ಯರಗಟ್ಟಿ: ಸಾರ್ವಜನಿಕರು ಜಿಲ್ಲಾ ನ್ಯಾಯಾಧೀಶರಿಂದ ಉಚಿತ ಕಾನೂನು ಅರಿವು ನೆರವು ಲಾಭ ಪಡೆದು ವ್ಯಾಜ್ಯಗಳನ್ನು ಶೀಘ್ರ ಇತ್ಯರ್ಥ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶೆ
ಎಲ್.ವಿಜಯಲಕ್ಷ್ಮೀದೇವಿ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ದಿವಾಣಿ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಸಂಚಾರಿ ಪೀಠವನ್ನು ಶನಿವಾರ ಉದ್ಘಾಟಿಸಿ ಮಾತನಾಡಿ, ಯರಗಟ್ಟಿಯಲ್ಲಿ ಸಾಕಷ್ಟು ವ್ಯಾಜ್ಯ ಇದ್ದು, ವಾರದ ಎರಡು ದಿನ ಮಾತ್ರ ಇಲ್ಲಿ ಕಾರ್ಯನಿರ್ವಹಿಸಲಾಗುತ್ತದೆ. ನ್ಯಾಯವಾದಿಗಳ ಬೇಡಿಕೆಯಂತೆ ಬರುವ ದಿನಗಳಲ್ಲಿ ಮೂರು ದಿನ ನಡೆಸುವಂತೆ ಮನವಿ ಮಾಡಲಾಗುವುದು ಎಂದರು.
ಬೆಳಗಾವಿ ಜಿಲ್ಲಾ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ಪಿ.ಮುರಳಿ ಮೋಹನರಡ್ಡಿ ಮಾತನಾಡಿ, ಸಣ್ಣಪುಟ್ಟ ವ್ಯಾಜ್ಯಗಳನ್ನು ಲೋಕ ಅದಾಲತ್‌ನಲ್ಲಿ ತೀರ್ಮಾನ ಮಾಡಿಕೊಂಡರೆ ಸಾರ್ವಜನಿಕರ ಬಹಳಷ್ಟು ಸಮಸ್ಯೆ ನಿವಾರಣೆಯಾಗುತ್ತವೆ. ಶೀಘ್ರ ನ್ಯಾಯ ಇತ್ಯರ್ಥ ಆಗದೆ ಇರುವುದರಿಂದ ಜನರ ಬಹಳಷ್ಟು ಸಮಯ ಹಣ ವ್ಯಯವಾಗುತ್ತದೆ. ನ್ಯಾಯಾಧೀಶರೊಂದಿಗೆ ಸಹಕಾರದಿಂದ ವ್ಯಾಜ್ಯ ಪರಿಹರಿಸಿಕೊಳ್ಳಬೇಕು ಎಂದರು.