ಜಿಲ್ಲೆ

ನೇಮಕಾತಿಯಲ್ಲಿ ರೋಸ್ಟರ್ ನಿಯಮ ಸಡಿಲಿಸಿ

ಚಿತ್ರದುರ್ಗ: ಪೌರಕಾರ್ಮಿಕರ ನೇಮಕಾತಿಗೆ ನಿಗದಿಪಡಿಸಿರುವ ಮೀಸಲಾತಿ, ರೋಸ್ಟರ್ ನಿಯಮ ಸಡಿಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ ಹೇಳಿದರು.

ನಗರಸಭೆಯಿಂದ ಅಂಬೇಡ್ಕರ್ ಕಲ್ಯಾಣ ಮಂಟಪ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೌರಕಾರ್ಮಿಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಪೌರಕಾರ್ಮಿಕ ಕೆಲಸ ಶೇ 99ರಷ್ಟು ಪರಿಶಿಷ್ಟ ಜಾತಿ ಜನರೇ ಮಾಡುತ್ತಾರೆ. ಎಸ್ಸಿಯಲ್ಲೂ ಅತಿ ಹಿಂದುಳಿದವರು ಮಾತ್ರ ಹೆಚ್ಚಾಗಿ ಈ ವೃತ್ತಿ ಆಯ್ದುಕೊಳ್ಳುತ್ತಾರೆ. ಹೀಗಾಗಿ ನೇಮಕಾತಿಯಲ್ಲಿ ಜಾತಿ, ಮಹಿಳಾ ಮತ್ತು ಅಂಗವಿಕಲರ ಆಧಾರಿತ ಮೀಸಲಾತಿ ಹಾಗೂ ರೋಸ್ಟರ್ ನಿಯಮ ಅನ್ವಯಿಸುವುದರಿಂದ ಬಹಳಷ್ಟು ಹುದ್ದೆಗಳು ಭರ್ತಿಯಾಗದೆ ಉಳಿಯುತ್ತ್ತಿವೆ. ನಗರಗಳಲ್ಲಿ ಪೌರಕಾರ್ಮಿಕ ಸಮಸ್ಯೆ ತಲೆದೋರುತ್ತಿವೆ ಎಂದು ಬೇಸರಿಸಿದರು.

ಈಗಾಗಲೇ ನೇರ ಪಾವತಿಯಡಿ ಕಾರ್ಯನಿರ್ವಸುತ್ತಿರುವ ಪೌರಕಾರ್ಮಿಕರನ್ನೂ ಕಾಯಂ ಮಾಡಿಕೊಳ್ಳಲು ಅಡಚಣೆ ಉಂಟಾಗುತ್ತಿದೆ. ಆಗುತ್ತಿರುವ ತೊಂದರೆಗಳ ಕುರಿತು ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಂದ ವರದಿ ಪಡೆದು, ಸೆ. 27ರಂದು ಬೀದರ್‌ನಲ್ಲಿ ನಡೆಯಲಿರುವ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು.

ಪೌರಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವುದು ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಅಲ್ಲದೆ, ಸ್ವಚ್ಛತೆ ಹಾಗೂ ಜನರ ಆರೋಗ್ಯ ರಕ್ಷಣೆ ನಗರಸಭೆಯ ಆದ್ಯ ಕರ್ತವ್ಯ ಎಂದು ಹೇಳಿದರು.

ಪೌರಕಾರ್ಮಿಕರ ಹೋರಾಟದ ಫಲವಾಗಿ ಸರ್ಕಾರದಿಂದಲೇ ವೇತನ ನೀಡಲಾಗುತ್ತಿದೆ. ಇದರ ಜೊತೆಗೆ ಪೌರಕಾರ್ಮಿಕರಿಗೆ ನಗರಸಭೆಯ ಶೇ 24.5 ಯೋಜನೆಯಡಿ ಜಮೀನು ಖರೀದಿಸಿ ನಿವೇಶನಗಳನ್ನು ಹಂಚುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಪೌರಕಾರ್ಮಿಕರು ಜಗದ ಕೊಳೆ ತೊಳೆಯುವ ಜಲಗಾರರು. ಇಂತಹ ಪೌರಕಾರ್ಮಿಕರ ಮಕ್ಕಳು ಉತ್ತಮ ವಿದ್ಯಾಭ್ಯಾಸ ಹೊಂದಿ ಉನ್ನತ ಹುದ್ದೆಗಳಿಗೆ ಏರುವಂತಾಗಬೇಕು ಎಂದು ಸಲಹೆ ನೀಡಿದರು.

ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ನೇರ ಪಾವತಿಯಡಿ ಪೌರಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಅವರಿಗೆ ಎಲ್ಲ ರೀತಿಯ ಸುರಕ್ಷಾ ಪರಿಕರಗಳನ್ನು ನೀಡಬೇಕು. ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸಬೇಕು. ಉತ್ತಮ ಗುಣಮಟ್ಟದ ಆಹಾರ ವಿತರಿಸಬೇಕು ಎಂದು ಸೂಚಿಸಿದರು.

ಪೌರಕಾರ್ಮಿಕರಿಗೆ ವಸತಿ ಸೌಲಭ್ಯದ ಅಗತ್ಯವಿದೆ. ಹೀಗಾಗಿ ಗೃಹಭಾಗ್ಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಸೂಕ್ತ ಜಾಗ ಮಂಜೂರು ಮಾಡಲಾಗುವುದು ಎಂದು ಎಡಿಸಿ ಭರವಸೆ ನೀಡಿದರು.

ಪೌರಕಾರ್ಮಿಕರನ್ನು ಗೌರವದಿಂದ ಕಾಣಿ: ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, ಸಾರ್ವಜನಿಕರು ಪೌರಕಾರ್ಮಿಕರನ್ನು ಗೌರವದಿಂದ ಕಾಣಬೇಕು. ಸ್ವಚ್ಛತೆಗಾಗಿ ದುಡಿಯುವ ಅವರಿಗೆ ಸರ್ಕಾರದಿಂದ ನೆರವು, ಸೌಲಭ್ಯ ನೀಡಲಾಗುತ್ತಿದೆ ಎಂದು ತಿಳಿಸಿದರು. ವೇತನದ ಜೊತೆಗೆ 2ಸಾವಿರ ರೂ. ಸಂಕಷ್ಟ ಭತ್ಯೆ, ಭಾನುವಾರವೂ ಕೆಲಸ ನಿರ್ವಹಿಸುವುದರಿಂದ ವಾರ್ಷಿಕ 21 ದಿನಗಳ ವಿಶೇಷ ಭತ್ಯೆ, ಪೌರಕಾರ್ಮಿಕ ದಿನಾಚರಣೆ ಅಂಗವಾಗಿ 7ಸಾವಿರ ರೂ. ಪ್ರೋತ್ಸಾಹಧನ ವಿತರಿಸಲಾಗುತ್ತಿದೆ. ಪೌರಕಾರ್ಮಿಕ ಗೃಹ ಭಾಗ್ಯ ಯೋಜನೆಯಡಿ 90 ಮನೆಗಳನ್ನು ನಿರ್ಮಿಸಲು ನಿವೇಶನಗಳನ್ನು ನೀಡಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಪೌರಕಾರ್ಮಿಕರ ಸಂಘದ ಅಧ್ಯಕ್ಷ ದುರ್ಗೇಶ್ ಮಾತನಾಡಿ, ಚಿತ್ರದುರ್ಗ ನಗರದಲ್ಲಿ 2 ಲಕ್ಷ ಜನಸಂಖ್ಯೆ ಇದ್ದು, ಅದಕ್ಕೆ ಅನುಗುಣವಾಗಿ ಪೌರಕಾರ್ಮಿಕರ ನೇಮಕಾತಿ ಮಾಡಿಕೊಳ್ಳಬೇಕು. ಕಸ ಸಂಗ್ರಹಣೆ ವಾಹನಗಳ ಸಿಬ್ಬಂದಿ ಕೊರತೆ ನೀಗಿಸಬೇಕು. ಮುಂದಿನ ಒಂದು ವರ್ಷದೊಳಗೆ ಪೌರಕಾರ್ಮಿಕರಿಗೆ ನಿವೇಶನ ಹಂಚುವ ಕೆಲಸವಾಗಬೇಕು ಎಂದು ಒತ್ತಾಯಿಸಿದರು.

ಪೌರಕಾರ್ಮಿಕರಾದ ಎನ್.ಜಯಣ್ಣ, ದೇವೇಂದ್ರಪ್ಪ, ನಾಗೇಂದ್ರಪ್ಪ, ಇಸಾಕ್, ದುರ್ಗೇಶಪ್ಪ, ಆರೋಗ್ಯ ಇಲಾಖೆ ಶುಶ್ರೂಷಕ ಮಲ್ಲಣ್ಣ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಪೌರಕಾರ್ಮಿಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತಾ ರಘು, ಉಪಾಧ್ಯಕ್ಷೆ ಜಿ.ಎಸ್.ಶ್ರೀದೇವಿ, ಸದಸ್ಯರಾದ ಎಚ್.ಶ್ರೀನಿವಾಸ, ಭಾಗ್ಯಮ್ಮ, ಅನುರಾಧಾ, ತಾರಕೇಶ್ವರಿ, ನಸರುಲ್ಲಾ, ಕೆ.ಬಿ.ಸುರೇಶ್, ಶಬ್ಬೀರ್ ಅಹಮದ್, ರಮೇಶಾಚಾರ್, ಹರೀಶ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್, ಪೌರಾಯುಕ್ತೆ ಎಂ.ರೇಣುಕಾ ಇತರರಿದ್ದರು.