ಹನೂರು: ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಕತ್ತರಿ ಗಿರಿಜನರ ಪೋಡಿನಲ್ಲಿ ಸೋಮವಾರ ವಿವಿಧ ಇಲಾಖೆಯ ಅಧಿಕಾರಿಗಳು ಮಹಿಳಾ ವಿಶೇಷ ಗ್ರಾಮಸಭೆ ನಡೆಸಿ ಜನರ ಸಮಸ್ಯೆ ಆಲಿಸಿದರು.
ಕಳೆದ ಜು.24ರಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ನೆಲ್ಲಿಕತ್ತರಿಗೆ ಗಿರಿಜನರ ಪೋಡಿಗೆ ಭೇಟಿ ನೀಡಿದ್ದರು. ಆ ವೇಳೆ ನಡೆದ ಸಭೆಯಲ್ಲಿ ಮಹಿಳೆಯರು ಹಾಗೂ ಗ್ರಾಮಸ್ಥರು ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇನ್ನಿತರ ಅಗತ್ಯ ಸೌಕರ್ಯವನ್ನು ಒದಗಿಸಿ ಕೊಡುವಂತೆ ಮನವಿ ಮಾಡಿದ್ದರು. ಈ ವೇಳೆ ನಾಗಲಕ್ಷ್ಮೀ ಚೌಧರಿ ಅವರು ಈ ಬಗ್ಗೆ ಅಗತ್ಯ ಕ್ರಮವಹಿಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಪೋಡಿಗೆ ಭೇಟಿ ನೀಡಿ ಸಭೆ ನಡೆಸಿದರು.
ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಕಳೆದ ಹಲವು ದಶಕದಿಂದಲೂ ಪೋಡಿನಲ್ಲಿ ವಾಸಿಸುತ್ತಿದ್ದೇವೆ. ಆದರೆ ಸಮರ್ಪಕ ಕುಡಿಯುವ ನೀರಿನ ಸೌಕರ್ಯವಿಲ್ಲ. ವಿದ್ಯುತ್ ಸೌಕರ್ಯವಿಲ್ಲದೇ ರಾತ್ರಿ ವೇಳೆ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಸಮರ್ಪಕ ರಸ್ತೆ ಇಲ್ಲದ ಪರಿಣಾಮ ಓಡಾಡಲು ಕಷ್ಟ ಪಡುತ್ತಿದ್ದೇವೆ. ಮಳೆಗಾಲದಲ್ಲಿ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವುದಕ್ಕೆ ಹರಸಾಹಸಪಡಬೇಕಿದೆ. ಜನಸಂಖ್ಯೆಗೆ ಅನುಗುಣವಾಗಿ ಮನೆಯಿಲ್ಲದ ಪರಿಣಾಮ ಒಂದೇ ಮನೆಯಲ್ಲಿ 2-3 ಕುಟುಂಬಗಳು ವಾಸಿಸಬೇಕಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು, ನರೇಗಾ ಯೋಜನೆಯಡಿ ಉದ್ಯೋಗ ನೀಡಬೇಕು ಎಂದು ಮನವಿ ಮಾಡಿದರು.
ಅಧಿಕಾರಿಗಳಿಂದ ಭರವಸೆ: ಅಧಿಕಾರಿಗಳು ಮಾತನಾಡಿ, ಪೋಡಿನ ಪ್ರತಿ ಮನೆಗೂ ಸಮರ್ಪಕ ಕುಡಿಯುವ ನೀರು ಒದಗಿಸುವ ಸಂಬಂಧ ಜಲಜೀವನ್ ಮಿಷನ್ ಯೋಜನೆಯಡಿ ಈಗಾಗಲೇ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ವಿದ್ಯುತ್ ಸೌಕರ್ಯ ಒದಗಿಸಲು ಕಾಮಗಾರಿ ಕೈಗೊಳ್ಳಲಾಗಿದ್ದು, ಕೆಲಸ ಪ್ರಗತಿಯಲ್ಲಿದೆ. ಪೋಡಿನಲ್ಲಿ ನೆಟ್‌ವರ್ಕ್ಸ್ ಸಮಸ್ಯೆ ಇರುವ ಕಾರಣ ನರೇಗಾ ಯೋಜನೆಯಡಿ ಉದ್ಯೋಗ ದೊರಕಿಸಿ ಕೊಡಲು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ನೀಡಲಾಗುವುದು. ಹಾಗೆಯೇ ಮನೆ ಇಲ್ಲದವರ ಸಂಬಂಧ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಂಜೂರಾದ ಕೂಡಲೇ ಮನೆ ನಿರ್ಮಿಸಿ ಕೊಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಸಂತೋಷ್, ಉಪಾಧ್ಯಕ್ಷೆ ಸುಶೀಲಾ, ಸದಸ್ಯರಾದ ಕೃಷ್ಣಮೂರ್ತಿ, ನಿಂಗಯ್ಯ, ಮಹದೇವಸ್ವಾಮಿ, ಮಾದೇಶ್, ಮಾದೇವ, ದೀಪಾ, ರಾಜಮ್ಮ, ಪವಿತ್ರಾ, ಲಕ್ಷ್ಮೀ, ತಾಪಂ ಸಹಾಯಕ ನಿರ್ದೇಶಕಿ ರಾಧಾ, ಟಿಎಚ್‌ಒ ಪ್ರಕಾಶ್, ಸಿಡಿಪಿಒ ಅಂಬಿಕಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸುಧಾನ್ವ ನಾಗ್, ಪಿಡಿಒ ನಂಜುಂಡಸ್ವಾಮಿ, ಮುಖಂಡರಾದ ಬಸವೇಗೌಡ, ಜಡೇಸ್ವಾಮಿ ಪಲ್ಲುಮಾದ, ಜೀವ ಮತ್ತಿತರರಿದ್ದರು.