ಚಡಚಣ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆ ಖಂಡಿಸಿ ಹಾಗೂ ಆರೋಪಿಗೆ ಉಗ್ರಶಿಕ್ಷೆ ಆಗಬೇಕು ಎಂದು ಆಗ್ರಹಿಸಿ ಸ್ಥಳೀಯ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶನಿವಾರ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಸಿ ರಾಜ್ಯ ಹೆದ್ದಾರಿ 41ರಲ್ಲಿ ರಸ್ತೆ ತಡೆ ನಡೆಸಿದರು.
ಸ್ಥಳೀಯ ಸಂಗಮೇಶ್ವರ ಕಾಲೇಜಿನಿಂದ ಹೊರಟ ಬೃಹತ್ ಪ್ರತಿಭಟನಾ ರ‌್ಯಾಲಿಯು ಬಸವೇಶ್ವರ ವೃತ ತಲುಪಿ, ರಾಜ್ಯ ಹೆದ್ದಾರಿ 41ರಲ್ಲಿ ರಸ್ತೆ ತಡೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಹಾಗೂ ಆರೋಪಿ ಯಾಜ್‌ನನ್ನು ಎನ್‌ಕೌಂಟರ್ ಮಾಡುವಂತೆ ವಿದ್ಯಾರ್ಥಿಗಳು ಘೋಷಣೆ ಕೂಗಿದರು.
ಎಬಿವಿಪಿ ಮುಖಂಡ- ಪ.ಪಂ. ಸದಸ್ಯ ಚೇತನ ನಿರಾಳೆ ಅವರು ಮಾತನಾಡಿ, ಒಬ್ಬ ಹೆಣ್ಣು ಮಗಳನ್ನು ಬರ್ಬರ ಹತ್ಯೆಗೈದಿರುವುದು ನಾಗರಿಕ ಸಮಾಜ ನಾಚಿಕೆ ಪಡುವಂತಹ ಸಂಗತಿಯಾಗಿದೆ. ನೇಹಾಳ ಹತ್ಯೆ ಮಾನವೀಯತೆ, ಮನುಷ್ಯತ್ವ ಇಲ್ಲದ ರಾಕ್ಷಸಿ ಮನಸ್ಥಿತಿ ಉಳ್ಳವರು ಮಾಡುವ ಅತ್ಯಂತ ಹೀನ ಕೃತ್ಯವಾಗಿದೆ. ಧರ್ಮಾತೀತವಾಗಿ ಹಾಗೂ ಜಾತ್ಯತೀತವಾಗಿ ಎಲ್ಲರೂ ಖಂಡಿಸಲೇಬೇಕಾದ ಘಟನೆ ಇದಾಗಿದೆ ಎಂದು ಅವರು ಹೇಳಿದರು.
ಮುಖಂಡ ಚೇತನ ಮಠ ಮಾತನಾಡಿ, ಇಂತಹ ಪರಿಸ್ಥಿತಿಯಲ್ಲಿ ಸೌದಿ ರಾಷ್ಟ್ರಗಳಲ್ಲಿ ಇರುವಂತೆ ಕಠಿಣ ಶಿಕ್ಷೆ ನೀಡುವ ಕಾನೂನು ನಮ್ಮ ದೇಶದಲ್ಲಿ ಅವಶ್ಯಕವಾಗಿದೆ. ಅಂತಹ ಕಾನೂನು ರೂಪಿಸುವ ಇಚ್ಛಾಶಕ್ತಿ, ಧೈರ್ಯ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲ. ರಾಜಕೀಯದ ಲಾಭ-ನಷ್ಠದ ಲೆಕ್ಕಾಚಾರ ಹೊಂದಿರುವ ಅವರಿಂದ ಕಠಿಣ ಕಾನೂನು ನಿರೀಕ್ಷೆ ಮಾಡುವುದು ನಮ್ಮ ಭ್ರಮೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಬಹುಮುಖ್ಯವಾಗಿ ಸ್ಥಳೀಯ ಮುಸ್ಲಿಂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ನಂತರ ತಹಸೀಲ್ದಾರ್ ರಾಜೇಶ ಬುರ್ಲಿ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿದರು.
ವಿದ್ಯಾರ್ಥಿಗಳ ರಸ್ತೆ ತಡೆಯಿಂದಾಗಿ ರಾಜ್ಯ ಹೆದ್ದಾರಿ 41ರಲ್ಲಿ ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ವಾಹನ ಸವಾರರು ಪರದಾಡಬೇಕಾಯಿತು. ಪ್ರೊಬೇಷನರಿ ಎಸ್‌ಪಿ ಕುಮಾರಿ ಶಾಲು ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.