ಜಿಲ್ಲೆ

ನೇಕಾರ ಸಮುದಾಯದ ಬದುಕಿನ ಚಿಂತನೆ ಅಗತ್ಯ

ಉಳ್ಳಾಗಡ್ಡಿ-ಖಾನಾಪುರ: ಭಕ್ತಿ ಇದ್ದಲ್ಲಿ ಭಗವಂತನಿರುತ್ತಾನೆ. ಎಲ್ಲರೂ ಬದುಕನ್ನು ಸ್ವಚ್ಛಂದವಾಗಿ, ಶಾಂತಚಿತ್ತದಿಂದ ಕಳೆದು ಧರ್ಮದ ಕಾಯಕವನ್ನು ಮಾಡುವಲ್ಲಿ ಮೀಸಲಿಡಬೇಕು ಎಂದು ಹಂಪಿ ಹೇಮಕೂಟದ ದೇವಾಂಗ ಸಮುದಾಯದ ಗಾಯತ್ರಿ ಪೀಠ ಮಹಾಸಂಸ್ಥಾನ ಜಗದ್ಗುರು ದಯಾನಂದಪುರಿ ಸ್ವಾಮೀಜಿ ಹೇಳಿದರು.

ಸಮೀಪದ ಅನಂದಪುರ- ಹತ್ತರಗಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ಬನಶಂಕರಿ ದೇವಸ್ಥಾನದ ಕಳಸಾರೋಹಣ ನೆರವೇರಿಸಿ ಮಾತನಾಡಿ, ರೈತ ಹೊಟ್ಟೆ ಹಸಿವು ತನಿಸಿದರೆ, ನೇಕಾರ ಎಲ್ಲರ ಮಾನ ಕಾಪಾಡುವ ಕಾಯಕ ಮಾಡುತ್ತಾನೆ. ಈ ದಿಸೆಯಲ್ಲಿ ನೇಕಾರರು ಶ್ರೇಷ್ಠರಾಗಿದ್ದು, ಅವರ ಬದುಕಿನ ಬಗ್ಗೆ ಚಿಂತನೆ ಅಗತ್ಯವಾಗಿದೆ. ಬದುಕಿನ ನೆಲೆಗಾಗಿ ನೇಕಾರರು ನಡೆಸುತ್ತಿರುವ ವೃತ್ತಿ ಸದಾಕಾಲ ಉತ್ತುಂಗಕ್ಕೇರಲಿ ಎಂದರು.

ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಮಾತನಾಡಿ, ಸವಾಲು ಎದುರಿಸುವ ಧೈರ್ಯ ಅಗತ್ಯವಾಗಿ ಬೇಕಾಗಿದೆ. ದೇವಾಂಗ ಸಮುದಾಯದ ಧ್ಯೇಯೋದ್ದೇಶಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಸಮುದಾಯದ ಅಭಿವೃದ್ಧಿಗೆ ಶ್ರಮಿಸಿ ಸಮಾಜ ಮುನ್ನೆಲೆಗೆ ಬರಬೇಕು ಎಂದು ತಿಳಿಸಿದರು.

ಹತ್ತರಗಿ ಕಾರಿಮಠದ ಗುರುಸಿದ್ಧೇಶ್ವರ ಸ್ವಾಮೀಜಿ, ಯಮಕನಮರಡಿ ಹುಣಸಿಕೊಳ್ಳಮಠದ ರಾಚೋಟಿಶ್ವರ ಸ್ವಾಮೀಜಿ, ಹತ್ತರಗಿ ಹರಿ ಮಂದಿರದ ಡಾ.ನರಸಿಂಹ ಏಕನಾಥ ಆನಂದ ಮಹಾರಾಜ ಗೋಸಾವಿ, ರಕ್ಷಿ ಶಿರಗಾಂವದ ಶಿವಾನಂದ ಸ್ವಾಮೀಜಿ, ಯಮಕನಮರಡಿಯ ಸಿದ್ಧಬಸವ ದೇವರು, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ, ಚಂದ್ರ ಕಾಂತ ಕಾಪಸಿ, ಅಪ್ಪಾಸಾಹೇಬ ಶಿರಕೋಳಿ, ರವೀಂದ್ರ ಜಿಂಡ್ರಾಳಿ, ಗಜಾನನ ಗುಂಜೇರಿ, ಮಹಾದೇವ ಪಟೋಳಿ, ಚಂದ್ರಶೇಖರ ಚಪಣಿ, ಕಾಶಪ್ಪ ಮಳ್ಳೋಳ್ಳಿ, ವೀರಭದ್ರ ಸುಂಬಳಿ, ಬಾಬುರಾವ ಹಟ್ಟಿ, ಜಯಂತ ಹಟ್ಟಿ, ವೀರೂಪಾಕ್ಷಿ ಮಾಸ್ತಮರಡಿ, ಮಹಾದೇವ ಅತ್ತಿಮರದ, ಅಶೋಕ ಮನವಾಡಿ, ಶಶಿಕಾಂತ ಹಟ್ಟಿ, ವಜಯ ಜಕ್ಕನ್ನವರ, ಸಂಕಪ್ಪ ಮುಗಳಿ, ಬಸವರಾಜ ಅತ್ತಿಮರದ, ಎಂ.ಎಸ್.ಮಳ್ಳೊಳ್ಳಿ ಇತರರಿದ್ದರು.

ನೇಕಾರರಿಗೆ ೪.೫೦ ಪೈಸೆಯಿದ್ದ ವಿದ್ಯುತ್ ದರವನ್ನು ಸಚಿವ ಸತೀಶ ಜಾರಕಿಹೊಳಿ ಅವರು ಜವಳಿ ಸಚಿವರಿದ್ದಾಗ ೧.೨೫ ಪೈಸೆಗೆ ಇಳಿಸಿದ್ದರು. ನೇಕಾರ ಸಮ್ಮಾನ ಯೋಜನೆ ಸೇರಿ ನೇಕಾರರ ಕುಟುಂಬಗಳಿಗಾಗಿ ಹಲವಾರು ಯೋಜನೆ ಜಾರಿ ತಂದಿದ್ದಾರೆ. ರಾಜ್ಯದಲ್ಲೆ ಪ್ರಥಮ ಬಾರಿಗೆ ಆನಂದಪುರ-ಹತ್ತರಗಿಯಲ್ಲಿ ನೇಕಾರರ ಕಾಲನಿ ನಿರ್ಮಿಸಿ ಸಮುದಾಯದ ಕಣ್ಣೊರೆಸಿದ್ದಾರೆ. ಅವರ ಬೆನ್ನಿಗೆ ನೇಕಾರರ ಕುಟುಂಬ ಸದಾ ಇರಲಿದೆ. | ರವಿಂದ್ರ ಕಲಬುರ್ಗಿ ಅಧ್ಯಕ್ಷ, ದೇವಾಂಗ ಸಮುದಾಯ