ಮಾಗಡಿ: ಮಾಗಡಿ ಮೂಲದ ಗಂಗಮ್ಮನೇಪಾಳದಲ್ಲಿ ರಾಜಕೀಯವಾಗಿ ಗುರುತಿಸಿಕೊಂಡಿದ್ದು ಸೋಮವಾರ ತಾಲೂಕಿನ ದೊಡ್ಡಯ್ಯನ ಪಾಳ್ಯದಲ್ಲಿ ತವರಿನ ಬಾಗಿನ ನೀಡಿ ಸನ್ಮಾನಿಸಲಾಯಿತು.
ಪಟ್ಟಣದ ಹೊಸಪೇಟೆ ರಸ್ತೆಯ ಗಂಗಮ್ಮ, ಹಲವು ವರ್ಷಗಳ ಹಿಂದೆ ನೇಪಾಳಕ್ಕೆ ತೆರಳಿ ಮಹಿಳಾ ಸಹಕಾರಗಳ ಸಂಘ ಸ್ಥಾಪನೆಯಲ್ಲಿ ಮುಂಚೂಣಿಯಲ್ಲಿದ್ದರು. ಅವರು ಈಗ ನೇಪಾಳ ಕಮ್ಯೂನಿಸ್ಟ್ ಪಕ್ಷದ ಬಜಾಂಗ್ ಜಿಲ್ಲೆಯ ಅಧ್ಯಕ್ಷೆಯಾಗಿ, ಜಿಲ್ಲೆಯನ್ನು ಸರ್ಕಾರದ ಮಟ್ಟದಲ್ಲಿ ಪ್ರತಿನಿಧಿಸುವ ನಾಲ್ವರ ಪೈಕಿ ಒಬ್ಬರಾಗಿದ್ದಾರೆ.
ನೇಪಾಳದ ಮಹಿಳಾ ಸಂಘಟನೆಗಳ ಒಕ್ಕೂಟದ ಬಜಾಂಗ್ ಜಿಲ್ಲಾ ಮುಖ್ಯಸ್ಥೆಯಾಗಿರುವ ಗಂಗಮ್ಮ ಚೀನಾ, ನೇಪಾಳ ಸರ್ಕಾರಗಳಿಂದ ನಾಗರಿಕ ಸಮ್ಮಾನಕ್ಕೆ ಕೂಡ ಪಾತ್ರರಾಗಿದ್ದಾರೆ. ಬೆಂಗಳೂರಿನಲ್ಲಿ ಗಂಗಮ್ಮಕೆಲಸ ಮಾಡುತ್ತಿದ್ದರು. ಈ ವೇಳೆ ನೇಪಾಳಿಯನ್ನು ಮದುವೆಯಾಗಿ, ನಂತರ ನೇಪಾಳದಲ್ಲೇ ನೆಲೆಸಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ಬಾಗಿನ ಸ್ವೀಕರಿಸಿದ ಗಂಗಮ್ಮ ಮಾತನಾಡಿ, ಸಾಮಾನ್ಯ ಕುಟುಂಬದ ಹೆಣ್ಣುಮಗಳಾಗಿ ನೇಪಾಳದಲ್ಲಿ ಸಮಾಜ ಸೇವೆ ಮಾಡುವ ಜತೆಗೆ ರಾಜಕೀಯದಲ್ಲಿ ತೊಡಗಿಕೊಂಡ ಬಗೆಯನ್ನು ವಿವರಿಸಿದರು.
ಬಿಜೆಪಿ ಮುಖಂಡ ಎ.ಎಚ್.ಬಸವರಾಜು ಮಾತನಾಡಿ, ಮಾಗಡಿಯ ಕೀರ್ತಿಯನ್ನು ಗಂಗಮ್ಮ ಅವರು ನೇಪಾಳದಲ್ಲಿ ಪಸರಿಸಿದ್ದಾರೆ. ಅಂತಹ ದಿಟ್ಟ ಹೋರಾಟ ಮನೋಭಾವನೆಯ ಹೆಣ್ಣು ಮಗಳು ಕೆಂಪೇಗೌಡರ ಭೂಮಿಯಲ್ಲಿ ಜನಿಸಿರುವುದು ಖುಷಿ ತಂದಿದೆ. ಅವರ ಸೇವೆ ಮತ್ತಷ್ಟು ವಿಸ್ತಾರವಾಗಲಿ ಎಂದರು. ಮುಖಂಡರಾದ ಧನಂಜಯ, ಜಯಕುಮಾರ್, ಎಂ.ಆರ್.ರಾಘವೇಂದ್ರ ಇತರರು ಇದ್ದರು.