ಕಾರವಾರ: ನೆರೆಯ ನಿರ್ವಹಣೆಗೆ ಅನುಕೂಲವಾಗುವಂತೆ ಜಿಪಂ ಸಿಇಒ ಎಂ.ರೋಶನ್ ನೇತೃತ್ವದ ತಂಡ ನಕ್ಷೆಯೊಂದನ್ನು ಸಿದ್ಧಪಡಿಸಿದ್ದು, ಭವಿಷ್ಯದಲ್ಲಿ ಪ್ರವಾಹ ಪರಿಸ್ಥಿತಿ ಸಂಭವಿಸಿದಲ್ಲಿ ಅದನ್ನು ನಿಭಾಯಿಸಲು ಇದು ಸಹಾಯವಾಗಲಿದೆ.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೈಸರ್ಗಿಕ ಸಂಪತ್ತು ಅಂಕಿ- ಅಂಶಗಳ ನಿರ್ವಹಣೆ ವ್ಯವಸ್ಥೆಯಡಿ (ಎನ್ಆರ್ಡಿಎಂಎಸ್) ಕಾಳಿ ಹಾಗೂ ಗಂಗಾವಳಿ ನದಿ ಪಾತ್ರಗಳಿಗೆ ಸಂಬಂಧಪಟ್ಟ ನಕ್ಷೆಯನ್ನು ಸಿದ್ಧಪಡಿಸಲಾಗಿದೆ.
ಈ ಎರಡು ನದಿಗಳ ಅಚ್ಚುಕಟ್ಟು ಪ್ರದೇಶದಲ್ಲಿ ಕಳೆದ ವರ್ಷ ಆದ ಮಳೆ, ಜಲಾಶಯಗಳಲ್ಲಿ ಸಂಗ್ರಹವಾದ ನೀರು, ಅಣೆಕಟ್ಟೆಗಳಿಂದ ಬಿಟ್ಟ ನೀರು. ಅಣೆಕಟ್ಟೆಗಳಿಂದ ಎಷ್ಟು ನೀರು ಹರಿದಲ್ಲಿ ಎಲ್ಲಿಯವರೆಗೆ ನೀರು ತುಂಬುತ್ತದೆ, ಎಷ್ಟು ಮಳೆಯಾದಲ್ಲಿ ನದಿಯಲ್ಲಿ ಎಲ್ಲಿಯವರೆಗೆ ನೀರು ತುಂಬುತ್ತದೆ, ಮುಂತಾದ ಡೆಟಾಗಳನ್ನು ಸಂಬಂಧಪಟ್ಟ ಗ್ರಾಪಂಗಳಿಂದ ನಿರಂತರವಾಗಿ ತರಿಸಿಕೊಂಡು ಪಟ್ಟಿ ಮಾಡಲಾಗಿದೆ. ಅದನ್ನು ಗೂಗಲ್ ಮ್ಯಾಪ್ನಲ್ಲಿ ಅಳವಡಿಸಿ ನಕ್ಷೆ ಸಿದ್ಧ ಮಾಡಲಾಗುತ್ತಿದೆ.
ನಕ್ಷೆ ಏಕೆ?: ಜೊಯಿಡಾದ ಡಿಗ್ಗಿಯಲ್ಲಿ ಹುಟ್ಟುವ ಕಾಳಿ ನದಿ 184 ಕಿ.ಮೀ. ಹರಿದು ಕಾರವಾರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಸೂಪಾ, ತಟ್ಟಿಹಳ್ಳ, ಬೊಮ್ಮನಹಳ್ಳಿ, ಕೊಡಸಳ್ಳಿ ಹಾಗೂ ಕದ್ರಾ ಸೇರಿ 5 ಕಡೆಗಳಲ್ಲಿ ನದಿಗೆ ಅಣೆಕಟ್ಟು ಕಟ್ಟಲಾಗಿದೆ. ಈ ನದಿಯ ಇಕ್ಕೆಲಗಳಲ್ಲಿ 20 ಗ್ರಾಪಂಗಳು ಬರುತ್ತಿದ್ದು, ಲಕ್ಷಾಂತರ ಜನ ವಾಸಿಸುತ್ತಾರೆ. ಅಣೆಕಟ್ಟೆಗಳನ್ನು ಕಟ್ಟಿ ಅಂದಾಜು 3 ದಶಕಗಳು ಕಳೆದಿವೆ. ಪ್ರತಿ ಬಾರಿಯೂ ಮಳೆ ಬಂದಾಗ ನೀರು ಸಂಗ್ರಹಿಸಲಾಗುತ್ತದೆ. ಅಣೆಕಟ್ಟೆ ತುಂಬಿದಾಗ ಎಷ್ಟು ನೀರು ಹೊರಬಿಟ್ಟರೆ ಯಾವ್ಯಾವ ಹಳ್ಳಿಗೆ ತೊಂದರೆ ಉಂಟಾಗುತ್ತದೆ ಹಾಗೂ ಎಲ್ಲಿ ಗಂಜಿ ಕೇಂದ್ರ ತೆರೆದರೆ ಸುರಕ್ಷಿತ ಎಂಬ ಪ್ರಾಥಮಿಕ ಅಧಿಕೃತ ದಾಖಲೆ ಕರ್ನಾಟಕ ವಿದ್ಯುತ್ ನಿಗಮ ಅಥವಾ ಜಿಲ್ಲಾಡಳಿತದ ಬಳಿಯೂ ಇರಲಿಲ್ಲ. ಕೆಪಿಸಿ ಅಣೆಕಟ್ಟೆ ನಿರ್ವಣದ ಸಮಯದಲ್ಲಿ ಇದ್ದ ಇಂಜಿನಿಯರ್ಗಳಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬೇಕಾಯಿತು. ಜಿಲ್ಲಾಡಳಿತ ನಿವೃತ್ತ ಅಧಿಕಾರಿಗಳನ್ನು ಕರೆಸಿ ಎಷ್ಟು ನೀರು ಬಿಟ್ಟರೆ ಎಲ್ಲಿವರೆಗೆ ತುಂಬುತ್ತದೆ ಎಂಬುದನ್ನು ಅರಿಯಬೇಕಾಯಿತು.
ನೀರಿನ ಹರಿವನ್ನು ನೋಡಿ ಕೆಪಿಸಿ ಇಂಜಿನಿಯರ್ಗಳು ದಿಕ್ಕು ತೋಚದಂತಾಗಿದ್ದರು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಶ ಮೌದ್ಗಿಲ್, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್, ಜಿಪಂ ಸಿಇಒ ಎಂ.ರೋಶನ್ ಸ್ವತಃ ನಿಂತು ಅಣೆಕಟ್ಟೆಗಳ ನೀರಿನ ಹೊರ ಹರಿವಿನ ನಿಯಂತ್ರಣದ ಕಾರ್ಯ ನಿರ್ವಹಿಸಬೇಕಾಯಿತು. ಈ ಪರಿಸ್ಥಿತಿಯನ್ನು ಅರಿತು ಭವಿಷ್ಯದಲ್ಲಿ ಇಂಥ ಪರಿಸ್ಥಿತಿ ಉದ್ಭವಿಸಿದಲ್ಲಿ ನೆರವಾಗುವಂತೆ ನಕ್ಷೆ ಸಿದ್ಧಪಡಿಸಲಾಗಿದೆ ಎಂದು ಎಂ.ರೋಶನ್ ತಿಳಿಸಿದ್ದಾರೆ.
ಸಮಿತಿ ರಚನೆ: ಕಳೆದ ಬಾರಿ ಆಗಸ್ಟ್ 4ರಿಂದ 11ರವರೆಗೆ ಸಂಭವಿಸಿದ ಪ್ರವಾಹ ಪರಿಸ್ಥಿತಿಯು ಕಾರವಾರ, ಅಂಕೋಲಾ ಜನರನ್ನು ಬೆಚ್ಚಿ ಬೀಳಿಸಿದೆ. ನದಿಯಲ್ಲಿ ಹಿಂದೆಂದೂ ಕಂಡರಿಯದಷ್ಟು ಪ್ರಮಾಣದಲ್ಲಿ ಅಂದರೆ 2.3 ಲಕ್ಷ ಕ್ಯೂಸೆಕ್ ನೀರು ಅಣೆಕಟ್ಟೆಗಳಿಗೆ ಉಕ್ಕಿ ಬಂದಿತ್ತು. ಅಂದಾಜು 142 ಟಿಎಂಸಿ ಅಡಿ ನೀರು ಸಮುದ್ರಕ್ಕೆ ಹರಿದಿತ್ತು. ಇದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಇಂಥ ಸಂದರ್ಭದಲ್ಲಿ ಕೆಪಿಸಿಯು ಜನರ ಸುರಕ್ಷೆ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಯಿತು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಉನ್ನತಾಧಿಕಾರಿಗಳ ಸಮಿತಿ ರಚಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ನದಿಗಳ ವ್ಯಾಪ್ತಿಗೆ ಬರುವ ಎಲ್ಲ ಎಸಿ, ತಹಸೀಲ್ದಾರ್ಗಳು, ಕೆಪಿಸಿ ಇಂಜಿನಿಯರ್ಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಸಮಿತಿ ಈಗಾಗಲೇ ಸಭೆ ನಡೆಸಿದ್ದು, ಗರಿಷ್ಠ 34.50 ಮೀ. ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಕದ್ರಾ ಅಣೆಕಟ್ಟೆಯಲ್ಲಿ 32.50 ಮೀಟರ್ ನೀರು ಸಂಗ್ರಹವಾಗುತ್ತಿದ್ದಂತೆ ಗೇಟ್ಗಳನ್ನು ತೆರೆದು ಹೊರ ಬಿಡಲು ಕೆಪಿಸಿಗೆ ಸೂಚಿಸಲಾಗಿದೆ.
ನದಿಗಳ ಹರಿವಿನ ಬಗ್ಗೆ ಅಧಿಕೃತ ದಾಖಲೆ ಹಾಗೂ ಡಾಟಾ ಸಂಗ್ರಹವಿದ್ದರೆ, ಪ್ರವಾಹದಂಥ ಪರಿಸ್ಥಿತಿ ನಿಭಾಯಿಸಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ನಕ್ಷೆ ಸಿದ್ಧಪಡಿಸಲಾಗಿದ್ದು, ಇದನ್ನು ಇನ್ನು ಕೆಲವೇ ದಿನಗಳಲ್ಲಿ ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಎಂ.ರೋಶನ್, ಜಿಪಂ ಸಿಇಒ