ಜಿಲ್ಲೆ

ನೇಕಾರ ನೆರವಿಗೆ ಸೇವಾ ಕೇಂದ್ರ, ಇಲಾಖೆ ಜಿಲ್ಲಾ ಉಪನಿರ್ದೇಶಕಿ ಸೌಮ್ಯಾ ಚಾಲನೆ

ದೊಡ್ಡಬಳ್ಳಾಪುರ: ಕರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವು ನೀಡಲು ಜವಳಿ ಇಲಾಖೆ, ನೇಕಾರರ ಸೇವಾ ಕೇಂದ್ರ ಆರಂಭಿಸಿದೆ ಎಂದು ಜವಳಿ ಇಲಾಖೆಯ ಜಿಲ್ಲಾ ಉಪನಿರ್ದೇಶಕಿ ಸೌಮ್ಯಾ ತಿಳಿಸಿದರು.

ದೇವರ ದಾಸಿಮಯ್ಯ ಸೇವಾ ಸಮಿತಿ, ಜಿಲ್ಲಾ ನೇಕಾರ ಪ್ರಕೋಷ್ಠ ಹಾಗೂ ವಿದ್ಯುತ್‌ಚಾಲಿತ ನೇಕಾರ ಕೂಲಿ ಕಾರ್ಮಿಕರ ಸಂಘ ಸಹಯೋಗದಲ್ಲಿ ನೇಕಾರರ ಸಮ್ಮಾನ್ ಯೋಜನೆಯಡಿ ಪಟ್ಟಣದ ದತ್ತಾತ್ರೇಯ ಕಲ್ಯಾಣ ಮಂಟಪದಲ್ಲಿ ಕಾರ್ಯಾರಂಭಿಸಿರುವ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕೋವಿಡ್‌ನ ಮೊದಲ ಅಲೆಯ ಸಂದರ್ಭದಲ್ಲಿ ನೇಕಾರರಿಗೆ ಸರ್ಕಾರದಿಂದ 2 ಸಾವಿರ ರೂ. ಧನಸಹಾಯ ೋಷಿಸಲಾಗಿತ್ತು. ತಾಲೂಕಿನ ಆರೂವರೆಗೆ ಸಾವಿರ ನೇಕಾರರು ಇದರ ಪ್ರಯೋಜನ ಪಡೆದಿದ್ದಾರೆ. ಇನ್ನೂ ಹದಿನೈದೂವರೆ ಸಾವಿರ ನೇಕಾರರಿಗೆ ಸೌಲಭ್ಯ ತಲುಪಬೇಕಿದೆ ಎಂದರು.

ಕರೊನಾ 2ನೇ ಅಲೆಯ ಸಂದರ್ಭದಲ್ಲಿ ಸರ್ಕಾರ ವಿದ್ಯುತ್ ಮಗ್ಗಗಳನ್ನು ಹೊಂದಿರುವವರಿಗೆ 3 ಸಾವಿರ ರೂ. ಧನಸಹಾಯ ೋಷಿಸಿತ್ತು. ಜಿಲ್ಲೆಯ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ವ್ಯಾಪ್ತಿಯ ಎಲ್ಲ ನೇಕಾರರು ವಿದ್ಯುತ್ ಮಗ್ಗ ನೇಕಾರ ಸಹಕಾರ ಸಂಘಗಳು ಅಥವಾ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದು ವಿವರಿಸಿದರು.

ಒಂದು ಮಗ್ಗಕ್ಕೆ ಇಬ್ಬರು ನೇಕಾರರಿಗೆ ಅವಕಾಶವಿದೆ. ಮಗ್ಗದ ಕಾರ್ಮಿಕರ ಜತೆಗೆ, ವೈಂಡಿಂಗ್, ವಾರ್ಪು, ಅಚ್ಚುಕೆಚ್ಚುವವರು ಸೇರಿ ನೇಕಾರಿಕೆಗೆ ಸಂಬಂಧಪಟ್ಟ ಎಲ್ಲರಿಗೂ ಈ ನೆರವು ಸಿಗಲಿದೆ ಎಂದರು.

ಆಧಾರ್‌ಕಾರ್ಡ್, ವಿದ್ಯುತ್ ಬಿಲ್, ಉದ್ಯೋಗ್ ಆಧಾರ್ ಅಥವಾ ಎಂಎಸ್‌ಎಂಇ ಪತ್ರ, ಮುಚ್ಚಳಿಕೆ ಪತ್ರ ಹಾಗೂ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ದಾಖಲೆ ನಕಲು ಪ್ರತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ, ಸಲ್ಲಿಸಬೇಕು. ಘಟಕದ ಮಾಲೀಕರು ನಿಧನರಾಗಿದ್ದರೆ, ಅವರ ಮರಣ ಪ್ರಮಾಣಪತ್ರವನ್ನೂ ಸಲ್ಲಿಸಬೇಕು ಎಂದು ತಿಳಿಸಿದರು.

ನೇಕಾರ ಸಮ್ಮಾನ್ ಯೋಜನೆಯ ಕುರಿತು ನೇಕಾರರ ಜತೆ ಸಂವಾದ ನಡೆಯಿತು. ಕೋವಿಡ್ ಧನಸಹಾಯಕ್ಕಾಗಿ 1 ಸಾವಿರ ಅರ್ಜಿ ವಿತರಿಸಲಾಯಿತು.

ಮುಖಂಡರಾದ ಎಸ್. ಲಕ್ಷ್ಮೀನಾರಾಯಣ, ಅರುಣ್ ಕುಮಾರ್, ಎಲ್. ಮಹೇಶ್, ಮಂಜುನಾಥ್, ಮೋಹನ್ ಕುಮಾರ್, ಕೆ.ಎಚ್. ವೆಂಕಟರಾಜು, ಕೆ.ಎಚ್. ರಂಗರಾಜು ಮತ್ತಿತರರಿದ್ದರು.