ಜಿಲ್ಲೆ

ನೆಲ, ಜಲ ರಕ್ಷಣೆಯಲ್ಲಿ ತೊಡಗಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ತರಬೇತಿ ಪಡೆದ ವಿಷಯಗಳನ್ನು ಮನನ ಮಾಡಿಕೊಂಡು ಮುಂದಿನ ಸೇವಾ ಕ್ಷೇತ್ರದಲ್ಲಿ ಅವುಗಳನ್ನು ಕಾರ್ಯಗತಗೊಳಿಸಬೇಕು. ಇದಲ್ಲದೆ ದೇಶದ ಸಂಪತ್ತುಗಳಾದ ಜಲ, ನೆಲ ಮತ್ತು ಅರಣ್ಯ ರಕ್ಷಣೆಯಲ್ಲಿ ತೊಡಗಬೇಕು ಎಂದು ವಾಲ್ಮಿ ನಿರ್ದೇಶಕ ರಾಜೇಶ ಅಮ್ಮಿನಭಾವಿ ಹೇಳಿದರು.
ನಗರದ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ (ವಾಲ್ಮಿ)ಯಲ್ಲಿ ಶನಿವಾರ ಏರ್ಪಡಿಸಿದ್ದ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಆರ್‌ಎಫ್‌ಒ) ಜಲ, ಜಲಾನಯನ ಪ್ರದೇಶ ಮತ್ತು ಅರಣ್ಯ ಕುರಿತ ತರಬೇತಿ ಶಿಬಿರ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು.
ಕರ್ನಾಟಕ ಅರಣ್ಯ ಅಕಾಡೆಮಿಯ ಎಸಿಎಫ್ ಶ್ರೀಕಾಂತ ಖಣದಾಳಿ ಮಾತನಾಡಿ, ತರಬೇತಿಯು ಮುಂದಿನ ಸೇವಾ ದಿನಗಳಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಶಿಬಿರವನ್ನು ಆರ್‌ಎಫ್‌ಒಗಳ ತರಬೇತಿ ಸೇವಾ ಅವಧಿಯ ಕೊನೇ ಹಂತದ ಬದಲು ಮಧ್ಯದಲ್ಲೇ ಆಯೋಜಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಾಲ್ಕು ದಿನಗಳ ಕಾಲ ನಡೆದ ಶಿಬಿರದಲ್ಲಿ ಜಲ ಮತ್ತು ಜಲಾನಯನ ಪ್ರದೇಶಗಳ ಮಹತ್ವ ತಿಳಿಸಲಾಯಿತು. 34 ಶಿಬಿರಾರ್ಥಿಗಳು ಬೆಳಗಾವಿ ಜಿಲ್ಲೆ ಖಾನಾಪುರ ಸಮೀಪದ ಜಲಾನಯನ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು. ಪರಿಸರ ರಕ್ಷಕ ಶಿವಾಜಿ ಕಾಗಣೀಕರ ಶಿಬಿರಾರ್ಥಿಗಳಿಗೆ ತಾವು ಕೈಗೊಂಡ ಜಲ ಸಂರಕ್ಷಣಾ ಕಾರ್ಯಗಳ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರಲ್ಲದೆ, ಅರಣ್ಯದ ಮಹತ್ವ, ಜಲಾನಯನ ಪ್ರದೇಶಗಳ ರಕ್ಷಣೆ ಹಾಗೂ ಜಲ ನಿರ್ವಹಣೆಗಳ ಬಗ್ಗೆ ಪಾಠ ಮಾಡಿದರು.
ಅರುಣಾಚಲ ಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಿಂದ ಆಗಮಿಸಿದ್ದ ಶಿಬಿರಾರ್ಥಿಗಳ ಪೈಕಿ ಡಾ. ರೀಬಾ, ಪ್ರಭಾತಕುಮಾರ್, ಎನ್. ಸತೀಶ ಅನಿಸಿಕೆಗಳನ್ನು ಹಂಚಿಕೊಂಡರು. ಶೈಲಜಾ ಹಿರೇಮಠ, ಅಧಿಕಾರಿಗಳು, ಇತರರು ಇದ್ದರು.
ನಾಗರತ್ನಾ ಹೊಸಮನಿ ಸ್ವಾಗತಿಸಿದರು. ಸಂಯೋಜಕ ಇಂದೂಧರ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಸವರಾಜ ಪೂಜಾರ ವಂದಿಸಿದರು.