ಹೊಸನಗರ: ನೇಗಿಲೋಣಿಯಲ್ಲಿ ನಡೆದ ಗುಂಡೇಟಿಗೆ ಬಲಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರ ತನಿಖೆ ಚುರುಕುಗೊಂಡಿದೆ. ಪ್ರಕರಣದ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇತ್ತೀಚೆಗೆ ಅಂಡಗದೋದೂರು ಗ್ರಾಪಂ ವ್ಯಾಪ್ತಿಯ ನೇಗಿಲೋಣಿಯಲ್ಲಿ ಗುಂಡೇಟಿಗೆ ಸ್ಥಳೀಯ ನಿವಾಸಿ ಅಂಬರೀಷ್ ಮೃತಪಟ್ಟಿದ್ದ. ಪ್ರಕರಣ ಸಂಬಂಧ ಮೃತನ ಸಹೋದರಿ ನೀಡಿದ ದೂರಿನ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಮೃತನ ತಂದೆತಾಯಿ ಮತ್ತು ಸಹೋದರ ಘಟನೆಯ ಅನುಮಾನ ವ್ಯಕ್ತಪಡಿಸಿದ್ದರು. ಗೃಹ ಸಚಿವ ಆರಗ ಜ್ಞಾನೇಂದ್ರ ಮನೆಗೆ ಭೇಟಿ ನೀಡಿದ ವೇಳೆ ಪ್ರಕರಣದ ಮರು ದಾಖಲಿಗೆ ಒತ್ತಾಯಿಸಿದ್ದರು. ಮೃತ ತಂದೆತಾಯಿ ಹೇಳಿಕೆ ದಾಖಲಿಸಿಕೊಂಡು ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಶಿವಮೊಗ್ಗ ಎಸ್ಪಿಗೆ ಸೂಚಿಸಿದ್ದರು.
ಚುರುಕುಗೊಂಡ ತನಿಖೆ: ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತನಿಖೆ ಚುರುಕುಗೊಳಿಸಿದ ಪೊಲೀಸರು ಇನ್ನಷ್ಟು ಮಾಹಿತಿ ಕಲೆಹಾಕಿದ್ದರು. ಈಗಾಗಲೇ ಅದೇ ಗ್ರಾಮದ ನಿವಾಸಿಗಳಾದ ಕೀರ್ತಿ ಮತ್ತು ನಾಗರಾಜ್‌ರನ್ನು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ವಹಿಸಿದ್ದಾರೆ.
ಮೃತರ ಮನೆಗೆ ಶಾಸಕ ಹಾಲಪ್ಪ ಭೇಟಿ: ಗುಂಡೇಟಿಗೆ ಬಲಿಯಾದ ಮೃತ ಅಂಬರೀಷ್ ಮನೆಗೆ ಭೇಟಿ ನೀಡಿದ ಶಾಸಕ ಹರತಾಳು ಹಾಲಪ್ಪ ಮೃತರ ತಂದೆ ಸುಬ್ಬನಾಯ್ಕ ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಘಟನೆ ನಡೆದು ಹೋಗಿದೆ. ತನಿಖೆಯೂ ನಡೆಯುತ್ತಿದೆ. ಸತ್ಯಾಂಶ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ತಿಳಿಸಿದರು.
ಸಾವಿನ ಪ್ರಕರಣದಲ್ಲಿ ಜಾತಿ ಹುಡುಕುವುದು ಸರಿಯಲ್ಲ. ಮನೆಯ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಅಂಬರೀಷ ಮೃತಪಟ್ಟಿದ್ದಾನೆ. ಆ ಕುಟುಂಬವರ್ಗಕ್ಕೆ ಸಾಂತ್ವನ ಹೇಳಬೇಕಾಗಿದ್ದು ಮಾನವೀಯತೆ ಎಂದರು.