ಚಿತ್ರದುರ್ಗ: ಯೋಗವೆಂದರೆ ಬಾಹ್ಯ ಪ್ರದರ್ಶನವಲ್ಲ. ಬದಲಿಗೆ ಅಂತರಂಗದ ದರ್ಶನವೇ ನಿಜವಾದ ಯೋಗ ಎಂದು ಯೋಗ ಗುರು ವೈದ್ಯಶ್ರೀ ಚೆನ್ನಬಸವಣ್ಣ ಸ್ವಾಮೀಜಿ ಹೇಳಿದರು.
ಅಂತಾರಾಷ್ಟ್ರೀಯ ಯೋಗದಿನದ ಅಂಗವಾಗಿ ಮುರುಘಾಮಠದಿಂದ ಏರ್ಪಡಿಸಿರುವ 3 ದಿನಗಳ ಯೋಗ ಸಂಭ್ರಮದ 2ನೇ ದಿನ ಗುರುವಾರ, ಅನುಭವಮಂಟಪದಲ್ಲಿ ಯೋಗಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.
ಆರೋಗ್ಯವಂತ ದೇಹ, ಮನಸ್ಸನ್ನು ಹೊಂದಲು ಯೋಗ ಸಹಕಾರಿಯಾಗಿದೆ. ಆಹಾರ ಪದ್ಧತಿ, ಜೀವನಶೈಲಿಯಲ್ಲಿ ಕ್ರಮಬದ್ಧತೆ ರೂಢಿಸಿಕೊಂಡರೆ ಅರಿಷಡ್ವರ್ಗಗಳನ್ನು ನಿಯಂತ್ರಿಸುವ ಮೂಲಕ ಆತ್ಮ ಸಾಕ್ಷಾತ್ಕಾರ ಪಡೆಯುವುದೇ ನಿಜವಾದ ಯೋಗ ಎಂದು ಪ್ರತಿಪಾದಿಸಿದರು.
ಯೋಗದಿಂದ ಗಂಭೀರ ಕಾಯಿಲೆಗಳು ಹತೋಟಿಯಲ್ಲಿ ಇಡಬಹುದಾಗಿದೆ. ನೆಮ್ಮದಿ ಮತ್ತು ಶಾಂತಿಯಿಂದ ಕೂಡಿರಲು ನಮ್ಮಲ್ಲಿ ನಗುವಿರಬೇಕು. ಮನಸ್ಸು ಬಿಚ್ಚಿ ನಗಬೇಕು, ಚುಚ್ಚಿ ನಗಬಾರದು, ವ್ಯಂಗ್ಯದ ನಗುವೂ ಆಗಿರಬಾರದು. ಆಯುರ್ವೇದವನ್ನು ಅನುಸರಿಸಿ ಪೂರ್ವಿಕರು 100ಕ್ಕೂ ಅಧಿಕ ವರ್ಷಗಳ ಕಾಲ ಜೀವಿಸುತ್ತಿದ್ದರು. ಈಗ ಅದು 80, 60, ಮುಂದೆ 30 ವರ್ಷಗಳಿಗೆ ಕುಸಿಯುವ ಲಕ್ಷಣಗಳಿವೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಹಕ್ಕೆ ಒಳ್ಳೆಯದನ್ನು ತೆಗೆದುಕೊಳ್ಳುವುದು ಕೆಟ್ಟದ್ದನ್ನು ಹೊರಹಾಕುವುದೇ ಯೋಗದ ಗುಣಧರ್ಮ. ತನು, ಮನ ಶುಚಿಗೊಳ್ಳುವುದೇ ಬಸವಯೋಗ, ದೇಹ ಮತ್ತು ಮನಸ್ಸನ್ನು ಶುದ್ಧವಾಗಿಟ್ಟುಕೊಳ್ಳಲು ಯೋಗ ಮತ್ತು ಶಿವಯೋಗ ನೆರವಾಗುತ್ತವೆ. ಬಸವಾದಿ ಶಿವಶರಣರು ಯೋಗಪ್ರವೀಣರಾಗಿದ್ದರು ಎಂದರು.
ಜಿಲ್ಲಾ ಯೋಗಾಸನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಯೋಗಾಚಾರ್ಯ ಎಲ್.ಎಸ್.ಚಿನ್ಮಯಾನಂದ, ಛಲವಾದಿ ಗುರು ಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ,ಮೇದಾರಗುರುಪೀಠದ ಶ್ರೀ ಇಮ್ಮಡಿಬಸವ ಕೇತೇಶ್ವರ ಸ್ವಾಮೀಜಿ,ಚಿದರವಳ್ಳಿ-ಶಿರಸಿ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ,ಕುಂಬಾರ ಗುರುಪೀಠದ ಶ್ರೀ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ,ಬಂಜಾರ ಗುರುಪೀಠದ ಶ್ರೀ ಸ ರ್ದಾರ್ ಸೇವಾಲಾಲ್ ಸ್ವಾಮೀಜಿ ಇದ್ದರು. ಜಮುರಾ ಕಲಾವಿದರಿಂದ ವಚನಗಾಯನ ನಡೆಯಿತು.
*ಕೋಟ್
ಯೋಗದಿಂದ ದೇಹಕ್ಕೆ ನವಚೈತನ್ಯ ಬರುತ್ತದೆ. ಕೆಲವು ಕಾಯಿಲೆಗಳ ಉಪಶಮನಕ್ಕೆ ಆಯುರ್ವೇದ ಪರಿಣಾಮಕಾರಿಯಾಗಿದೆ. ವಿದ್ಯಾರ್ಥಿಗಳ ಜ್ಞಾನ ಹೆಚ್ಚಿಸಲು ಯೋಗ ದಿವ್ಯ ಮಾರ್ಗವಾಗಿದೆ.
ಡಾ. ಬಸವಪ್ರಭು ಸ್ವಾಮೀಜಿ, ದಾವಣಗೆರೆ ವಿರಕ್ತಮಠ