ವಿಧ್ಯಾರ್ಥಿನಿ ಸಿ.ಬೇಬಿ. 
ಜಿಲ್ಲೆ

ನೇಣು ಬಿಗಿದುಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ

ಸರಗೂರು: ಪಟ್ಟಣದ ಸ್ವಾಮಿ ವಿವೇಕಾನಂದ ಆಸ್ಪತ್ರೆಯಲ್ಲಿ ಆಯುರ್ವೇದ ಪಂಚಕರ್ಮ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿ ಡೆತ್‌ನೋಟ್ ಬರೆದು ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ನಂಜನಗೂಡು ತಾಲೂಕಿನ ಹೆಗ್ಗಡಹಳ್ಳಿ ಗ್ರಾಮದ ಲೇ.ಚಿಕ್ಕಣ್ಣ ಎಂಬುವರ ಪುತ್ರಿ ಸಿ.ಬೇಬಿ (18 ) ಮೃತಪಟ್ಟವಳು.

ಮೂರ‌್ನಾಲ್ಕು ದಿನಗಳ ಹಿಂದೆಯಷ್ಟೇ ಆಯುರ್ವೇದ ಪಂಚಕರ್ಮ ತರಬೇತಿ ಪಡೆಯಲು ಬೇಬಿ ದಾಖಲಾಗಿದ್ದು, ತರಗತಿಗೆ ಹಾಜರಾಗುತ್ತಿದಳು. ಶುಕ್ರವಾರ ಇದ್ದಕ್ಕಿದಂತೆ ತಲೆ ನೋವು ಎಂದು ಹೇಳಿ ವಿಶ್ರಾಂತಿ ಪಡೆಯಲು ಆಸ್ಪತ್ರೆಯಿಂದ ಪಕ್ಕದಲ್ಲಿರುವ ಹಾಸ್ಟೆಲ್ಗೆ ತೆರಳಿದ್ದಾಳೆ. ಆ ಬಳಿಕ ಕೊಠಡಿಯ ಚಿಲಕ ಹಾಕಿಕೊಂಡಿದ್ದು, 2ರಿಂದ 3 ಗಂಟೆ ಕಾಲ ರೂಮ್‌ನಿಂದ ಹೊರಗೆ ಬಂದಿಲ್ಲ. ಇದನ್ನು ಗಮನಿಸಿದ ಇತರ ವಿದ್ಯಾರ್ಥಿನಿಯರು ಹಾಸ್ಟೆಲ್ ವಾರ್ಡನ್‌ಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಕೊಠಡಿಯ ಬಾಗಿಲು ಬಡಿದರೂ ತೆರೆಯದ ಕಾರಣ ಗಾಬರಿಗೊಂಡು ಕಿಟಕಿಯಲ್ಲಿ ನೋಡಿದಾಗ ಫ್ಯಾನ್‌ಗೆ ವೇಲ್ನಲ್ಲಿ ನೇಣುಬಿಗಿದುಕೊಂಡಿರುವುದು ತಿಳಿದಿದೆ.

ಕೂಡಲೇ ಪಟ್ಟಣದ ಪೋಲಿಸ್ ಠಾಣೆಗೆ ಕರೆ ಮಾಡಿ ತಿಳಿಸಿದಾಗ ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಬೇಬಿ ಮೃತದೇಹವನ್ನು ಕೆಳಗಿಳಿಸಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂಬ ಡೆತ್‌ನೋಟ್ ಪೊಲೀಸರ ಕೈಗೆ ಸಿಕ್ಕಿದೆ.

ಮೃತದೇಹವನ್ನು ಸಾರ್ವಜನಿಕರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಯಿತು ಎಂದು ಸಬ್ ಇನ್ಸ್‌ಪೆಕ್ಟರ್ ಶ್ರಾವಣ ದಾಸ ರೆಡ್ಡಿ ತಿಳಿಸಿದರು. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.