ಬೆಳಗಾವಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ನಗರದ ಜಿಪಂ ಆವರಣದಲ್ಲಿ ಗುರುವಾರ ರಾಜ್ಯ ಗ್ರಾಪಂ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಗ್ರಾಪಂ ಸಿಬ್ಬಂದಿ ಪ್ರತಿಭಟಿಸಿದರು. ಗ್ರಾಪಂನಲ್ಲಿ ಬಿಲ್ ಕಲೆಕ್ಟರ್, ಗ್ರೇಡ್-2 ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳ ನೇಮಕಾತಿಗೆ ಸರ್ಕಾರ ಆದೇಶ ಮಾಡಿತ್ತು. ಬಳಿಕ ಆದೇಶ ವಾಪಸ್ ಪಡೆದಿದ್ದರಿಂದ ನೌಕರರು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ, ಸರ್ಕಾರವು ತಕ್ಷಣ ನೇಮಕಾತಿ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಹಲವು ವರ್ಷಗಳಿಂದ ಗ್ರಾಪಂನಲ್ಲಿ ಸಿಬ್ಬಂದಿ ದಿನದ 24 ಗಂಟೆಗಳ ಸಾರ್ವಜನಿಕರ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, 15 ತಿಂಗಳಿಂದ ಸಿಬ್ಬಂದಿ ವೇತನ ನೀಡಿಲ್ಲ. ಪರಿಣಾಮ ಕುಟುಂಬ ನಿರ್ವಹಣೆ ಮಾಡಲು ಸಾಧ್ಯವಾಗದೆ ಸಂಕಷ್ಟದಲ್ಲಿ ದಿನ ಕಳೆಯುತ್ತಿದ್ದಾರೆ. ಹಾಗಾಗಿ, ಸಿಬ್ಬಂದಿ ಸಹಕಾರಕ್ಕೆ ಸರ್ಕಾರ ಧಾವಿಸಬೇಕು ಎಂದು ಮನವಿ ಮೂಲಕ ವಿನಂತಿಸಿದರು. ಗ್ರಾಪಂಗಳಲ್ಲಿ ಎರಡು ದಶಕಗಳಿಂದ ಕೆಲಸ ಮಾಡಿಕೊಂಡು ಬರುತ್ತಿರುವ ಸಿಬ್ಬಂದಿಗೆ ಸೇವಾ ನಿಯಮಗಳಿಲ್ಲ. ತೀವ್ರ ಅನಾರೋಗ್ಯಕ್ಕೆ ತುತ್ತಾದರೆ, ಅಕಾಲಿಕ ಮರಣ ಹೊಂದಿದರೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಗ್ರಾಪಂ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ಅಧ್ಯಕ್ಷ ವಿ.ಪಿ.ಕುಲಕರ್ಣಿ, ಕಾರ್ಯದರ್ಶಿ ಜಿ.ಎಂ.ಜೈನೇಖಾನ್, ಮಾರುತಿ ಮಾದರ, ವಿಠ್ಠಲ ಎಸ್.ಕೆ., ಮಹಾದೇವ ಗೌಡರ ಇತರರು ಇದ್ದರು.