ಜಿಲ್ಲೆ

ನೆಲೆ ನೀಡಿತು ಕಲ್ಯಾಣ ಕೈಕೊಟ್ಟಿತು ವಿಧಿ!

ಸ.ದಾ. ಜೋಶಿ ಬೀದರ್/ಮಾರ್ಥಂಡ ಜೋಶಿ ಬಸವಕಲ್ಯಾಣ

ಶಾಸಕ ಬಿ.ನಾರಾಯಣರಾವ್(65) ಕರೊನಾ ಸೋಂಕಿಗೆ ಬಲಿಯಾಗಿರುವುದು ಕಲ್ಯಾಣದ ಜನರ ಕಣ್ಣೀರಿಗೆ ಕಾರಣವಾಗಿದೆ. ಸರಳ ವ್ಯಕ್ತಿತ್ವ, ಹೋರಾಟದ ಹಾದಿ, ಬಡವರ ಬಗ್ಗೆ ಹೊಂದಿದ್ದ ಕಾಳಜಿಯಿಂದಾಗಿ ಎಲ್ಲರ ಮನ ಗೆದ್ದಿದ್ದ ಅವರು, ಕಾಂಗ್ರೆಸ್ ನಲ್ಲಿ ಇದ್ದರೂ ಎಲ್ಲ ಪಕ್ಷದವರಿಗೆ `ಹಿಂದುಳಿದ ವರ್ಗದ ನಾಯಕ' ಆಗಿದ್ದರು.

ನಾರಾಯಣರಾವ್ ನಾಲ್ಕು ದಶಕಗಳ ಸಂಘರ್ಷದ ಮೂಲಕ ರಾಜಕೀಯದಲ್ಲಿ ಮೇಲೆ ಬಂದವರು. ಕಡು ಬಡತನ ಅನುಭವಿಸಿ ಕಷ್ಟಗಳನ್ನು ಹೊತ್ತು ಹೆಜ್ಜೆ ಹಾಕಿದವರು. ಬಡವರ ನೋವು, ಕಣ್ಣೀರಿನ ಬೆಲೆ ಅವರಿಗೆ ಗೊತ್ತಿತ್ತು. ಹೀಗಾಗಿ ಅಧಿಕಾರ ಇರಲಿ, ಬಿಡಲಿ. ಅವಕಾಶ ಸಿಗಲಿ, ಬಿಡಲಿ ಜನಸಾಮಾನ್ಯರ ನಾಯಕರಾಗಿ ಗುರುತಿಸಿಕೊಂಡಿದ್ದರು. ಯಾವಾಗಲೂ ಸರಳರಲ್ಲೇ ಸರಳ ಆಗಿ ಇರುತ್ತಿದ್ದರು. ಈ ಸ್ವಭಾವವೇ ಇವರಿಗೆ ಕಲ್ಯಾಣದಲ್ಲಿ ನೆಲೆ ಕಲ್ಪಿಸಿತು. ಆದರೆ ವಿಧಿ ಕೈ ಕೊಟ್ಟಿತು.

ಬೀದರ್ ತಾಲೂಕಿನ ಬಸಂತಪುರ ಗ್ರಾಮದ ಬಿ.ನಾರಾಯಣರಾವ್ ಬಸವಕಲ್ಯಾಣ ಶಾಸಕರಾಗಿರುವುದು ಬಲು ರೋಚಕ. ಕೋಲಿ(ಕಬ್ಬಲಿಗ) ಸಮಾಜದ ಇವರು 80ರ ದಶಕದಲ್ಲಿ ಜಿಲ್ಲೆಯಲ್ಲಿ ಕುರುಬ, ಗೊಂಡ ಸಮಾಜದ ಹೋರಾಟ, ನಂತರ ಜೆಪಿ ಚಳವಳಿ ಮೂಲಕ ಸಾರ್ವಜನಿಕ ಬದುಕಿನಲ್ಲಿ ಧುಮುಕಿದರು. ಮೊದಲು ಜನತಾ ಪಕ್ಷ, ನಂತರ ಕಾಂಗ್ರೆಸ್ ಸೇರಿದರು. ಒಂದು ಕಾಲದಲ್ಲಿ ಇಂದಿರಾ ವಿರೋಧಿ ಹೋರಾಟ ನಡೆಸಿದ್ದವರು, ಮತ್ತೊಂದು ಕಾಲದಲ್ಲಿ ಸೋನಿಯಾ ಗಾಂಧಿ ಗುಣಗಾನ ಮಾಡಿದರು. ಬೀದರ್ ನ ಕುರುಬ ಸಮಾಜದ ಮೊದಲ ಹೋರಾಟಗಾರರಲ್ಲಿ ಇವರೂ ಒಬ್ಬರು. ನಾಲ್ಕು ದಶಕದ ಹೋರಾಟದ ನಂತರ ಒಮ್ಮೆ ಕಲ್ಯಾಣ ಶಾಸಕ ಸ್ಥಾನ ಒಲಿದುಬಂತು. ಆದರೆ ವಿಧಿ ಅರ್ಧ ಅವಧಿ ಮುಗಿಸಲಿಕ್ಕೂ ಬಿಡಲಿಲ್ಲ. ಒಮ್ಮೆ ಶಾಸಕನಾದರೆ ಸಾಕು, ಇದೇ ನನ್ನ ಜೀವನದ ಕೊನೆಯ ಆಸೆ ಎನ್ನುತ್ತಿದ್ದರು. ಅದರಂತೆ ಶಾಸಕರಾದ ಎರಡು ವರ್ಷ ಬಳಿಕ ಜೀವನಕ್ಕೆ ವಿದಾಯ ಹೇಳಿದ್ದಾರೆ.

ನಾರಾಯಣರಾವ್ ಅವರದ್ದು ಸರಳ ವ್ಯಕ್ತಿತ್ವದ ಜತೆಗೆ ಹಠವಾದಿ ಗುಣ. ಹಿಡಿದ ಕೆಲಸ ಮಾಡುತ್ತಿದ್ದರು. ನೇರ ನಡೆ, ನುಡಿಯ ಎದೆಗಾರಿಕೆ. ಯಾರೇನೆ ಅಂದುಕೊಂಡರೂ ಇದ್ದದ್ದನ್ನು ಇದ್ದಂತೆ ಹೇಳುವ ಗಟ್ಸ್ ಹೊಂದಿದ್ದರು. ಕ್ಷೇತ್ರದ ಅಭಿವೃದ್ಧಿಗೆ ಅನೇಕ ಕನಸುಗಳನ್ನು ಕಂಡಿದ್ದರು. ಅಲ್ಪ ಸಮಯದಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದರು. ನೂತನ ಅನುಭವ ಮಂಟಪ ಸೇರಿ ಅನೇಕ ಮಹತ್ವದ ಅಭಿವೃದ್ಧಿ ಕೆಲಸಗಳಿಗೆ ಮೂರ್ತರೂಪ ಕೊಟ್ಟ ಶ್ರೇಯ ಇವರಿಗೆ ಸಲ್ಲುತ್ತದೆ. ಹಲವು ಕೆಲಸ ಸಾಕಾರದ ದಾರಿಯಲ್ಲಿ ಇದ್ದಾಗಲೇ ಅರ್ಧದಲ್ಲೇ ಬಿಟ್ಟು ಬಾರದ ಲೋಕಕ್ಕೆ ತೆರಳಿರುವುದು ಅವರ ಕುಟುಂಬವಷ್ಟೇ ಅಲ್ಲ, ಕಲ್ಯಾಣ ನಾಡಿನ ಜನರ ದುರ್ದೈವ ಎನಿಸಿದೆ.

ನಾರಾಯಣರಾವ್ ಸಂಘಟನಾ ಚತುರರಿದ್ದರು. ಜತೆಗೆ ವಾಕ್ ಚತುರಿ. ಕನ್ನಡ, ಇಂಗ್ಲಿಷ್, ಹಿಂದಿ, ಮರಾಠಿ, ತೆಲುಗು ಭಾಷೆ ಮೇಲೆ ಪ್ರಭುತ್ವ ಹೊಂದಿದ್ದರು. ಅರ್ಥಪೂರ್ಣ ಭಾಷಣ ಮಾಡಿ ಜನರ ಗಮನ ಸೆಳೆಯುತ್ತಿದ್ದರು. ಇದ್ದದ್ದು ಇದ್ದಂತೆ ಹೇಳುವ ಸ್ವಭಾವ. ಹೀಗಾಗಿ ಅನೇಕ ಸಲ ಇವರ ಹೇಳಿಕೆ ಸಾಕಷ್ಟು ವಿವಾದ ಎಬ್ಬಿಸಿದ್ದವು. ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ ನಂತರ ಅವರ ಒಡನಾಟ ಹೊಂದಿದ್ದರು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆದ ಸಂದರ್ಭದಲ್ಲಿ ಸಿದ್ದರಾಮಯ್ಯ ಮತ್ತೆ ರಾಜ್ಯದ ಸಿಎಂ ಆಗಲಿದ್ದಾರೆ ಎಂಬ ಹೇಳಿಕೆ ಕೊಟ್ಟು ಗುಲ್ಲೆಬ್ಬಿಸಿದ್ದರು. ಮುಸ್ಲಿಂ ಸಮಾಜದ ವಿಶ್ವಾಸ ಗಳಿಸಿದ್ದರು. ಜಿಲ್ಲೆಯಲ್ಲಿ ಮುಸ್ಲಿಮೇತರ ಸಮಾಜದವರೊಬ್ಬರು ಮುಸ್ಲಿಂ ಸಮಾಜದ ಮುಖಂಡರಾಗಿ ಬೆಳೆಯುತ್ತಿದ್ದರು. ಸಮಾರಂಭವೊಂದರಲ್ಲಿ ಮುಂದಿನ ಜನ್ಮವೊಂದು ಇದ್ದಿದ್ದರೆ ನನಗೆ ಮುಸ್ಲಿಂ ಸಮಾಜದಲ್ಲಿ ಹುಟ್ಟಿಸು ಎಂದಿದ್ದರು. ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳ ವಿರುದ್ಧ ಹೇಳಿಕೆ ನೀಡಿ ವಿವಾದ ಹೊದ್ದುಕೊಂಡಿದ್ದರು.

  • ಅನುಭವ ಮಂಟಪ ನಿರ್ಮಾಣಕ್ಕೆ ಧ್ವನಿ

ನೂತನ ಅನುಭವ ಮಂಟಪ ನಿರ್ಮಾಣ ಮಾಡಬೇಕೆಂಬ ಬಸವ ಭಕ್ತರ ಆಸೆಗೆ ನೀರೆರದವರು ಶಾಸಕ ನಾರಾಯಣರಾವ್. ಇಲ್ಲಿ ಅನುಭವ ಮಂಟಪ ನಿರ್ಮಾಣ ಆಗಬೇಕು ಎಂಬುದು ಶಾಸಕನಾದ ನಂತರದ ನನ್ನ ಜೀವನದ ಕೊನೆಯ ಆಸೆ ಎಂದಿದ್ದರು. ಈ ಕೆಲಸ ಆಗುವವರೆಗೆ ನಾನು ಸಾಯುವುದಿಲ್ಲ ಎಂದು ಹೇಳಿ ಅನುಭವ ಮಂಟಪ ಬಗೆಗಿನ ತಮ್ಮ ಬದ್ಧತೆ ಸಾರಿದ್ದರು. ಅನುಭವ ಮಂಟಪ ನಿರ್ಮಾಣಕ್ಕಾಗಿ ಹಠ ಹಿಡಿದು ಅದಕ್ಕೆ ಪೂರಕವಾಗಿ ಹೋರಾಡುತ್ತಲೇ ಇದ್ದರು. ಇಲ್ಲಿನ ಜನರು ನಾನು ಶಾಸಕನಾಗಬೇಕೆಂಬ ಜೀವನದ ಕೊನೆಯ ಆಸೆ ಈಡೇರಿಸಿದ್ದಾರೆ. ಈಗ ಅನುಭವ ಮಂಟಪ ನಿರ್ಮಾಣವಾಗಬೇಕು ಎಂಬುದನ್ನು ಬಿಟ್ಟರೆ ಯಾವುದೇ ಆಸೆ ಇಲ್ಲ ಎಂದಿದ್ದರು. ಹಿಂದುಳಿದ ವರ್ಗ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ಸ್ವಭಾವ ಹೊಂದಿದ್ದ ಇವರಿಗೆ ಬಸವ ಚಿಂತನೆ ಪ್ರೇರಣೆ ನೀಡಿದ್ದವು. ಹೀಗಾಗಿ ಅನುಭವ ಮಂಟಪಕ್ಕೆ ಎಲ್ಲಿಲ್ಲದ ಮಹತ್ವ ನೀಡಿದ್ದರು. ಸರ್ಕಾರ ಯಾವುದೇ ಇರಲಿ, ಸಿಎಂ ಯಾರೇ ಆಗಿರಲಿ, ಅನುಭವ ಮಂಟಪ ನಿರ್ಮಾಣ ಮಾಡಿಯೇ ತೀರುತ್ತೇನೆ. ರಾಷ್ಟ್ರಪತಿಗಳಿಂದಲೇ ಅಡಿಗಲ್ಲು ನೆರವೇರಿಸುತ್ತೇನೆ ಎಂದು ಎಲ್ಲ ಕಾರ್ಯಕ್ರಮಗಳ ಭಾಷಣದಲ್ಲಿ ಹೇಳುತ್ತಿದ್ದರು. ಸಿದ್ದ್ಧರಾಮಯ್ಯ, ಕುಮಾರಸ್ವಾಮಿ ಅವರಿಂದ ಹಿಡಿದು ಬಿಎಸ್ವೈವರೆಗೆ ನಿರಂತರ ಕಾಡಿ-ಬೇಡಿ ಅನುಭವ ಮಂಟಪಕ್ಕೆ ಅನುದಾನ ಮಂಜೂರಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಅಡಿಗಲ್ಲು ಸಮಾರಂಭದ ಮುನ್ನವೇ ಬಾಳ ಬಂಡಿ ನಿಲ್ಲಿಸಿದರು.

  • ಪುಟ್ಟ ಬಾಡಿಗೆ ಮನೆಯಲ್ಲಿ ವಾಸ

ನಾರಾಯಣರಾವ್ ಯಾವತ್ತೂ ತಾನೊಬ್ಬ ಶಾಸಕ ಎಂಬ ಹಮ್ಮು-ಬಿಮ್ಮು ಸಮೀಪ ಸುಳಿಯಲು ಬಿಡಲಿಲ್ಲ. ಶಾಸಕರಾಗುವ ಮುನ್ನ ನಡೆಸಿದ ಜೀವನಕ್ಕಿಂತ ಶಾಸಕರಾದ ನಂತರ ಅತ್ಯಂತ ಸರಳ ಜೀವನ ನಡೆಸಿರುವುದು ವಿಶೇಷ. ನಗರದಲ್ಲಿ ಬಾಡಿಗೆಯಿಂದ ಪಡೆದ ಒಂದು ಪುಟ್ಟ ಕೋಣೆಯಲ್ಲೇ ಇರುತ್ತಿದ್ದರು. ಶಾಸಕರಾದ ನಂತರ ತಮ್ಮ ಶಾಸಕರ ಕಚೇರಿ ಅಥವಾ ಬಿಕೆಡಿಬಿ ಅತಿಥಿ ಗೃಹದಲ್ಲಿಯೇ ವಾಸ್ತವ್ಯ ಹೂಡುತ್ತಿದ್ದರು. ತಮ್ಮಲ್ಲಿಗೆ ಬರುವ ಪ್ರತಿಯೊಬ್ಬರಿಗೂ ನೇರ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ನಂತರವೇ ಅಹವಾಲು ಆಲಿಸಿ ಕಳಿಸುತ್ತಿದ್ದರು. ಕ್ಷೇತ್ರದಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಸಭೆ, ಸಮಾರಂಭಗಳಲ್ಲಿ ಸಕ್ರಿಯ ಪಾಲ್ಗೊಳ್ಳುತಿದ್ದರು. ತಮಗೆ ಪರಿಚಯ ಇರುವ (ಯಾವುದೇ ಪಕ್ಷದ ವ್ಯಕ್ತಿ ಇರಲಿ) ಜನರ ಮನೆಗಳಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಕೆಲವೊಮ್ಮೆ ಕಾರ್ಯಕ್ರಮಕ್ಕೆ ಜನರು ಕರೆಯದಿದ್ದರೂ ಗೊತ್ತಾದರೆ ಸಾಕು, ಅಲ್ಲಿ ಹಾಜರ್ ಆಗುತ್ತಿದ್ದರು. ಇದು ಇವರ ಸರಳತೆಗೆ ಸಾಕ್ಷಿ. ಕಾರು, ಬೈಕ್ ಯಾವುದೇ ಇದ್ದರೂ ಹತ್ತುತ್ತಿದ್ದರು. ಇಂಥದ್ದೇ ವಾಹನ ಬೇಕು ಎಂದು ಬಯಸಿದವರಲ್ಲ. ಹಗಲು ರಾತ್ರಿ ಎನ್ನದೆ ಕ್ಷೇತ್ರದಲ್ಲಿ ನಿರಂತರ ಸಂಚರಿಸುತ್ತಿದ್ದರು.

  • ಕರೊನಾ ಎದುರು ಸೋಲು

ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಕಾರಣ ಏಪ್ರಿಲ್ನಿಂದ ನಿರಂತರ ಹಗಲು ರಾತ್ರಿ ಎನ್ನದೆ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ನಾರಾಯಣರಾವ್ ಸಂಚರಿಸಿದರು. ಕ್ಷೇತ್ರದ ಜನಪ್ರತಿನಿಧಿಯಾಗಿ ಕರೊನಾ ವಿರುದ್ಧ ಹೋರಾಟದಲ್ಲಿ ಸಕ್ರಿಯ ಪಾಲ್ಗೊಂಡು ಜನರಿಗೆ ನೆರವಾದರು. ಜನಜಾಗೃತಿ ಮೂಡಿಸಿದರು. ಕರೊನಾ ವಾರಿಯರ್ ಆಗಿ ಕೆಲಸ ಮಾಡಿದರು. ಸಂಘರ್ಷಮಯ ಜೀವನದಲ್ಲಿ ಗೆಲುವು ಸಾಧಿಸಿದರೂ ಕರೊನಾ ವಿರುದ್ಧ ಸೋತಿದ್ದು ದುರದೃಷ್ಟಕರ ಸಂಗತಿ. ವಿವಿಧೆಡೆ ಸುತ್ತಾಡುವ ವೇಳೆ ರಸ್ತೆ ಬದಿಗೆ ತಮ್ಮ ವಾಹನ ನಿಲ್ಲಿಸಿ ಎದುರಿಗೆ ಬಂದವರನ್ನು ಕೈ ಮುಗಿದು ಅನಗತ್ಯವಾಗಿ ಹೊರಗೆ ಬರಬೇಡಿ. ಮುಖಕ್ಕೆ ಮಾಸ್ಕ್ ಧರಿಸಿ ಎಂದು ಕೋರುತ್ತಿದ್ದರು. ಎಲ್ಲೇ ಜನರ ಗುಂಪು ಕಾಣಲಿ, ಯಾವುದೇ ವೇದಿಕೆ ಇರಲಿ ಕರೊನಾ ಜಾಗೃತಿಗೆ ಆದ್ಯತೆ ನೀಡುತ್ತಿದ್ದರು. ಆಸ್ಪತ್ರೆ, ಕ್ವಾರಂಟೈನ್ ಕೇಂದ್ರಕ್ಕೆ ಪದೇಪದೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸುತ್ತ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದ್ದರು. ಕರೊನಾ ವಾರಿಯರ್ ಶಾಸಕರಾಗಿ ಕೆಲಸ ಮಾಡುತ್ತಿದ್ದವರು ಕರೊನಾಗೇ ಬಲಿಯಾಗಿರುವುದು ವಿಚಿತ್ರ.

  • ಗುರುವಿನ ಬಳಿ ತೆರಳಿದ ಶಿಷ್ಯ

ನಾರಾಯಣರಾವ್ ಅವರಿಗೆ ಕಾಂಗ್ರೆಸ್ನಲ್ಲಿ ಗುರುತಿಸಿ ಸ್ಥಾನಮಾನ ಕೊಟ್ಟವರು ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್. ಹೀಗಾಗಿ ನಾರಾಯಣರಾವ್ ಅವರು ಧರ್ಮಸಿಂಗ್ ಆಪ್ತ ಶಿಷ್ಯರಾಗಿದ್ದರು. ಧರಂ ನಿಧನದ ನಂತರ ನಾರಾಯಣರಾವ್ ಒಂದಿಷ್ಟು ವಿಚಲಿತರಾದಂತೆ, ಆತ್ಮಸ್ಥೈರ್ಯ ಕಳೆದುಕೊಂಡಂತೆ ವರ್ತಿಸುತ್ತಿದ್ದರು. ಕ್ಷೇತ್ರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳಲ್ಲಿ ಮಾತನಾಡುವ ವೇಳೆ, ನಾನು ಧರ್ಮಸಿಂಗ್ ಅವರ ಪಕ್ಕಾ ಶಿಷ್ಯ. ಅವರು ನನ್ನನ್ನು ಅರ್ಧ ದಾರಿಯಲ್ಲೇ ಬಿಟ್ಟು ತೆರಳಿದ್ದಾರೆ. ನಾನು ಶಾಸಕ ಆಗಬೇಕು ಎಂದು ಹರಸಿದ ಪ್ರಮುಖ ನಾಯಕರ ಪೈಕಿ ಧರ್ಮಸಿಂಗ್ ಮೊದಲಿಗರು. ಆದರೆ ನಾನು ಶಾಸಕನಾಗುವ ಮುನ್ನವೇ ಅವರು ಶಿವನ ಪಾದ ಸೇರಿದ್ದಾರೆ. ಈಗ ನಾನು ಶಾಸಕನಾಗಿದ್ದು, ನನ್ನ ಜೀವನದ ಕೊನೆಯ ಆಸೆ ಈಡೇರಿದೆ. ನನ್ನ ಗುರುವಿಗೆ ಬಿಟ್ಟು ಇರಲು ಸಾಧ್ಯವಾಗುತ್ತಿಲ್ಲ. ಬೇಗ ಬಾ ಎಂದು ಕರೆಯುತ್ತಿದ್ದಾರೆ. ಅವರ ಸೇವೆ ಮಾಡಲು ನಾನು ಆದಷ್ಟು ಬೇಗ ತೆರಳಬೇಕಿದೆ ಎಂದು ಹಾಸ್ಯಭರಿತವಾಗಿ ಭಾಷಣ ಮಾಡುತ್ತಿದ್ದರು. ಕಾಕತಾಳೀಯ ಎಂಬಂತೆ ಶಾಸಕರಾದ ಎರಡೇ ವರ್ಷದಲ್ಲಿ ಎಲ್ಲವೂ ಬಿಟ್ಟು ಗುರುವಿನ ಬಳಿಗೆ ತೆರಳಿದ್ದಾರೆ.

  • ಬಡವರ ಕಷ್ಟಕ್ಕೆ ಮಿಡಿವ ಹೃದಯ

ಕರೊನಾ ನಿಯಂತ್ರಣಕ್ಕೆ ಜಾರಿಗೊಳಿಸಿದ ಲಾಕ್ಡೌನ್ನಿಂದ ಬಡವರ ಬದುಕು ಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ನೆರವಿಗೆ ಮುಂದಾದ ನಾರಾಯಣರಾವ್ ಅವರು ನಗರ ಸೇರಿ ತಾಲೂಕಿನ ಹಳ್ಳಿ-ಹಳ್ಳಿಗೂ 50 ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಆಹಾರಧಾನ್ಯ ಕಿಟ್ ವಿತರಿಸಿ ಬಡವರ ಸಂಕಷ್ಟಕ್ಕೆ ಸ್ಪಂದಿಸಿದ್ದ್ದರು. ಲಾಕ್ ಡೌನ್ ನಲ್ಲಿ ಕೆಲಸ ಕಳೆದುಕೊಂಡ ಅನ್ಯ ರಾಜ್ಯದ ಕಾರ್ಮಿಕರಿಗೆ ಊಟ, ವಸತಿ ವ್ಯವಸ್ಥೆ ಮಾಡುವ ಜತೆಗೆ ಸ್ವಂತ ಖರ್ಚಿನಲ್ಲಿ ಅವರ ರಾಜ್ಯಗಳಿಗೆ ಸುರಕ್ಷಿತ ಕಳಿಸಿ ಭೇಷ್ ಎನಿಸಿಕೊಂಡಿದ್ದರು. ಕ್ಷೇತ್ರದ ಶಾಸಕರಾಗಿ ಆಯ್ಕೆ ಆದಾಗಿನಿಂದ ನಾರಾಯಣರಾವ್ ತಮ್ಮ ಭಾಷಣಗಳಲ್ಲಿ ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ನೀರಾವರಿ ಹಾಗೂ ವ್ಯಾಪಾರ ವೃದ್ಧಿ ಬಗ್ಗೆ ಮಾತನಾಡುತಿದ್ದರು. ಶಿಕ್ಷಣಕ್ಕಾಗಿ ಇಲ್ಲಿನ ಮಕ್ಕಳು, ಚಿಕಿತ್ಸೆಗಾಗಿ ಜನರು ಬೇರೆ ಬೇರೆ ನಗರಗಳಿಗೆ ಹೋಗ್ತಾರೆ. ಇಲ್ಲಿ ಬೆಳೆದ ಆಹಾರಧಾನ್ಯ ವ್ಯಾಪಾರಕ್ಕಾಗಿ ರೈತರು ನೀಲಂಗಾ, ಲಾತೂರ ಸೇರಿ ವಿವಿಧೆಡೆ ಹೋಗ್ತಾರೆ. ಹೀಗಾದರೆ ಹೇಗೆ ಎಂದು ಪ್ರಶ್ನಿಸುತ್ತಿದ್ದರು. ಬಸವಕಲ್ಯಾಣದಲ್ಲೇ ಉತ್ತಮ ಗುಣಮಟ್ಟದ ಶಾಲೆ ಸ್ಥಾಪನೆ, ಎಲ್ಲ ಸೌಲಭ್ಯ ಒಳಗೊಂಡ ಸುಸಜ್ಜಿತ ಆಸ್ಪತ್ರೆ ಮತ್ತು ಉತ್ತಮ ಮಾರುಕಟ್ಟೆ ನಿರ್ಮಾಣವಾಗಬೇಕೆಂಬ ಯೋಜನೆ ಹೊಂದಿದ್ದರು.

  • ನನಗೂ ಮದುವೆ ಮಾಡ್ರಿ…

ಸಮಾಜದ ಬಡವರು, ಹಿಂದುಳಿದ ವರ್ಗಗಳ ಜನರ ಏಳ್ಗೆಗಾಗಿ ಹೋರಾಡುತ್ತ 40 ವರ್ಷ ಕಳೆದಿದ್ದೇನೆ. ಅಟ್ಟೂರ ಸಾಹೇಬ್ರು, ಮೂಳೆ ಸಾಹೇಬ್ರು, ಖೂಬಾ ಸಾಹೇಬ್ರು ಇವರೆಲ್ಲರದ್ದು ಮದುವೆ ಮಾಡಿದ್ದೀರಿ. ಈಗ ನನಗೆ ಆಶೀರ್ವದಿಸಿ ಮದುವೆ (ಶಾಸಕನಾಗಿ ಒಮ್ಮೆ ಆಯ್ಕೆ ಮಾಡಿ) ಮಾಡಿ. ನಿಮ್ಮ ಕೈ ಮುಗಿಯುವೆ ಮದುವೆ ಮಾಡಿ.. ಹೀಗೆಂದು ಕಳೆದ ವಿಧಾನಸಭೆ ಚುನಾವಣೆ ಪ್ರಚಾರ ವೇಳೆ ವಿವಿಧೆಡೆ ವೇದಿಕೆಗಳಲ್ಲಿ ನಾರಾಯಣರಾವ್ ಮನವಿ ಮಾಡಿಕೊಳ್ಳುತ್ತಿದ್ದರು. ನಾರಾಯಣರಾವ್ ಅವರಿಗೆ ಮದುವೆ ಏನೋ ಆಯಿತು. ಆದರೆ ವಿಧಿ ಅಟ್ಟಹಾಸದಿಂದಾಗಿ ಡಿವೋಸ್೯ ಪಡೆದಂತೆ ಮದುವೆ ಮಾಡಿಸಿದ ಜನರನ್ನು ಅರ್ಧದಲ್ಲೇ ಬಿಟ್ಟು ಹೋಗಿದ್ದಾರೆ.

  • ಬೀದರ್ ಟು ಬೆಂಗ್ಳೂರ್ ಸೈಕಲ್ ಜಾಥಾ

ಹಿಂದುಳಿದ ವರ್ಗದವರ ವಿವಿಧ ಬೇಡಿಕೆ ಈಡೇರಿಕೆ ಸಂಬಂಧ ನಾರಾಯಣರಾವ್ ಅವರು ದೇವರಾಜ ಅರಸು ಸಿಎಂ ಇದ್ದಾಗ ಬೀದರ್ನಿಂದ ಬೆಂಗಳೂರಿನವರೆಗೆ ಸೈಕಲ್ ಮೇಲೆ ಜಾಥಾ ಮಾಡಿದ್ದರು. ಈ ಜಾಥಾ ನಂತರ ನಾರಾಯಣರಾವ್ ಅವರು ಅರಸು ಮನದಲ್ಲಿ ಮನೆ ಮಾಡಿದ್ದರು. ಇದರೊಂದಿಗೆ ಈ ಭಾಗದ ಪ್ರಭಾವಿ ಹಿಂದುಳಿದ ವರ್ಗದ ನಾಯಕ ಎಂಬ ಬಾ್ರೃಂಡ್ ಸಹ ಮುಡಿಗೇರಿಸಿಕೊಂಡರು. ರಾಜ್ಯದಲ್ಲಿ ಹಿಂದುಳಿದ ವರ್ಗ ಇಲಾಖೆ, ಹಿಂದುಳಿದ ವರ್ಗದ ಮಕ್ಕಳಿಗೆ ಹಾಸ್ಟಲ್ ಸ್ಥಾಪನೆ ಯೋಜನೆ ಹಿಂದೆ ನಾರಾಯಣರಾವ್ ಹೋರಾಟ ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಗಮನಾರ್ಹ. ದೇವರಾಜ ಅರಸು ತಮ್ಮದೇ ಪಕ್ಷ ಕಟ್ಟಿಕೊಂಡಾಗ ಔರಾದ್ ಪಟ್ಟಣಕ್ಕೆ ಬಂದಿದ್ದರು. ಆ ವೇಳೆ ಅವರ ಜತೆಗಿದ್ದ ನಾರಾಯಣರಾವ್ ಅಲ್ಲಿ ಮಾಡಿದಂಥ ಭಾಷಣ ಅರಸು ಅವರನ್ನು ಆಕರ್ಷಸಿತ್ತು. ಕಿಕ್ಕಿರಿದು ಸೇರಿದ್ದ ಕಾರ್ಯಕ್ರಮದಲ್ಲಿ ಅರಸು ಅವರು ನಾರಾಯಣರಾವ್ ಅವರಿಗೆ ಎರಡನೇ ಸಲ ಭಾಷಣ ಮಾಡುವಂತೆ ಹೇಳಿದ್ದರು. ನಂತರ ನಾರಾಯಣರಾವ್ ಅವರು ಬಂಗಾರಪ್ಪ, ಎಸ್.ಎಂ. ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಸಿದ್ದರಾಮಯ್ಯ ಮೊದಲಾದ ನಾಯಕರೊಂದಿಗೆ ಉತ್ತಮ ಸಂಬಂಧ ಬೆಳೆಸಿದರು. ಕೃಷ್ಣ ಸರ್ಕಾರದಲ್ಲಿ ಸಾಕ್ಷರತಾ ಮಿಷನ್ ಅಧ್ಯಕ್ಷ ಮಾಡಲಾಗಿತ್ತು. ಇದು ಇವರಿಗೆ ರಾಜಕೀಯದಲ್ಲಿ ಬೆಳೆಯಲು ಹಾದಿ ಮಾಡಿಕೊಟ್ಟಿತು.

  • ಸಾಮಾನ್ಯ ಕ್ಷೇತ್ರದಲ್ಲಿ ಮೋಡಿ

ಜನತಾ ಪರಿವಾರದ ಭದ್ರಕೋಟೆ ಎಂದೇ ಗುರುತಿಸಿರುವ ಬಸವಕಲ್ಯಾಣ ಕ್ಷೇತ್ರದಲ್ಲಿ 40 ವರ್ಷ ನಂತರ ಕಾಂಗ್ರೆಸ್ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದ ಶ್ರೇಯಸ್ಸು ನಾರಾಯಣರಾವ್ ಅವರಿಗೆ ಸಲ್ಲುತ್ತದೆ. ಸಾಮಾನ್ಯ ಕ್ಷೇತ್ರವಾದ ಇಲ್ಲಿಂದ ಹಿಂದುಳಿದ ವರ್ಗಗಳ ನಾಯಕ ನಾರಾಯಣರಾವ್ ಗೆಲುವು ಸ್ಥಳೀಯ ರಾಜಕೀಯ ಸಮೀಕರಣಕ್ಕೆ ಹೊಸ ಮುನ್ನುಡಿ ಬರೆದಿದೆ. ಕಳೆದ ಚುನಾವಣೆಯಲ್ಲಿ ಇವರು ಬಿಜೆಪಿಯ ಮಲ್ಲಿಕಾರ್ಜುನ ಖೂಬಾ ಅವರನ್ನು 17 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ವಿಧಾನಸಭೆಗೆ ಮೊದಲ ಸಲ ಪ್ರವೇಶಿಸಿದರು. 1983ರಿಂದ ನಡೆದ ಎಲ್ಲ ಚುನಾವಣೆಗಳಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್ಗೆ ಗೆಲುವು ನೀಡುವ ಮೂಲಕ ನಾರಾಯಣರಾವ್ ಜೀವ ತುಂಬಿದ್ದರು. 1983ರಿಂದ ಕ್ಷೇತ್ರದಲ್ಲಿ ಜನತಾ ಪರಿವಾರದ ಅಭ್ಯರ್ಥಿಗಳೇ (ಒಂದು ಸಲ ಹೊರತುಪಡಿಸಿ) ಗೆಲುವು ಸಾಧಿಸಿದ್ದಾರೆ. 1983, 85, 89, 94ರಲ್ಲಿ ಬಸವರಾಜ ಪಾಟೀಲ್ ಅಟ್ಟೂರ್ ಜನತಾ ದಳ ಮತ್ತು ಜನತಾ ಪರಿವಾರದಿಂದ ಆಯ್ಕೆಯಾದರೆ, 1999ರಲ್ಲಿ ಎಂ.ಜಿ. ಮುಳೆ ಜೆಡಿಎಸ್, 2004ರಲ್ಲಿ ಖೂಬಾ ಜೆಡಿ ಎಸ್ ನಿಂದ ಆಯ್ಕೆಯಾಗಿದ್ದರು. 2008ರಲ್ಲಿ ಅಟ್ಟೂರ್ ಬಿಜೆಪಿಯಿಂದ ಆಯ್ಕೆಯಾದರೆ, 2013ರಲ್ಲಿ ಮತ್ತೆ ಜೆಡಿಎಸ್ನಿಂದ ಖೂಬಾ ಆಯ್ಕೆಯಾದರು. 1978ರಲ್ಲಿ ಕಾಂಗ್ರೆಸ್ ನಿಂದ ಬಾಪುರಾವ ಹುಲಸೂರಕರ್ ಗೆದ್ದಿದ್ದರು. ನಂತರದ ಎಂಟು ಚುನಾವಣೆಗಳಲ್ಲಿ ಕಾಂಗ್ರೆಸ್ ನೆಲ ಕಚ್ಚಿದ್ದು, ನಾರಾಯಣರಾವ್ ಅವರಿಂದ ಗೆಲುವು ಪಡೆದುಕೊಂಡಿತು.

  • ಅಲಕ್ಷಕ್ಕೆ ಬಲಿಯಾಯಿತೆ ಜೀವ?

ಕರೊನಾ ವೈರಸ್ ಸೃಷ್ಟಿಸಿದ ತಲ್ಲಣ ಸ್ಥಿತಿ, ಕ್ರೌರ್ಯದ ನಡುವೆಯೂ ಆರೋಗ್ಯದ ಬಗ್ಗೆ ಅಲಕ್ಷ್ಯ ವಹಿಸಿರುವುದು ಶಾಸಕ ಬಿ.ನಾರಾಯಣರಾವ್ ಸಾವಿಗೆ ಕಾರಣವಾಯಿತೆ? ಇಂಥದ್ದೊಂದು ಪ್ರಶ್ನೆ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಶಾಸಕ ನಾರಾಯಣರಾವ್ಗೆ ಆಗಸ್ಟ್ 31ರಂದು ಕರೊನಾ ದೃಢಪಟ್ಟಿದೆ. ಅಂದೇ ರಾತ್ರಿ ಕಾರಿನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ತೆರಳಿ (ಸೆ.1ರಂದು ಬೆಳಗ್ಗೆ) ದಾಖಲಾಗಿದ್ದಾರೆ. ಮೊದಲ ದಿನ ಅನೇಕರ ಜತೆ ಮಾತನಾಡಿ, ನಾನು ಆರಾಮ ಇದ್ದೇನೆ ಎಂದು ಹೇಳಿದ್ದಾರೆ. ಆದರೆ ಮಾರನೇ ದಿನ(ಸೆ.2) ಸಂಜೆ ಆರೋಗ್ಯ ದಿಢೀರ್ ಹದಗೆಟ್ಟಿದೆ. ದೇಹದಲ್ಲಿನ ಆಕ್ಸಿಜನ್ ಪ್ರಮಾಣ ಗಣನೀಯ ಕುಗ್ಗಿದೆ. ಚೆಸ್ಟ್ ಸ್ಕ್ಯಾನಿಂಗ್ ನಲ್ಲಿ ಶ್ವಾಸಕೋಶಕ್ಕೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದರೊಂದಿಗೆ ಉಸಿರಾಟ ತೊಂದರೆಯೂ ಶುರುವಾಗಿದೆ. ಹೀಗಾಗಿ ಅಂದೇ ಕೃತಕ ಉಸಿರಾಟ(ವೆಂಟಿಲೇಟರ್) ವ್ಯವಸ್ಥೆ ಮಾಡಲಾಗಿತ್ತು. ಮಣಿಪಾಲ್ ಆಸ್ಪತ್ರೆಗೆ ತೆರಳಿದ ಎರಡನೇ ದಿನವೇ ವೆಂಟಿಲೇಟರ್ ಅಳವಡಿಸುವಷ್ಟು ಹಾಲತ್ ಖರಾಬ್ ಆಗಿದ್ದನ್ನು ಗಮನಿಸಿದರೆ, ಇವರಿಗೆ ಸೋಂಕು ತಟ್ಟಿ ಒಂದು ವಾರಕ್ಕಿಂತ ಹೆಚ್ಚು ದಿನ ಆಗಿರಬಹುದು. ಆದರೆ ಟೆಸ್ಟ್ ಮಾಡಿಸಿ ದೃಢಪಡಿಸಿಕೊಳ್ಳಲು ವಿಳಂಬ ಮಾಡಿದ್ದರಿಂದ ವೈರಸ್ ದೇಹದೊಳಗೆ ಸಮಸ್ಯೆ ಸೃಷ್ಟಿಸಿರಬಹುದು ಎನ್ನಲಾಗುತ್ತಿದೆ. ಆ.25ರಿಂದ ಶಾಸಕರು ಸುಸ್ತು, ಮೈಕೈ ನೋವು ಎನ್ನುತ್ತಿದ್ದರು. ಆದರೆ ಇದರತ್ತ ಚಿತ್ತ ಹರಿಸದೆ ಎಲ್ಲೆಡೆ ನಿರಂತರ ಸುತ್ತಾಡಿದ್ದಾರೆ. ಆ.27ರಂದು ಬೀದರ್ ಡಿಸಿ ಕಚೇರಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ನಡೆಸಿದ ಸಭೆಯಲ್ಲೂ ಭಾಗವಹಿಸಿದ್ದರು. ಈ ವೇಳೆ ಬೀದರ್ ಗೆ ಬಂದಾಗ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದಾರೆ. ಆದರೆ ಕರೊನಾ ಪರೀಕ್ಷೆ ಮಾಡಿಸಲಿಲ್ಲ. ಈ ಬಗ್ಗೆ ಹೇಳಿದರೆ ಕರೊನಾ ನನಗಾಗದು ಎಂಬ ಬಗ್ಗೆ ತಮ್ಮ ಹತ್ತಿರವಿದ್ದರೊಂದಿಗೆ ಹೇಳಿದ್ದಾರಂತೆ. ಬೇಗ ಟೆಸ್ಟ್ ಮಾಡಿಸಿ ಸೋಂಕಿನ ಪತ್ತೆ ಹಚ್ಚಿದ್ದಲ್ಲಿ ಸ್ಥಿತಿ ಇಷ್ಟೊಂದು ಗಂಭೀರ ಆಗುತ್ತಿರಲಿಲ್ಲವೇನೋ ಎಂಬ ಮಾತು ಕೇಳಿಬರುತ್ತಿದೆ. ಬೇಗ ಪತ್ತೆ, ಬೇಗ ಗುಣಮುಖ ಎಂಬುದು ಕರೊನಾ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ನನಗೇನೂ ಆಗಲ್ಲ ಎಂಬ ಮಾತು ಮುಂದೆ ಸಂಕಟಕ್ಕೆ ಕಾರಣವಾಗಬಹುದು ಎಂಬುದಕ್ಕೆ ಕೆಲವರು ಇವರ ಸಾವಿನ ಉದಾಹರಣೆ ನೀಡುತ್ತಿರುವುದು ಗಮನಾರ್ಹ.

ನಾರಾಯಣರಾವ್ ನಡೆದು ಬಂದ ದಾರಿ…

  • ಬೀದರ್ ತಾಲೂಕಿನ ಬಸಂತಪುರ ಗ್ರಾಮದಲ್ಲಿ 1955ರ ಜುಲೈ 1ರಂದು ಜನನ
  • ನಾಲ್ಕು ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯ. ಹಿಂದುಳಿದ ವರ್ಗಗಳ ನಾಯಕ ಎಂಬ ಬ್ರ್ಯಾಂಡ್
  • 1987ರಲ್ಲಿ ಮಾಳೇಗಾಂವ ಕ್ಷೇತ್ರದಿಂದ ಜನತಾ ಪಕ್ಷದಿಂದ ಜಿಲ್ಲಾ ಪರಿಷತ್ ಸದಸ್ಯರಾಗಿ ಆಯ್ಕೆ
  • 1989ರಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು
  • 1990ರಲ್ಲಿ ಕಾಂಗ್ರೆಸ್ ಗೆ ಸೇರ್ಪಡೆ. ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ರಾಜ್ಯ ಸಾಕ್ಷರತಾ ಮಿಷನ್ ಅಧ್ಯಕ್ಷರಾಗಿ ನೇಮಕ
  • 2013ರಲ್ಲಿ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲು
  • ಸಿದ್ದರಾಮಯ್ಯ ಕೃಪೆಯಿಂದ 2018ರಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಪಡೆದು ಮೊದಲ ಬಾರಿಗೆ ವಿಧಾನಸಭೆಗೆ ಎಂಟ್ರಿ
  • ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸೇವೆ
  • 1978ರಲ್ಲಿ ಬಸವಕಲ್ಯಾಣದಲ್ಲಿ ಕಾಂಗ್ರೆಸ್ ನಿಂದ ಬಾಪುರಾವ ಹುಲಸೂರಕರ್ ಗೆದ್ದಿದ್ದರು. ನಾಲ್ಕು ದಶಕದ ಬಳಿಕ ಕಾಂಗ್ರೆಸ್ ಗೆ ಗೆಲುವು ತಂದುಕೊಟ್ಟರು.