ಜಮಖಂಡಿ ನಗರದಲ್ಲಿ ಇನೋಸಿಸ್ ಒಡತಿ ಸುಧಾಮೂರ್ತಿ ಅವರಿಗೆ ಪದ್ಮಭೂಷಣ ಘೋಷಣೆಯಾದ ಹಿನ್ನಲೆಯಲ್ಲಿ ಮನೆಯವರು ಸುಧಾಮೂರ್ತಿ ಅವರಿಗೆ ಆರತಿ ಬೆಳಗಿ ಶುಭಹಾರೈಸಿದರು. 
ಜಿಲ್ಲೆ

ನೆಲದ ಮೇಲೆ ಕೂತು ಆರತಿ ಮಾಡಿಸಿಕೊಂಡ ಸುಧಾ ಮೂರ್ತಿ

ಬಾಗಲಕೋಟೆ: ಸರಳತೆ, ಸಜ್ಜನಿಕೆಯ ಸಾಕಾರ ಮೂರ್ತಿ ಆಗಿರುವ ಇನೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ಅವರು ತಮ್ಮ ತವರು (ಜಮಖಂಡಿ ತಾಲೂಕಿನ ಸಾವಳಗಿ) ಬಾಗಲಕೋಟೆ ಜಿಲ್ಲೆಯಲ್ಲಿ ಇದ್ದಾಗಲೇ ಪದ್ಮವಿಭೂಷಣ ಪ್ರಶಸ್ತಿ ಘೋಷಣೆ ಆಗಿದ್ದು, ಅವರ ಸಂಬಂಧಿಕರ ಮನೆಯಲ್ಲಿ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ಸಚಿವ ಮುರುಗೇಶ ನಿರಾಣಿ ಒಡೆತನದಲ್ಲಿ ಇರುವ ಬಾಗಲಕೋಟೆ ತೇಜಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬುಧವಾರ ನಗರಕ್ಕೆ ಆಗಮಿಸಿದ್ದರು. ಸಂವಾದ ಮುಗಿಸಿಕೊಂಡು ಮಧ್ಯಾಹ್ನ ಜಮಖಂಡಿ ನಗರಕ್ಕೆ ತೆರಳಿದ್ದರು. ಜಮಖಂಡಿ ನಗರದಲ್ಲಿ ಸುಧಾಮೂರ್ತಿ ಅವರ ಅಣ್ಣನ ಮಗ ನಾರಾಯಣ ಕುಲಕರ್ಣಿ ಅವರ ನಿವಾಸದಲ್ಲಿ ಇದ್ದಾಗಲೇ ಅವರಿಗೆ ರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಭೂಷಣ ಘೋಷಣೆ ಆಗಿತ್ತು.
ಇದರಿಂದ ಸುಧಾಮೂರ್ತಿ ಅವರ ಮನೆಯಲ್ಲಿ ಸಂಭ್ರಮ, ಸಡಗರ ಇಮ್ಮಡಿಗೊಳಿಸಿತ್ತು. ಪ್ರಶಸ್ತಿ ದೊರೆತ ಹಿನ್ನಲೆಯಲ್ಲಿ ಅವರಿಗೆ ನಾರಾಯಣ ಅವರ ಪತ್ನಿ ವನಜಾ ಕುಲಕರ್ಣಿ ಹಾಗೂ ಪುತ್ರಿ ಶ್ರೇಯಾ ಕುಂಕುಮ ಹಚ್ಚಿ ಆರತಿ ಬೆಳಗಿ ಶುಭಹಾರೈಸಿದರು. ಕೋಟ್ಯಾಧೀಶೆ ಆಗಿದ್ದರೂ ಸಹ ಸುಧಾಮೂರ್ತಿ ಅವರು ನೆಲದ ಮೇಲೆ ಕುಳಿತು ಆರತಿ ಮಾಡಿಸಿಕೊಂಡರು. ಆರತಿ ತಟ್ಟಿಗೆ ಹಣಹಾಕಿದ ಸುಧಮ್ಮ ಕೈಮುಗಿದು ಧನ್ಯವಾದ ಅರ್ಪಿಸಿದರು. ರಾತ್ರಿ ನಾರಾಯಣ ಕುಲಕರ್ಣಿ ಅವರ ಮನೆಯಲ್ಲಿ ವಾಸ್ತವ್ಯ ಮಾಡಿದ್ದ ಸುಧಾಮೂರ್ತಿ ಗುರುವಾರ ಬೆಳ್ಳಂ ಬೆಳಗ್ಗೆ ಪಂಡರಾಪುರಕ್ಕೆ ತೆರಳಿದರು.