ಜಿಲ್ಲೆ

ನೆಲಮಂಗಲದಲ್ಲಿ ಸರ್ವ ಸದಸ್ಯರ ಸಭೆ; ನಗರಸಭೆಯಾದ ಬಳಿಕ ಮೊದಲ ಮೀಟಿಂಗ್

ನೆಲಮಂಗಲ: ನೆಲಮಂಗಲದ ಬಸವನಹಳ್ಳಿ ನಗರಸಭೆ ಕಾರ್ಯಾಲಯದಲ್ಲಿ ಬುಧವಾರ ಮೊದಲ ಬಾರಿಗೆ ಏರ್ಪಡಿಸಿದ್ದ ಸರ್ವ ಸದಸ್ಯರ ಸಾಮಾನ್ಯಸಭೆಯಲ್ಲಿ ನೂತನ ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.

2019ರ ಡಿಸೆಂಬರ್‌ನಲ್ಲಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸಿದ್ದ ಹಿನ್ನೆಲೆಯಲ್ಲಿ ಉಂಟಾಗಿದ್ದ ಗೊಂದಲ ಬಗೆ ಹರಿದು ವಾರದ ಹಿಂದೆ ಆಡಳಿತ ಮಂಡಳಿ ರಚನೆಯಾಗಿತ್ತು. ಹಳೆಯ ನಗರಸಭೆಯಲ್ಲಿ ಸರ್ವ ಸದಸ್ಯರ ಸಭೆ ನಡೆಸಲು ಸ್ಥಳಾವಕಾಶ ಕಡಿಮೆ ಇದ್ದರಿಂದ ನಗರಸಭೆ ವ್ಯಾಪ್ತಿಯ ಬಸವನಹಳ್ಳಿ ನಗರಸಭೆ ಕಾರ್ಯಾಲಯದಲ್ಲಿ ಚೊಚ್ಚಲ ಸಭೆ ನಿಗದಿಯಾಗಿತ್ತು.

ನಗರಸಭೆ ಆರೋಗ್ಯ ಶಾಖೆಯಲ್ಲಿನ ವಾಹನಗಳಿಗೆ ಚಾಲಕರು, ಲೋಡರ್ಸ್‌ಗಳ ನೇಮಕಕ್ಕೆ ಟೆಂಡರ್ ಕರೆಯುವುದು, ನಗರಸಭಾ ವ್ಯಾಪ್ತಿಯ ಎಲ್ಲ ಕಂದಾಯ ಗ್ರಾಮಗಳನ್ನು ನಗರಪೊಲೀಸ್ ಠಾಣಾ ವ್ಯಾಪ್ತಿಯ ಆಡಳಿತಕ್ಕೆ ಒಳಪಡಿಸಲು ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸುವುದು, 2022-23ನೇ ಸಾಲಿನ ನಗರಸಭೆ ನಿಧಿಯ ಶೇ24.10 ಶೇ7.25 ಮತ್ತು ಶೇ.5 ರಡಿ ಕ್ರಿಯೊಯೋಜನೆ ತಯಾರಿಸಿ ಜಿಲ್ಲಾಧಿಕಾರಿಗಳ ಅನುಮೋದನೆಗೆ ಸಲ್ಲಿಸುವುದು, ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ತೊಂದರೆ ಇರುವ ವಾರ್ಡ್‌ಗಳಲ್ಲಿ ಕೊಳವೆಬಾವಿ ಕೊರೆಸುವ ಕುರಿತು ಚರ್ಚಿಸಲಾಯಿತು.

ಸಮಸ್ಯೆಗಳ ಮಹಾಪೂರ: ನಗರಸಭೆಗೆ ವಿಲೀನಗೊಂಡಿರುವ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ, ಘನತ್ಯಾಜ್ಯ ಸಂಗ್ರಹ, ವಿಲೇವಾರಿ, ಬೀದಿದೀಪಗಳ ನಿರ್ವಹಣಾ ವೈಲ್ಯ, ವಿವಿಧೆಡೆಗಳಲ್ಲಿ ದುರಿಸ್ತಿಯಾಗದ ನೀರು ಸರಬರಾಜು ಪೈಪುಗಳು, ನೂತನ ನಗರಸಭೆ ವ್ಯಾಪ್ತಿಗೆ ಅವಶ್ಯವಿರುವ ಅಧಿಕಾರಿ, ಸಿಬ್ಬಂದಿ ಜತೆಗೆ ಪೌರಕಾರ್ಮಿಕರ ಕೊರತೆ ಬಗ್ಗೆ ಹಲವರು ಸಭೆಯಲ್ಲಿ ಪ್ರಸ್ತಾಪಿಸಿದರು.

ಹಾಗೆಯೇ ಕಚೇರಿಯಲ್ಲಿ ಅಧಿಕಾರಿಗಳು ಸಾರ್ವಜನಿಕರಿಗೆ ಲಭ್ಯವಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಹಲವು ಸದಸ್ಯರು ಮನವಿ ಮಾಡಿದರು. ಸದಸ್ಯರಾದ ಕೆ.ಎಂ.ಶಿವಕುಮಾರ್, ನರಸಿಂಹಮೂರ್ತಿ, ಗಂಗಾಧರ್‌ರಾವ್, ಆಂಜಿನಪ್ಪ, ಸುನೀಲ್‌ಮೂಡ್, ಪದ್ಮನಾಭ್, ಆನಂದ್, ಸಿ.ಪ್ರದೀಪ್, ಪುರುಷೋತ್ತಮ್, ಆಂಜಿನಮೂರ್ತಿ, ಸುಧಾ, ಪೂರ್ಣಿಮಾ, ಶಾರದಾ, ಭಾಗ್ಯಾ, ದಾಕ್ಷಾಯಣಿ, ಲೋಲಾಕ್ಷಿ, ಭಾರತಿಬಾಯಿ, ಚೇತನ್, ಹೆಚ್ಚವರಿ ಕೌನ್ಸಿಲರ್‌ಗಳಾದ ಆಂಜಿನಮೂರ್ತಿ, ಕೃಪಾನಂದ್, ರಾಮಮೂರ್ತಿ, ಮುನಿರಾಜು, ನಾಮನಿರ್ದೇಶಿತ ಸದಸ್ಯ ರವಿ, ರಾಜಮ್ಮ, ಚಂದ್ರಶೆಟ್ಟಿ, ಕೆ.ವಸಂತ್, ರಾಮಸ್ವಾಮಿ ಮತ್ತಿತರರು ಇದ್ದರು.

ಅಭಿವೃದ್ಧಿಗೆ ಎಲ್ಲರೂ ಸಹಕರಿಸಿ: ನಗರಸಭೆ ವ್ಯಾಪ್ತಿಯಲ್ಲಿ ಉತ್ತಮ ಆಡಳಿತ ನಡೆಸುವ ಜತೆಗೆ ಸಮಸ್ಯೆಗಳ ಪರಿಹಾರಕ್ಕೆ ಸರ್ವಸದಸ್ಯರು ಹಾಗೂ ಅಧಿಕಾರಿಗಳ ಸಹಕಾರ ಅಗತ್ಯ. ಸಭೆಯಲ್ಲಿ ಚರ್ಚೆಯಾಗಿರುವ ಸಮಸ್ಯೆಗಳಿಗೆ ಶೀಘ್ರದಲ್ಲಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕ್ರಮವಹಿಸುವುದಾಗಿ ಅಧ್ಯಕ್ಷೆ ಲತಾಹೇಮಂತ್‌ಕುಮಾರ್ ಭರವಸೆ ನೀಡಿದರು.

ಪ್ರತ್ಯೇಕ ಸಭೆ ಆಯೋಜಿಸಿ: ನಗರಸಭೆಗೆ ವಿಲೀನಗೊಂಡಿರುವ ಹೊಸಪ್ರದೇಶಗಳಲ್ಲಿನ ಮೂಲಸೌಕರ್ಯದ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರತ್ಯೇಕ ಸಭೆ ಆಯೋಜಿಸುವಂತೆ ಹೆಚ್ಚುವರಿ ಕೌನ್ಸಿಲರ್‌ಗಳು ಅಧ್ಯಕ್ಷರಿಗೆ ಮನವಿ ಮಾಡಿದರು.

ಭಾವಚಿತ್ರ ತೆರವುಗೊಳಿಸಿ: ಸುಪ್ರೀಂ ಕೋರ್ಟ್ ಆದೇಶದಂತೆ ನಗರಸಭೆ ವ್ಯಾಪ್ತಿಯಲ್ಲಿ ಶುದ್ಧಕುಡಿಯವ ನೀರಿನ ಘಟಕಗಳು, ಕಸಸಂಗ್ರಹ ವಾಹನಗಳು, ಬಸ್ ತಂಗುದಾಣಗಳಲ್ಲಿ ಅಳವಡಿಸಿರುವ ಜನಪ್ರತಿನಿಧಿಗಳ ಭಾವಚಿತ್ರ ತೆರವು ಮಾಡಬೇಕು ಎಂದು ಹಚ್ಚುವರಿ ಕೌನ್ಸಿಲರ್ ಆಂಜಿನಮೂರ್ತಿ ಒತ್ತಾಯಿಸಿದರು. ಮಳೆಗಾಲದಲ್ಲಿ ವಸತಿ ಪ್ರದೇಶಗಳಲ್ಲಿ ಅವಾಂತರ ಸೃಷ್ಟಿಸುವ ರಾಜಕಾಲುವೆಗಳಲ್ಲಿನ ಗಿಡಗಂಟೆ, ಕಸಕಡ್ಡಿ ತೆರವು ಮಾಡಲು ಒತ್ತು ನೀಡಬೇಕು. ಕೆಆರ್‌ಡಿಐಎಲ್, ನಿರ್ಮಿತಿ ಕೇಂದ್ರಗಳಿಂದ ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳನ್ನು ಸದಸ್ಯರ ಗಮನಕ್ಕೆ ತರಬೇಕು ಎಂದು ಸದಸ್ಯರಾದ ಪೂರ್ಣಿಮಾ ಸುಗ್ಗರಾಜು, ಎನ್. ಗಣೇಶ್ ಒತ್ತಾಯಿಸಿದರು.