ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಕಾಡಂಚಿನಲ್ಲಿ ನಿರ್ಮಿಸಿರುವ ಟೆಂಟಕಲ್ ಸೋಲಾರ್ ತಂತಿ ಬೇಲಿ ನಿರ್ವಹಣೆ ಮಾಡುವಲ್ಲಿ ಗುತ್ತಿಗೆದಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಬಂಡೀಪುರದ ಅರಣ್ಯ ಸಂರಕ್ಷಣಾಧಿಕಾರಿ ಡಾ.ರಮೇಶ್ ಕುಮಾರ್ ನೋಟಿಸ್ ಜಾರಿ ಮಾಡಿದ್ದಾರೆ.
ಬಂಡೀಪುರ ಹುಲಿ ಸುರಕ್ಷಿತ ಪ್ರದೇಶ ವ್ಯಾಪ್ತಿಯ ಗೋಪಾಲಸ್ವಾಮಿಬೆಟ್ಟ ವಲಯ ವ್ಯಾಪ್ತಿಯಲ್ಲಿ 2019-20 ನೇ ಸಾಲಿನಲ್ಲಿ ಸುಮಾರು 20 ಕಿಮೀ ಟೆಂಟಕಲ್ ಸೋಲಾರ್ ತಂತಿ ಬೇಲಿ ನಿರ್ಮಾಣ ಮಾಡಲಾಗಿದೆ.
ಪರಿಶೀಲನೆ ಮಾಡಿದಾಗ ಕಳೆದ ಒಂದು ತಿಂಗಳಿನಿಂದ ನಿರ್ವಹಣೆ ಇಲ್ಲದೆ ಇರುವುದು ಕಂಡುಬಂದಿದ್ದು, ಯಾವುದೇ ಸೋಲಾರ್ ಸಿಸ್ಟಂ ಯೂನಿಟ್‌ಗಳ ಬ್ಯಾಟರಿಗಳು ಕೆಲಸ ನಿರ್ವಹಿಸುತ್ತಿಲ್ಲ. ಟೆಂಟಿಕಲ್-ತಂತಿ ಬೇಲಿ ಸಮರ್ಪಕವಾಗಿ ಕೆಲಸ ನಿರ್ವಹಿಸದೆ ಇರುವುದರಿಂದ ನಿರಂತರವಾಗಿ ಕಾಡು ಪ್ರಾಣಿಗಳು ರೈತರ ಜಮೀನಿಗೆ ನುಗ್ಗಿ ಲಕ್ಷಾಂತರ ಬೆಳೆ ಹಾನಿ ಮಾಡಿದ್ದು ಪ್ರಕರಣಗಳು ದಾಖಲಾಗಿದ್ದವು.
ಆದ್ದರಿಂದ ಗುತ್ತಿಗೆದಾರ ನೇಚರ್ ಕೇರ್ ಸಂಸ್ಥೆ ಅಂಬರೀಷ್‌ಗೆ ಸೂಚನೆ ನೀಡಲಾಗಿದೆ. ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಠೇವಣೆ ಹಣ ಮುಟ್ಟುಗೋಲು ಹಾಕಿಕೊಳ್ಳಲಾಗುವುದು, ಕಪ್ಪುಪಟ್ಟಿಗೆ ಸೇರಿಸಲಾಗುವುದು ಹಾಗೂ ಇಲಾಖೆಯಿಂದ ಬರಬೇಕಾದ ಬಿಲ್‌ಗಳನ್ನು ಕೂಡಲೇ ನಿಲ್ಲಿಸಲಾಗಿವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.