ಚನ್ನರಾಯಪಟ್ಟಣ: ಪ್ರತಿಯೊಬ್ಬರು ತಮ್ಮ ನೇತ್ರವನ್ನು ತಮ್ಮ ಜೀವಿತಾವಧಿಯ ನಂತರ ಇಬ್ಬರು ಅಂಧರಿಗೆ ನೀಡಬಹುದಾಗಿದೆ. ಆ ಮೂಲಕ ತಮ್ಮ ಕಣ್ಣುಗಳನ್ನು ತಮ್ಮ ಕಾಲ ನಂತರವೂ ಇನ್ನೊಬ್ಬರ ಮೂಲಕ ಈ ಸುಂದರವಾದ ಪ್ರಪಂಚವನ್ನು ನೋಡಬಹುದಾಗಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿ.ಮಹೇಶ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಮಾಜಶಾಸ್ತ್ರ ವಿಭಾಗ, ಸರ್ಕಾರಿ ಸಾರ್ವಜನಿಕರ ಆಸ್ಪತ್ರೆ ಹಾಗೂ ಲಯನ್ಸ್ ಕ್ಲಬ್ ಚನ್ನರಾಯಪಟ್ಟಣ ಸಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಹಾಗೂ ನೇತ್ರದಾನ ನೋಂದಣಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕಣ್ಣುಗಳು ನಮ್ಮ ದೇಹದ ಪ್ರಮುಖ ಅಂಗಗಳಾಗಿವೆ. ಮನುಷ್ಯನು ತನ್ನ ಸುತ್ತಲಿನ ಪರಿಸರದ ಜತೆಗೆ ಸಂಪರ್ಕವನ್ನು ಬೆಳೆಸಲು ಕಣ್ಣು ಪ್ರಮುಖ ಸಾಧನ. ವಿಜ್ಞಾನ ಮತ್ತು ತಂತ್ರಜ್ಞಾನಗಳ ಕ್ಷೇತ್ರದಲ್ಲಿ ನಾವು ಎಷ್ಟೆಲ್ಲಾ ಅಭಿವೃದ್ಧಿ ಸಾಧಿಸಿದ್ದರೂ ಮಾನವನ ಅಂಗಾಂಶವನ್ನು ಕೃತಕವಾಗಿ ಉತ್ಪಾದಿಸುವಲ್ಲಿ ಸಫಲರಾಗಿಲ್ಲ. ಹಾಗಾಗಿ ಕಣ್ಣಿನಂತಹ ಅಪೂರ್ವವಾದ ಅಂಗವನ್ನು ವ್ಯಕ್ತಿ ಸತ್ತ ನಂತರ ಸುಟ್ಟು ಅಥವಾ ಹೂಳಿ ನಾಶಮಾಡುವ ಬದಲು ದಾನ ಮಾಡಿದರೆ ಇಬ್ಬರು ವ್ಯಕ್ತಿಗಳಿಗೆ ದೃಷ್ಟಿ ನೀಡಿದಂತಾಗುತ್ತದೆ ಎಂದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ನೇತ್ರ ಚಿಕಿತ್ಸಾ ತಜ್ಞ ಡಾ. ಸಿಂಧು, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಕೆ.ಬಿ.ಆಶಾ ಮಾತನಾಡಿದರು. ಶಿಬಿರದಲ್ಲಿ 5 ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಸಿದರು. ಜತೆಗೆ 75 ಯೂನಿಟ್ ರಕ್ತ ಸಂಗ್ರಹಿಸಲಾಯಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಸ್.ಎಚ್.ಗಂಗೇಗೌಡ ಅಧ್ಯಕ್ಷತೆ ವಹಿಸಿದ್ದರು. ಚನ್ನರಾಯಪಟ್ಟಣ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಡಿ.ಕೆ. ಮಂಜುನಾಥ್ ಸೇರಿದಂತೆ ವೈದ್ಯಕೀಯ ಸಿಬ್ಬಂದಿ, ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.