚಾನಲ್‍ಗಳು ಹುಟ್ಟುಕೊಳ್ಳುತ್ತಿವೆ. ಸಾಮಾಜಿಕ ಬದ್ದತೆ ಉಳಿಯುತ್ತಿಲ್ಲ, ಪತ್ರಿಕೆಗಳು ಮಹತ್ವ ಮೌಲ್ಯ ಕಳೆದುಕೊಳ್ಳುವಂತಹ ಪರಿಸ್ಥಿತಿ ಉಂಟಾಗುತ್ತಿದ್ದು, ಪತ್ರಿಕಾ ಧರ್ಮದಲ್ಲಿ ಪ್ರಮಾಣಿಕತೆ, ನೈಜತೆ ಹೆಚ್ಚಿಸುವ ಕಾರ್ಯವಾಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕಾ ಸಂಘಟನೆಗಳು ನೈಜಿಕತೆಯ ಬಗ್ಗೆ ವರದಿ ಕಳುಹಿಸಿದಲ್ಲಿ ನೈತಿಕತೆ ಕಾಪಾಡಲು ಸಾಧ್ಯವೆಂದರು.

ಮಾದ್ಯಮವನ್ನು ಕಂಪನಿಗಳು ನಡೆಸುವ ವಾತಾವರಣವನ್ನು ಬಿಟ್ಟು ಹೊರ ಬಂದು ಸಂಘಟೆಗಳು ನಡೆಸಿಕೊಂಡು ಹೋಗುವ ಕಾರ್ಯವಾಗಬೇಕಿದೆ. ಮಾಲಿಕನ ಸಂಬಳಕ್ಕೆ ದುಡಿಯುವ ಕೆಲಸವಾಗಬಾರದು. ಮಾದ್ಯಮದ ಮೌಲ್ಯ ಉಳಿಸಿಮ ಬೆಳೆಸುವ ಕಾರ್ಯವಾಗಬೇಕಿದೆ. ಇದಕ್ಕೆ ಪರಿಹಾರ ಮತ್ತು ಸರಕಾರದ ಪಾತ್ರದ ಬಗ್ಗೆ ಚರ್ಚೆಗಳಾಗಬೇಕು. ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು ವಿನಃ ವ್ಯವಹಾರದ ದೃಷ್ಠಿಯಿಂದಾಗಬಾರದು. ಅಂದಾಗ ಮಾತ್ರ ಅಸ್ಥಿತ್ವ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮಾತನಾಡಿ ಪತ್ರಿಕೆಗಳು ಔಪಚಾರಿಕವಾಗಿರಬಾರದು. ಒಬ್ಬ ಮಾಲಿಕ ನಡೆಸುವ ಪತ್ರಿಕೆಯಲ್ಲಿ ದೋಷತೆಯಿಂದ ಕಾರ್ಯಮಾಡಬೇಕೆಂಬ ಪತ್ರಕರ್ತನಿಗೆ ನೇರ ದಿಟ್ಟ ವರದಿ ಮಾಡಲಾಗುವದಿಲ್ಲ. ಇಂತವುಗಳಿಗೆ ಕಡಿವಾಣ ಹಾಕಬೇಕಿದೆ. ನೈಜ, ನೇರ ಪತ್ರಿಕಾ ಕಾರ್ಯ ನಿರಂತರ ನಡೆಯಬೇಕಾದರೆ ತಾಲೂಕಾ, ಜಿಲ್ಲಾ, ರಾಜ್ಯ ಮಟ್ಟದ ಪತ್ರಕರ್ತರ ಸಂಘಟನೆಗಳು ನೀವೆ ನಿರ್ಣಯ ತೆಗೆದುಕೊಳ್ಳಬೇಕು. ಇದು ಪತ್ರಿಕಾ ಧರ್ಮದ ಆತ್ಮಾವಲೋಕನ ಮಾಡಿಕೊಳ್ಳುವಂತಾಗುವುದು ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾದ್ಯಕ್ಷ ಶಿವಾನಂದ ತಗಡೂರ ತಮ್ಮ ಆಶಯ ನುಡಿಯಲ್ಲಿ ಪತ್ರಿಕೆ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ಪತ್ರಿಕಾ ವೃತ್ತಿಯಲ್ಲಿ ನಮ್ಮ ನಡೆ, ನುಡಿ ಬದಲಾಗಿ ನೈಜತೆ, ಬದ್ದತೆಯಂದ ಪಾರದರ್ಶಕವಾಗಿ ದುಡಿಯುತ್ತಿದ್ದೇವೆ. ವೃತ್ತಿಯ ಪ್ರಾವಿತ್ರತೆ ಕಾಪಾಡಿಕೊಳ್ಳಬೇಕಿದೆ. ಅಶಕ್ತರ ನೋವು, ನೊಂದವರ ಧ್ವನಿಯಾಗಿ ಕೆಲಸ ಮಾಡಲು ಸಾಧ್ಯವಿಲ್ಲವೋ ಅವರು ಪತ್ರಕರ್ತರಾಗಲು ಸಾದ್ಯವಿಲ್ಲ. ಪತ್ರಿಕೋದ್ಯಮ ಪವಿತ್ರವಾಗಿರಬೇಕು. ಅಂಬೇಡ್ಕರ ಸಹ ಪತ್ರಕರ್ತರಾಗಿ 5 ಪತ್ರಿಕೆಯ ಸಂಪಾದಕರಾಗಿದ್ದರು ಎಂಬ ವಿಷಯವನ್ನು ತಿಳಿಸಿ ಸತ್ಯಕ್ಕೆ ಹತ್ತಿರವಾದ ಸುದ್ದಿ ಮಾಡಿ ಜನರಲ್ಲಿ ವಿಶ್ವಾಸ ಮೂಡುವ ರೀತಿಯಲಿ ಕೆಲಸ ಮಾಡಲು ತಿಳಿಸಿದರು.

ಶಾಸಕ ಎಚ್.ವಾಯ್.ಮೇಟಿ ಪತ್ರಕರ್ತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು. ಪ್ರತಿ ವರ್ಷ ಪ್ರಶಸ್ತಿ ನೀಡುತ್ತಿರುವ ಕುರಿತು ಹಿರಿಯ ಪತ್ರಕರ್ತ ಈಶ್ವರ ಶೆಟ್ಟರ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಶಶಿಧರ ಕುರೇರ, ಕಾನಿ.ಪ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಕಾನಿಪದ ರಾಜ್ಯ ಉಪಾಧ್ಯಕ್ಷರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಪುಂಡಲೀಕ ಬಾಳೋಜಿ, ಕಾನಿಪದ ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶ ಅಂಗಡಿ, ಜಿಲ್ಲಾ ವಾರ್ತಾಧಿಕಾರಿ ಕಸ್ತೂರಿ ಪಾಟೀಲ, ಜಿಲ್ಲಾ ಕಾನಿಪದ ಅಧ್ಯಕ್ಷ ಆನಂದ ದಲಭಂಜನ, ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಜಿಲ್ಲಾ ಕಾನಿಪದ ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ ಸ್ವಾಗತಿಸಿದರು. ಬಾಳಕ್ಕನವರ ನಿರೂಪಿಸಿದರು.