ರಾಯಚೂರಿನ ವೇದಾಂತ ಕಾಲೇಜಿನಲ್ಲಿ ಶನಿವಾರ ನಡೆಸಲಾದ ನೇಮಕಾತಿ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಪರೀಕ್ಷಾರ್ಥಿಗಳು ಕೊಠಡಿ ಮೇಲ್ವಿಚಾರಕರೊಂದಿಗೆ ವಾಗ್ವಾದ ನಡೆಸಿದರು. 
ಜಿಲ್ಲೆ

ನೇಮಕಾತಿ ಪರೀಕ್ಷೆಯಲ್ಲಿ ಗೋಲ್‌ಮಾಲ್

ರಾಯಚೂರು: ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳ ಒಕ್ಕೂಟ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಗರದ ವೇದಾಂತ ಕಾಲೇಜಿನಲ್ಲಿ ಶನಿವಾರ ಜರುಗಿದ ಪರೀಕ್ಷೆಯಲ್ಲಿ ಗೋಲ್‌ಮಾಲ್ ನಡೆದಿದೆ ಎಂದು ಪರೀಕ್ಷಾರ್ಥಿಗಳು ಗಲಾಟೆ ನಡೆಸಿದ ಘಟನೆ ಜರುಗಿದೆ.
ಕೆಒಎ್ನಲ್ಲಿನ ಟೆಕ್ನಿಕಲ್ ಆಫೀಸರ್, ಫೀಲ್ಡ್ ಆಫೀಸರ್, ಎಲೆಕ್ಟ್ರೀಷನ್, ಕೆಮಿಸ್ಟ್ ಸೇರಿದಂತೆ 16 ಹುದ್ದೆಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳ ಆಯ್ಕೆಯಾಗಿ ಪರೀಕ್ಷೆ ನಡೆಸಲು ರಾಯಚೂರು ವಿಶ್ವವಿದ್ಯಾಲಯಕ್ಕೆ ಹೊಣೆಗಾರಿಕೆ ನೀಡಲಾಗಿದೆ.
ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೆ 15 ನಿಮಿಷ ಮುಂಚೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ ಸೂಚಿಸಲಾಗಿತ್ತು. ಆದರೆ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಆರಂಭವಾಗಿ ಮುಗಿಯಲು ಇನ್ನೂ 15 ನಿಮಿಷಗಳಿದ್ದಾಗ ಐವರು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ಬೇರೆ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆಯಲು ಮುಂದಾಗಿದ್ದಾರೆ.
ಇದನ್ನು ಗಮನಿಸಿ ಕೆಲ ಅಭ್ಯರ್ಥಿಗಳು ಪ್ರಶ್ನಿಸಿದಾಗ ಐವರು ವಿದ್ಯಾರ್ಥಿಗಳು ಓಡಿ ಹೋಗಿದ್ದಾರೆ. ಅವರ ಒಎಂಆರ್ ಶೀಟ್ ಪರಿಶೀಲನೆ ನಡೆಸಿದಾಗ 200 ಪ್ರಶ್ನೆಗಳಲ್ಲಿ ಕೇವಲ 5 ಪ್ರಶ್ನೆಗಳಿಗೆ ಉತ್ತರಿಸಿರುವುದು ಕಂಡು ಬಂದಿದೆ. ಉಳಿದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಮೇಲ್ವಿಚಾರಕರೊಂದಿಗೆ ವಾಗ್ವಾದಕ್ಕೆ ಇಳಿದಿದ್ದರಿಂದ ಬಿಗುವಿನ ವಾತಾವರಣ ಉಂಟಾಗಿತ್ತು.
ಒಎಂಆರ್ ಶೀಟ್‌ನಲ್ಲಿ ಕೇವಲ ಐದು ಪ್ರಶ್ನೆಗಳಿಗೆ ಉತ್ತರಿಸಿ ನಂತರ ಅವರಿಂದ ನಂತರದಲ್ಲಿ ಸರಿಯುತ್ತರ ಬರೆಸುವ ಹುನ್ನಾರ ನಡೆಸಲಾಗುತ್ತಿದೆ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.