ಜಿಲ್ಲೆ

ನೇತ್ರದಾನ ಮಾಡಿ, ಸಾರ್ಥಕತೆ ಪಡೆಯಿರಿ

ಬಳ್ಳಾರಿ : ಪ್ರತಿಯೊಬ್ಬರು ಜೀವನದಲ್ಲಿ ನೇತ್ರದಾನ ಮಾಡಿ ಸಾರ್ಥಕತೆ ಹೊಂದಬೇಕು ಎಂದು ಬಿಮ್ಸ್ ನಿರ್ದೇಶಕ ಡಾ.ಟಿ.ಗಂಗಾಧರ ಗೌಡ ಹೇಳಿದರು.
ನಗರದ ಬಿಮ್ಸ್‌ನ ವೈದ್ಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ , ಬಿಮ್ಸ್ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಮ್ಸ್ ನೇತ್ರ ಭಂಡಾರ ಇವರ ಸಹಯೋಗದೊಂದಿಗೆ 39ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮರಣದ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣು ಮಾಡದೇ ದೃಷ್ಠಿದೋಷ ಉಳ್ಳವರಿಗೆ ದಾನ ಮಾಡುವ ಅದ್ಭುತ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಆಕಸ್ಮಿಕ ಘಟನೆಗಳಲ್ಲಿ ಕಣ್ಣುಗಳನ್ನು ಕಳೆದುಕೊಂಡು ದೃಷ್ಟಿಹೀನರಾದಂತಹ ಜನತೆಗೆ ಇನ್ನೊಬ್ಬರ ಕಣ್ಣುಗಳನ್ನು ಕೊಡುವ ಮೂಲಕ ಅಂಧತ್ವ ನಿವಾರಣೆಗೆ ಅವಕಾಶವಿದ್ದು, ಬಿಮ್ಸ್ ನೇತ್ರ ಭಂಡಾರದಲ್ಲಿ ಕಣ್ಣುಗಳನ್ನು ದಾನವಾಗಿ ಪಡೆಯಲು ಹಾಗೂ ಅಗತ್ಯವುಳ್ಳವರಿಗೆ ಶಸ್ತಚಿಕಿತ್ಸೆ ಮೂಲಕ ಜೋಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು. ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಕುಟುಂಬದ ಸದಸ್ಯರು ಬಿಮ್ಸ್ ನೇತ್ರ ಭಂಡಾರದ 9483414824 ಸಂಖ್ಯೆಗೆ ಕರೆ ಮಾಡಿ ತಿಳಿಸಿದಾಗ ವೈದ್ಯಕೀಯ ತಂಡವು ನೇತ್ರಗಳನ್ನು ಸುರಕ್ಷಿತವಾಗಿ ಪಡೆದುಕೊಳ್ಳುತ್ತಾರೆ. ಈ ಎಲ್ಲಾ ಕಾರ್ಯವು ವ್ಯಕ್ತಿ ಮೃತಪಟ್ಟ 6-8 ಗಂಟೆಯೊಳಗೆ ಮಾಡಬೇಕಾಗುತ್ತದೆ ಎಂದರು.
ಕಳೆದ ಜನವರಿಯಿಂದ ಇಲ್ಲಿಯವರೆಗೆ 50 ಜನರು ನೇತ್ರದಾನ ಮಾಡಿದ್ದಾರೆ. ಅದರಲ್ಲಿ 45ಕ್ಕೂ ಹೆಚ್ಚು ಜನರಿಗೆ ನೇತ್ರವನ್ನು ಅಳವಡಿಸಿ ಕಣ್ಣನ್ನು ಜೀವಂತವಿರುಸುವ ಮಹತ್ವದ ಕಾರ್ಯ ಮಾಡಲಾಗಿದೆ ಎಂದು ಹೇಳಿದರು.
ಡಿಎಚ್‌ಒ ಡಾ.ವೈ. ರಮೇಶ್‌ಬಾಬು ಮಾತನಾಡಿ, ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ಮರಳಿ ನೀಡುತ್ತವೆ, ನೇತ್ರದಾನ ಪ್ರತಿಯೊಂದು ಕುಟುಂಬದ ಸಂಪ್ರದಾಯವಾಗಬೇಕು. ಪ್ರತಿಯೊಬ್ಬ ಅಂಧ ವ್ಯಕ್ತಿ ಸಹ ಜಗತ್ತನ್ನು ನೋಡುವ ಅಪೂರ್ವ ಕ್ಷಣಗಳಿಗೆ ಕೈ ಜೋಡಿಸೋಣ ಎಂದು ಹೇಳಿದರು.