ಜಿಲ್ಲೆ

ನೆಮ್ಮದಿಗೆ ಪ್ರವಾಸಿ ತಾಣಗಳನ್ನು ವೀಕ್ಷಿಸಿ

ಬಳ್ಳಾರಿ : ಪ್ರವಾಸಿ ತಾಣಗಳ ವೀಕ್ಷಣೆಯಿಂದ ಮನಸ್ಸಿಗೆ ಆಹ್ಲಾದಕ ಅನುಭವ ದೊರೆಯುತ್ತದೆ ಎಂದು ಲಿಡ್ಕರ್ ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ನಗರದ ಕೋಟೆ ಮುಂಭಾಗದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಪ್ರವಾಸೋದ್ಯಮ ಇಲಾಖೆ ಹಾಗೂ ಹೋಟೆಲ್ ಮಾಲೀಕರ ಸಂಘದ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಸಂಡೂರಿನ ಕುಮಾರಸ್ವಾಮಿ ದೇವಸ್ಥಾನ, ಸ್ವಾಮಿಮಲೈ ಅರಣ್ಯ ಕ್ಷೇತ್ರ, ನಾರಿಹಳ್ಳ ಜಲಾಶಯ, ಬಳ್ಳಾರಿಯ ಐತಿಹಾಸಿಕ ಕೋಟೆ, ಮಿಂಚೇರಿ ಬೆಟ್ಟ, ಸಂಗನಕಲ್ಲು ಗುಡ್ಡ, ಸಿರುಗುಪ್ಪದ ಕೆಂಚನಗುಡ್ಡ, ಕುರುಗೋಡಿನ ದೊಡ್ಡ ಬಸವೇಶ್ವರ ದೇವಸ್ಥಾನ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿದ್ದು, ಜನಸಾಮಾನ್ಯರು ಈ ಸ್ಥಳಗಳಿಗೆ ಭೇಟಿ ನೀಡಿ ಸ್ಥಳೀಯ ಪ್ರವಾಸಿ ತಾಣಗಳನ್ನು ವೀಕ್ಷಿಸಬೇಕು ಎಂದರು. ಮುಂದಿನ ಪೀಳಿಗೆಯು ಇತಿಹಾಸ ಅರಿತುಕೊಳ್ಳಲು ಐತಿಹಾಸಿಕ ಪ್ರವಾಸಿ ತಾಣಗಳನ್ನು ವೀಕ್ಷಿಸಿ ಸಂರಕ್ಷಿಸಿ, ಪೋಷಣೆ ಮಾಡಬೇಕು ಎಂದರು.
ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಪ್ರತಿಯೊಬ್ಬರೂ ಪುಸ್ತಕದ ಓದಿನ ಜತೆಗೆ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ಮಾತ್ರ ಜಗತ್ತಿನ ಸಾಂಸ್ಕೃತಿಕ, ಭೌಗೋಳಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಅರಿಯಲು ಸಾಧ್ಯವಾಗುತ್ತದೆ. ಐತಿಹಾಸಿಕ, ನೈಸರ್ಗಿಕ ತಾಣಗಳ ವೀಕ್ಷಣೆಯಿಂದ ಇತಿಹಾಸದ ಕುರಿತು ಕುತೂಹಲ ಸೃಷ್ಟಿಯಾಗಿ ಜ್ಞಾನ ವೃದ್ಧಿಯಾಗಲಿದೆ. ಜನಸಾಮಾನ್ಯರು ವೀಕ್ಷಣೆ ತಾಣಗಳ ಕುರಿತು ಒಬ್ಬರಿಗೊಬ್ಬರೂ ವಿವರಿಸುತ್ತಾ ಜನಪ್ರಿಯತೆಗೊಳಿಸಬೇಕು. ಪ್ರವಾಸೋದ್ಯಮ ಆಯಾಮಗಳನ್ನು ಅರಿತುಕೊಂಡು ಐತಿಹಾಸಿಕ ಪ್ರಾಮುಖ್ಯತೆ ತಿಳಿದುಕೊಳ್ಳಬೇಕು ಎಂದರು.
ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿದರು. ಬಳಿಕ ಪ್ರವಾಸಿ ಮಿತ್ರ ರಕ್ಷಣಾ ಸಿಬ್ಬಂದಿಗಳಿಗೆ ಪ್ರಶಂಸೆ ಪತ್ರ ವಿತರಿಸಲಾಯಿತು.