ನಾಪೋಕ್ಲು: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ, ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಸಂಜೀವಿನಿ ಒಕ್ಕೂಟಗಳ ವತಿಯಿಂದ ಶನಿವಾರ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟ ಹಾಗೂ ಅಂತರ ಗ್ರಾಮ ಹಾಕಿ ಪಂದ್ಯಾವಳಿಯಲ್ಲಿ ನೆಲಜಿ ಫಾರ್ಮರ್ಸ್ ಕ್ಲಬ್ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಹಾಕಿ ಅಂತಿಮ ಪಂದ್ಯದಲ್ಲಿ ಬಲ್ಲಮಾವಟಿಯ ಅಪೋಲೋ ತಂಡದ ವಿರುದ್ಧ ನೆಲಜಿ ಫಾರ್ಮರ್ಸ್ ಕ್ಲಬ್ ತಂಡವು 2-1 ಅಂತರದಿಂದ ಜಯ ಸಾಧಿಸಿದೆ.
ವಿಜೇತ ತಂಡಕ್ಕೆ ಕಾಫಿ ಬೆಳೆಗಾರ ಮೂವೇರ ನಾಣಪ್ಪ ಹಾಗೂ ಮುಕ್ಕಾಟಿರ ವಿಠಲ ಕರಂಬಯ್ಯ ನೀಡಿದ ನಗದು, ಟ್ರೋಫಿಯನ್ನು ನೀಡಲಾಯಿತು. ದ್ವಿತೀಯ ಸ್ಥಾನ ಪಡೆದ ಅಪೊಲೋ ಬಲ್ಲಮಾವಟಿ ತಂಡಕ್ಕೆ ಎಸ್‌ಎಲ್ಎನ್ ಸಂಸ್ಥೆಯ ಸಂತೋಷ್ ಬಾಬು ಹಾಗೂ ಸಂದೀಪ್ ಬಾಬು ನೀಡಿದ ಟ್ರೋಫಿ ಹಾಗೂ ದೊಡ್ಡ ಪುಲಿಕೋಟುವಿನ ಪೆಬ್ಬೆಟ್ಟಿರ ಯತೀಶ್ ನೀಡಿದ ನಗದು ಬಹುಮಾನವನ್ನು ನೀಡಲಾಯಿತು.
ಮಹಿಳೆಯರಿಗಾಗಿ ಏರ್ಪಡಿಸಿದ್ದ ಹಗ್ಗ ಜಗ್ಗಾಟದ ಸ್ಪರ್ಧೆಯಲ್ಲಿ ನೆಲಜಿ ಎ ತಂಡ ಪ್ರಶಸ್ತಿ ಗಳಿಸಿತು. ತಂಡಕ್ಕೆ ಮಂಡಿರ ಜಯದೇವಯ್ಯ ನೀಡಿದ ಟ್ರೋಫಿ ಹಾಗೂ ಅಪ್ಪಚೆಟ್ಟೋಳಂಡ ಶ್ಯಾಂ ಕರುಂಬಯ್ಯ ನೀಡಿದ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು. ದ್ವಿತೀಯ ಸ್ಥಾನ ಪಡೆದ ಪೇರೂರು ತಂಡಕ್ಕೆ ಆಶಾರಾವ್ ನೀಡಿದ ಟ್ರೋಫಿ ಹಾಗೂ ದೊಡ್ಡ ಪುಲಿಕೋಟುವಿನ ಮುಕ್ಕಾಟಿರ ಎ.ಉಮೇಶ್ ನೀಡಿದ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಬಲ್ಲಮಾವಟಿ ಒಕ್ಕೂಟದ ಸ್ವಸಹಾಯ ಸಂಘ, ಸ್ತ್ರೀಶಕ್ತಿ ಸಂಘ ಹಾಗೂ ಸಂಜೀವಿನಿ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಸಂತೆ ಮೇಳ ಆಯೋಜಿಸಲಾಗಿತ್ತು. ಬಲ್ಲಮಾವಟಿ ಗ್ರಾಪಂ ಅಧ್ಯಕ್ಷ ಮುಕ್ಕಾಟಿರ ಸುತನ್ ಸುಬ್ಬಯ್ಯ, ಮಾಜಿ ಅಧ್ಯಕ್ಷ ಮಣವಟ್ಟಿರ ಹರೀಶ್ ಕುಶಾಲಪ್ಪ, ಉಪಾಧ್ಯಕ್ಷೆ ದೀನಾ ಮಾಯಮ್ಮ, ತಾಪಂ ಇಒ ಶೇಖರ್, ಗ್ರಾಪಂ ಸದಸ್ಯರಾದ ಮಚ್ಚುರ ರವೀಂದ್ರ, ರಾಜೀವಿ, ಗ್ರಾಮೀಣ ಕ್ರೀಡಾಕೂಟದ ಅಧ್ಯಕ್ಷ ಬಾಬಿ ಭೀಮಯ್ಯ, ಪಿಡಿಒ ಶರತ್ ಪೂಣಚ್ಚ ಇತರರು ಇದ್ದರು.
ಹಾಕಿ ಪಂದ್ಯಾವಳಿ ತೀರ್ಪುಗಾರರಾಗಿ ಕರವಂಡ ಅಪ್ಪಣ್ಣ, ಕೋಡಿಮಣಿಯಂಡ ಗಣಪತಿ, ಕುಪ್ಪಂಡ ಡಿಲನ್ ಬೋಪಣ್ಣ ಹಾಗೂ ಚೆಯ್ಯಂಡ ಅಪ್ಪಚ್ಚು ಕಾರ್ಯ ನಿರ್ವಹಿಸಿದರು.