ಜಿಲ್ಲೆ

ನೆರವು ಏನಿದ್ದರೂ ಕೌಂಟರ್​ಗಳಲ್ಲೇ ಕೊಡಬೇಕು

ಧಾರವಾಡ: ಖಾಸಗಿ ವ್ಯಕ್ತಿಗಳು ಊಟ, ಉಪಾಹಾರ, ದಿನಸಿ ವಿತರಿಸುವುದನ್ನು ಕರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

ಶುಕ್ರವಾರ ತಮ್ಮ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಹು-ಧಾ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳ ಬ್ಯೂರೋ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಲಾಕ್​ಡೌನ್ ಮತ್ತು ನಿಷೇಧಾಜ್ಞೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಅದರೊಂದಿಗೆ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಅವರ ಮನೆಗಳಿಗೆ ತಲುಪಿಸಲು ಪ್ರತ್ಯೇಕ ಸಹಾಯವಾಣಿ, ಮಾರಾಟಗಾರರಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಾಮಾಜಿಕ ಅಂತರ ಕಾಪಾಡದೆ ಸ್ಲಂ ಹಾಗೂ ಇತರ ಪ್ರದೇಶಗಳಲ್ಲಿ ಊಟ, ಉಪಾಹಾರ, ದಿನಸಿ ಪದಾರ್ಥಗಳನ್ನು ಅನೇಕರು ವಿತರಿಸುತ್ತಿರುವುದು ಗಮನಕ್ಕೆ ಬಂದಿದೆ. ಸುರಕ್ಷತಾ ಕ್ರಮ ಇಲ್ಲದೇ ರೋಗ ಹರಡುವಿಕೆಗೆ ಕಾರಣವಾಗಬಹುದು. ಗುಂಪು ಸೇರಿ ತೊಂದರೆಯಾಗಬಹುದು. ಆದ್ದರಿಂದ, ದಾನಿಗಳು ಸ್ವತಃ ಹಂಚುವುದನ್ನು ನಿಷೇಧಿಸಲಾಗಿದೆ. ಅವರು ಏನನ್ನೇ ಕೊಡುವುದಿದ್ದರೂ ಜಿಲ್ಲಾಡಳಿತ ಸ್ಥಾಪಿಸಿರುವ ಸಂಗ್ರಹಣಾ ಕೇಂದ್ರಕ್ಕೇ ತಲುಪಿಸಬೇಕು. ಇಂಥವರಿಗೆ ಅಥವಾ ಇಂಥ ಪ್ರದೇಶದವರಿಗೆ ನೆರವನ್ನು ತಲುಪಿಸಿ ಎಂದು ದಾನಿಗಳು ಕೌಂಟರ್​ನಲ್ಲಿ ತಿಳಿಸಿದರೆ, ಅದರಂತೆಯೇ ಮಾಡಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಕರೊನಾ ವೈರಸ್ ಸಮುದಾಯದ ಮಧ್ಯೆ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಲಕಾಲಕ್ಕೆ ಸರ್ಕಾರ, ಆರೋಗ್ಯ ಇಲಾಖೆ ನೀಡುವ ಆದೇಶಗಳನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಇದನ್ನು ಜನರಿಗೆ ಮನವರಿಕೆ ಮಾಡಲು ಮಾಧ್ಯಮಗಳ ಸಹಕಾರ ಅತ್ಯಗತ್ಯ.

ಜಿಲ್ಲೆಯಲ್ಲಿ ವಲಸಿಗರು, ನಿರಾಶ್ರಿತರು, ಕಾರ್ವಿುಕರು ಸೇರಿ ಸುಮಾರು 3 ಸಾವಿರ ನಿರಾಶ್ರಿತರಿಗೆ ಊಟ, ಉಪಾಹಾರ, ವಸತಿ, ಔಷಧ, ಸೇರಿ ಅಗತ್ಯ ಸೌಲಭ್ಯಗಳನ್ನು ಜಿಲ್ಲಾಡಳಿತದಿಂದ ಉಚಿತವಾಗಿ ನೀಡಲಾಗುತ್ತಿದೆ. ಮಾನಸಿಕ ಆರೋಗ್ಯ ಕಾಪಾಡಲು ಆನ್​ಲೈನ್ ಸಹಾಯವಾಣಿ ಹಾಗೂ ಡಿಮ್ಹಾನ್ಸ್ ವೈದ್ಯರಿಂದ ಚಿಕಿತ್ಸಾ ಶಿಬಿರ ಮಾಡಲಾಗುತ್ತಿದೆ.

ಸರ್ಕಾರದ ಆದೇಶದಂತೆ ಪಡಿತರ ಚೀಟಿದಾರರಿಗೆ ಪಡಿತರ ವಿತರಿಸಲಾಗುತ್ತಿದೆ. ಮಹಿಳಾ ಫಲಾನುಭವಿಗಳ ಜನ ಧನ ಖಾತೆಗೆ ಸಹಾಯಧನ ಬಂದಿದೆ ಎಂದರು.

ವಿವಿಧ ಮಾಧ್ಯಮಗಳ ಸ್ಥಾನಿಕ ಮುಖ್ಯಸ್ಥರು, ಪ್ರಧಾನ ವರದಿಗಾರರು ಮಾತನಾಡಿ, ಪ್ರಚಲಿತ ಸಮಸ್ಯೆಗಳು ಮತ್ತು ಅವುಗಳ ಸೂಕ್ತ ನಿರ್ವಹಣೆ, ಪರಿಹಾರಕ್ಕಾಗಿ ಸಲಹೆ, ಅಭಿಪ್ರಾಯಗಳನ್ನು ನೀಡಿದರು.

ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ. ಸುಜಾತಾ ಹಸವಿಮಠ, ಡಾ. ಶಶಿ ಪಾಟೀಲ, ಡಾ. ಕೆ.ಎಂ. ತನುಜಾ, ತಹಸೀಲ್ದಾರ್ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ ಇತರರು ಇದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ ವಂದಿಸಿದರು.

ಬಿಗಿಯಾಗಲಿದೆ ಲಾಕ್​ಡೌನ್

ಅನೇಕ ಮಂದಿ ತರಕಾರಿ, ಹಣ್ಣು ಮಾರಾಟಗಾರರು ಆರೋಗ್ಯ ಸುರಕ್ಷತಾ ಕ್ರಮ ಅನುಸರಿಸುತ್ತಿಲ್ಲ. ಮುಖ್ಯ ರಸ್ತೆ ಹೊರತುಪಡಿಸಿ ಓಣಿ, ಗ್ರಾಮಗಳಲ್ಲಿ ಜನರು ಗುಂಪು ಸೇರುತ್ತಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳು ಗಮನ ಸೆಳೆದರು. ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಸರಿಪಡಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಸೋಂಕು ದೃಢಪಟ್ಟ ವ್ಯಕ್ತಿ ಅಥವಾ ಕ್ವಾರಂಟೈನ್​ನಲ್ಲಿ ಇರುವ ವ್ಯಕ್ತಿ, ಪ್ರದೇಶ, ಸ್ಥಳದ ಬಗ್ಗೆ ಯಾವುದೇ ವ್ಯಕ್ತಿ ಚಿತ್ರ, ವಿಡಿಯೋ ಇತ್ಯಾದಿ ವಿವರ ಬಹಿರಂಗ ಪಡಿಸಬಾರದು. ಮಾಧ್ಯಮಗಳು ಈ ನಿಟ್ಟಿನಲ್ಲಿ ಸಹಕರಿಸುತ್ತಿವೆ.

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ವದಂತಿ ಹರಡಲು ಯಾರಾದರೂ ಪ್ರಯತ್ನಿಸಿದರೆ ಪ್ರಕರಣ ದಾಖಲಿಸಲಾಗುವುದು. ಪೊಲೀಸ್ ಮತ್ತು ಇತರ ಇಲಾಖೆಗಳ ಮೂಲಕ ಜಿಲ್ಲೆಯಲ್ಲಿ ಲಾಕ್​ಡೌನ್ ಜಾರಿಯನ್ನು ಇನ್ನಷ್ಟು ಬಿಗಿಗೊಳಿಸಲಾಗುವುದು. ಜನಸಾಮಾನ್ಯರ ಅಗತ್ಯ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಪತ್ರಿಕೆ ಹಂಚಲು ತೊಂದರೆ ಇಲ್ಲ

ದಿನಪತ್ರಿಕೆಗಳು ಅಗತ್ಯ ಸೇವೆ ವ್ಯಾಪ್ತಿಗೆ ಬರುತ್ತವೆ. ಮೇಲಾಗಿ, ಸರ್ಕಾರದ ಸೂಚನೆ ಹಾಗೂ ಜಾಗೃತಿ ಸಂದೇಶಗಳನ್ನು ತಿಳಿದುಕೊಳ್ಳಲು ಜನರಿಗೆ ಪತ್ರಿಕೆಗಳು ಅತ್ಯಗತ್ಯ. ಆದ್ದರಿಂದ ಲಾಕ್​ಡೌನ್ ಅವಧಿಯಲ್ಲಿ ಪತ್ರಿಕೆ ಏಜೆಂಟರು, ಮನೆ ಮನೆಗೆ ಹಂಚುವವರಿಗೆ, ಚಂದಾ ವಸೂಲಿ ಮಾಡುವವರಿಗೆ ಪೊಲೀಸರು ತೊಂದರೆ ಕೊಡದಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪತ್ರಿಕೆ ಹಂಚುವವರು ಮಾಸ್ಕ್ ಧರಿಸುವುದು ಸೇರಿ ರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.

EndFragment