ತರೀಕೆರೆ: ನೇರಲಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2024-25ನೇ ಸಾಲಿನಲ್ಲಿ 8.67 ಲಕ್ಷ ರೂ. ಲಾಭ ಗಳಿಸಿದೆ ಎಂದು ಅಧ್ಯಕ್ಷ ಎಚ್.ಆರ್.ಜಗದೀಶ್ ತಿಳಿಸಿದರು.
ನೇರಲಕೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಬುಧವಾರ ಏರ್ಪಡಿಸಿದ್ದ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. 1976ರಲ್ಲಿ ಸ್ಥಾಪನೆಯಾದ ಪಿಎಸಿಎಸ್ 1,400 ಷೇರುದಾರರನ್ನು ಹೊಂದಿದೆ. ಸದಸ್ಯತ್ವದ ಷೇರು ಬಂಡವಾಳ 95 ಲಕ್ಷ ರೂ. ಸಂಗ್ರಹಿಸಲಾಗಿದ್ದು, ಈವರೆಗೆ 8 ಕೋಟಿ ಕೆಸಿಸಿ ಬೆಳೆ ಸಾಲ 495 ರೈತರಿಗೆ ನೀಡಿದೆ. ಮುಂದಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ, ಕೃಷಿ ಪರಿಕರ ಮಾರಾಟ ಮಾಡಲು ಯೋಜನೆ ರೂಪಿಸಲಾಗುವುದು ಎಂದರು.
ನಿರ್ದೇಶಕ ಕೆ.ಆರ್.ಆನಂದಪ್ಪ ಮಾತನಾಡಿ, ನೇರಲಕೆರೆ ಪಿಎಸಿಎಸ್ ಎಲ್ಲರ ಸಹಕಾರದಿಂದ ಪ್ರಗತಿಯತ್ತ ದಾಪುಗಾಲಿಟ್ಟಿದೆ. ಸಂಘದಲ್ಲಿ ಮುಂದೆ ಚಿನ್ನದ ಅಡಮಾನ ಸಾಲ, ಗೊಬ್ಬರ ಇತರ ಸಾಲ ನೀಡುವ ಗುರಿ ಹೊಂದಲಾಗಿದೆ. ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿ ಸಂಘದ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಷೇರುದಾರರ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು. ಶಿವಮೊಗ್ಗ ಐದೃಷ್ಟಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 180 ರೈತರು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು.
ಉಪಾಧ್ಯಕ್ಷ ಕೆ.ಎಸ್.ಮಹೇಶ್ವರಪ್ಪ, ನಿರ್ದೇಶಕರಾದ ಎ.ಆರ್.ರವಿಕುಮಾರ್, ಆರ್.ರಾಜಶೇಖರಪ್ಪ, ದಿನೇಶಕುಮಾರ್, ಕೆ.ಆರ್.ಮೋಹನ್‌ಕುಮಾರ್, ತ್ರಿವೇಣಿ, ಸಾವಿತ್ರಮ್ಮ, ಶಂಕರಪ್ಪ, ರಾಜಕುಮಾರ್, ಶಿವಯ್ಯ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಸ್.ವೆಂಕಟೇಶ್, ಸಿಇಒ ಎ.ಎನ್.ಆದರ್ಶ್, ಸಿಬ್ಬಂದಿ ಡಿ.ವಿ.ಗಿರೀಶ್, ಎನ್.ಆರ್.ಮನುಕುಮಾರ್ ಇತರರಿದ್ದರು.