ಹನೂರು: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಸೋಮವಾರ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಲೊಕ್ಕನಹಳ್ಳಿ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಶೀಲಾ ಅವರ ಪುತ್ರ ಪ್ರಜ್ವಲ್ (12) ಮೃತ. ಈತ ಮಧ್ಯಾಹ್ನ ಸಂಬಂಧಿಕರ ಮಗು ಅಭಿಷೇಕ್‌ನನ್ನು ಆಟವಾಡಿಸಿಕೊಂಡು ಕುಳಿತಿದ್ದ. ಈ ವೇಳೆ ಮಗುವಿನ ಕಾಲಿಗೆ ಗಾಯವಾಗಿದೆ. ಕೂಡಲೇ ಆಗಮಿಸಿದ ಮಗುವಿನ ಪಾಲಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದರಿಂದ ಭಯಗೊಂಡ ಪ್ರಜ್ವಲ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಚೀರಾಡುತ್ತಿದ್ದನು. ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ರಕ್ಷಿಸಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ವೈದ್ಯರ ಸಲಹೆ ಮೇರೆಗೆ ಪಾಲಕರು ಕಾಮಗೆರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಆದರೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.
ಈ ಸಂಬಂಧ ಮೃತನ ಸಂಬಂಧಿ ರಂಗಸ್ವಾಮಿ ಅವರು ನೀಡಿದ ದೂರಿನ ಮೇರೆಗೆ ಹನೂರು ಠಾಣೆ ಪೊಲೀಸರು ಮೃತ ದೇಹವನ್ನು ಹನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಗಾರಕ್ಕೆ ರವಾನಿಸಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರಿಗೆ ನೀಡಿದರು.