ಜಿಲ್ಲೆ

ನೆಮ್ಮದಿ ಕೆಡಿಸುವ ಶಕ್ತಿಯನ್ನು ಮಟ್ಟ ಹಾಕಲಿ

ಹಾನಗಲ್ಲ: ಗುರುಸ್ಥಾನದಲ್ಲಿದ್ದು ಸಮಾಜಕ್ಕೆ ಮಾರ್ಗದರ್ಶನ ಮಾಡಿ, ಧರ್ಮ ಶಾಸ, ಸಂಸ್ಕೃತಿಗಳ ಅರಿವು ನೀಡಿದ ಬ್ರಾಹ್ಮಣ ಸಮುದಾಯ ಯಾವಾಗಲೂ ತನ್ನ ಬೌದ್ಧಿಕ ಗೌರವ ಉಳಿಸಿಕೊಂಡು ಬಂದಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

ಪಟ್ಟಣದ ಶಂಕರಮಠದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಪುರಸಭೆ ನೂತನ ಅಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಈಗ ಜಾತಿ, ಧರ್ಮಗಳ ಹೆಸರಿನಲ್ಲಿ ದ್ವೇಷ ಅಸೂಯೆಗಳು ಎಲ್ಲೆಡೆಗೂ ಹೆಚ್ಚಾಗಿದ್ದರಿಂದ ಸಾಮಾಜಿಕ ತಲ್ಲಣಗಳನ್ನೇ ಎದುರಿಸಬೇಕಾಗಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ನೆಮ್ಮದಿ ಕೆಡಿಸುವ ಶಕ್ತಿಗಳನ್ನು ಮಟ್ಟ ಹಾಕಿ ನೆಮ್ಮದಿಯ ಬದುಕಿಗೆ ಮುಂದಾಗಬೇಕಾಗಿದೆ. ಹಾನಗಲ್ಲ ಪಟ್ಟಣದ ಇತಿಹಾಸದಲ್ಲಿ ಮೊದಲ ಬಾರಿಗೆ ಬ್ರಾಹ್ಮಣ ಸಮುದಾಯದವರು ಪುರಸಭೆ ಅಧ್ಯಕ್ಷರಾಗುವ ಅವಕಾಶ ದೊರೆತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾದ ತಾಲೂಕು ಅಧ್ಯಕ್ಷ ರವಿಚಂದ್ರ ಪುರೋಹಿತ ಮಾತನಾಡಿ, ರಾಜ್ಯ ಸರ್ಕಾರ ಬ್ರಾಹ್ಮಣ ನಿಗಮ ಮಂಡಳಿಗೆ ಅನುದಾನ ನೀಡಿ ಸಹಕರಿಸಬೇಕು. ಹಾನಗಲ್ಲ ತಾಲೂಕಿನಲ್ಲಿ ಯಥೇಚ್ಛವಾಗಿ ನಡೆಯುತ್ತಿರುವ ಗೋಹತ್ಯೆಯನ್ನು ತಡೆಯುವಲ್ಲಿ ಶಾಸಕರು ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಪಟ್ಟಣದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ. ಸಂಜಯ ನಾಯ್ಕ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ದತ್ತಾತ್ರೆಯ ನಾಡಿಗೇರ, ವಸಂತ ಮೊಕ್ತಾಲಿ, ಶ್ರೀನಿವಾಸ ಶಿವಪೂಜಿ ಮಾತನಾಡಿದರು. ಘನಶ್ಯಾಮ ದೇಶಪಾಂಡೆ ಹಾಗೂ ಕೆ.ಎಲ್.ದೇಶಪಾಂಡೆ ಅನಿಸಿಕೆಗಳನ್ನು ಹಂಚಿಕೊಂಡರು.

ವೇ.ಮೂ. ಶಂಕರಭಟ್ ಜೋಶಿ, ಮುಕುಂದಭಟ್ ಕಾಗಿನೆಲ್ಲಿ ವೇದಘೋಷ ಮಾಡಿದರು. ಗಿರೀಶ ದೇಶಪಾಂಡೆ ಸ್ವಾಗತಿಸಿದರು. ಮಹಾಸಭಾ ಕಾರ್ಯದರ್ಶಿ ರವಿ ಪೋತದಾರ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಯುವ ಘಟಕದ ಅಧ್ಯಕ್ಷೆ ಜಯಶ್ರೀ ದೇಶಪಾಂಡೆ ವಂದಿಸಿದರು.