ಜಿಲ್ಲೆ

ನೆಹರು ದೂರದೃಷ್ಟಿಯ ನಾಯಕ

ಚಿತ್ರದುರ್ಗ: ಕೃಷಿ, ಶಿಕ್ಷಣ, ಕೈಗಾರಿಕೆಗೆ ಒತ್ತು ಕೊಟ್ಟಿದ್ದ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಎಂದಿಗೂ ಕುಟುಂಬ ರಾಜಕಾರಣ ಮಾಡಲಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನೆಹರು ಪುಣ್ಯತಿಥಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಮಹಾತ್ಮಗಾಂಧಿ, ಮೌಲಾನಾ ಅಬ್ದುಲ್ ಕಲಾಂ, ಸರ್ದಾರ್ ವಲ್ಲಭಭಾಯಿ ಪಟೇಲ್, ಡಾ.ಬಾಬುಜಗಜೀವನರಾಂ ಮತ್ತಿತರ ಮಹನೀಯರೊಂದಿಗೆ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ನೆಹರು ಎಐಸಿಸಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಎಂದರು.
ದೇಶ ಸಂಕಷ್ಟದಲ್ಲಿದ್ದಾಗ ಪಂಚವಾರ್ಷಿಕ ಯೋಜನೆ ಜಾರಿಗೆ ತಂದು ಅನೇಕ ಆಣೆಕಟ್ಟೆಗಳನ್ನು ಕಟ್ಟಿಸಿದರು. ಕೈಗಾರಿಕೆಗಳನ್ನು ಸ್ಥಾಪಿಸಿದರು. ಮೂರು ಅವಧಿಗೆ ಪ್ರಧಾನಿಯಾಗಿದ್ದ ನೆಹರು ಅವರಲ್ಲಿ ದೂರ ದೃಷ್ಟಿಯಿತ್ತು ಎಂದು ಬಣ್ಣಿಸಿದರು.
ನೆಹರು ಕುಟುಂಬ ರಾಜಕಾರಣ ಮಾಡಿದರು ಎಂಬುದು ಬಿಜೆಪಿ ಕೆಲ ನಾಯಕರ ಸುಳ್ಳು ಪ್ರಚಾರ. ಜನರ ಇದಕ್ಕೆ ಮನ್ನಣೆ ನೀಡಿಲ್ಲ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಂಪತ್‌ಕುಮಾರ್, ಮುಖಂಡರಾದ ಡಿ.ಎನ್.ಮೈಲಾರಪ್ಪ, ಎಸ್.ಎನ್.ರವಿಕುಮಾರ್, ಎನ್.ಡಿ.ಕುಮಾರ್, ಚಿದಾನಂದಮೂರ್ತಿ ಮತ್ತಿತರರು ಇದ್ದರು.