ಜಿಲ್ಲೆ

ನೆಲಮಂಗಲದಲ್ಲಿ ಕೆಂಪೇಗೌಡ ಭವನಕ್ಕೆ ಸರ್ಕಾರಿ ಜಾಗ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕೆಂಪೇಗೌಡ ಭವನ ನಿರ್ಮಾಣಕ್ಕೆ ಅಗತ್ಯ ಜಾಗವನ್ನು ಸರ್ಕಾರದಿಂದ ಕೊಡಿಸುವುದರ ಜತೆಗೆ ವೈಯಕ್ತಿಕವಾಗಿ ಒಂದು ಕೋಟಿ ರೂ.ದೇಣಿಗೆ ನೀಡುವುದಾಗಿ ಶಾಸಕ ಎನ್.ಶ್ರೀನಿವಾಸ್ ಭರವಸೆ ನೀಡಿದರು.
ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಒಕ್ಕಲಿಗರ ಸಮುದಾಯ ಮತ್ತು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ದಿನಾಚರಣೆಯಲ್ಲಿ ಮಾತನಾಡಿದರು. ನಾಡಪ್ರಭು ಕೆಂಪೇಗೌಡರು, ದೇಶದಲ್ಲೇ ಮಾದರಿಯುತ ಸರ್ವಜನಾಂಗದ ಶಾಂತಿಯುತ ನಾಡು ನಿರ್ಮಿಸಿದವರು. ಕ್ಷೇತ್ರದ ರೈತರಿಗೆ ಪ್ರಾಧಾನ್ಯತೆ ನೀಡಿದ್ದು, ತಾಲೂಕಿನ ಅನೇಕ ಕೆರೆಗಳನ್ನು ತುಂಬಿಸುವ ಹಾಗೂ ಅಂತರ್ಜಲಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ನಗರದ 2 ಕೆರೆಗಳ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕೆಂಪೇಗೌಡ ಅವರ ಆಶಯಗಳನ್ನು ಈಡೇರಿಸುವಂತಹ ಕೆಲಸ ಮಾಡಲಾಗುತ್ತಿದೆ ಎಂದರು.
ಸಾಹಿತಿ ಪ್ರೊ.ಚಿಕ್ಕರಂಗೇಗೌಡ ಮಾತನಾಡಿ, ಕೆಂಪೇಗೌಡ ಅವರ ಕುಟುಂಬ, ಆಡಳಿತ, ಕುರಿತಾದ ಕಟ್ಟು ಕಥೆಗಳಿದ್ದು, ಜನ ನಂಬಬಾರದು. ಕೆಂಪೇಗೌಡ ಅವರ ಕುರಿತಾಗಿ ಅನೇಕ ಸಂಶೋಧನೆಗಳಾಗಿದ್ದು, ಪ್ರತಿಯೊಬ್ಬರಿಗೂ ವಾಸ್ತವತೆ ಅರ್ಥ ಮಾಡಿಸುವ ಕೆಲಸವನ್ನು ಸಂಘಟನೆಗಳು ಮಾಡಬೇಕು. ಎಲ್ಲ ವರ್ಗದ ಸಾಮಾನ್ಯ ಜನರನ್ನು ತನ್ನೊಂದಿಗೆ ಬದುಕುವಂತಹ ವಾತಾವರಣ ನಿರ್ಮಿಸಿಕೊಟ್ಟ ಏಕೈಕ ಮಹಾನಾಯಕ ಅವರು ಎಂದರು.
ತಾಲೂಕು ಕಚೇರಿ ಮುಂಭಾಗದಲ್ಲಿ ನಿರ್ಮಿಸುತ್ತಿರುವ ಕೆಂಗಲ್ ಹನುಮಂತಯ್ಯ ಅವರ ಪುತ್ಥಳಿಯನ್ನು ಶೀಘ್ರದಲ್ಲಿ ಅನಾವರಣ ಮಾಡಬೇಕಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಬಿಎಂಎಲ್ ಕಾಂತರಾಜು ತಿಳಿಸಿದರು.
ಬಸವನಹಳ್ಳಿ ಶಿವಾನಂದ ಆಶ್ರಮದ ಶ್ರೀ ರಮಾನಂದನಾಥ ಸ್ವಾಮೀಜಿ, ನಗರಸಭೆ ಅಧ್ಯಕ್ಷೆ ಲತಾ ಹೇಮಂತ್‌ಕುಮಾರ್, ಸದಸ್ಯ ಶಿವಕುಮಾರ್, ಅಂಜನಾಮೂರ್ತಿ, ಪೌರಾಯುಕ್ತ ಮನುಕುಮಾರ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆ.ತಿಮ್ಮರಾಜು, ಉಪಾಧ್ಯಕ್ಷ ರಾಮಕೃಷ್ಣಪ್ಪ, ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜು, ಉಪಾಧ್ಯಕ್ಷೆ ರಮೇಶ್, ನೆ.ಯೋ.ಪ್ರಾಧಿಕಾರ ಅಧ್ಯಕ್ಷೆ ಎಂ.ನಾರಾಯಣ್‌ಗೌಡ, ಸದಸ್ಯ ಬಿನ್ನಮಂಗಲ ವಾಸು, ಮಾಜಿ ಅಧ್ಯಕ್ಷ ಎನ್.ಪಿ.ಹೇಮಂತ್‌ಕುಮಾರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಆರ್.ಗೌಡ, ಬ್ಲಾಕ್ ಅಧ್ಯಕ್ಷ ಟಿ.ನಾಗರಾಜು, ಉಪಾಧ್ಯಕ್ಷ ಸಿ.ಎಂ.ಗೌಡ, ವಕೀಲ ರಘುನಾಥ್, ಗಂಗರಾಜು, ವಿಜಯ್‌ಕುಮಾರ್ ಇದ್ದರು.

ಶಾಸಕರ ತಮಟೆ ಏಟಿಗೆ ಕುಣಿದ ಮುಖಂಡರು: ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳಿಂದ ಆಯೋಜಿಸಿದ್ದ ಮೆರವಣಿಗೆಯಲ್ಲಿ ಶಾಸಕ ಎನ್.ಶ್ರೀನಿವಾಸ್ ತಮಟೆ ಬಾರಿಸಿದ್ದು, ಸಮುದಾಯ ಮುಖಂಡರು ಕುಣಿದು ಕುಪ್ಪಳಿಸಿದರು.
ವಿಜೃಂಭಣೆಯ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿ ಆವರಣದವರೆಗೆ ಕೆಂಪೇಗೌಡರ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಪೂರ್ಣಕುಂಭ, ವೀರಗಾಸೆ, ಡೊಳ್ಳುಕುಣಿತ, ಕಂಸಾಳೆ, ಹುಲಿವೇಷ, ಪೂಜಾ ಕುಣಿತದಂತಹ ಹತ್ತಾರು ಜಾನಪದ ಕಲಾತಂಡಗಳು ಸಾಥ್ ನೀಡಿದವು. ನಾಡಪ್ರಭು ಕೆಂಪೇಗೌಡರ ಪುತ್ಥಳಿಯನ್ನು ಬೆಳ್ಳಿರಥದಲ್ಲಿ ಇರಿಸಿದ್ದು, ಮೆರವಣಿಗೆ ಮಾಡಿದ್ದು ಗಮನ ಸೆಳೆಯಿತು.
ಅಭಿನಂದನೆ: ಒಕ್ಕಲಿಗ ಸಮುದಾಯಕ್ಕೆ ವಿವಿಧ ಕೊಡುಗೆ ನೀಡಿದ್ದ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಾಬು ಅವರು ಇತ್ತೀಚೆಗೆ ನಿಧನ ಹೊಂದಿದ ಹಿನ್ನೆಲೆಯಲ್ಲಿ ಕುಟುಂಬಸ್ಥರನ್ನು ಸನ್ಮಾನಿಸಲಾಯಿತು. ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ನಗದು ಬಹುಮಾನ ನೀಡಲಾಯಿತು.