ಜಿಲ್ಲೆ

ನೆಮ್ಮದಿ ಕಸಿದ ಗ್ರಾಮ ಒನ್ ಯೋಜನೆ : ಅಟಲ್‌ಜೀ ಸ್ನೇಹ ಕೇಂದ್ರದ ಸಿಬ್ಬಂದಿಯ ಅಳಲು

ಗಂಗಾಧರ್ ಬೈರಾಪಟ್ಟಣ ರಾಮನಗರ

ಗ್ರಾಮೀಣ ಭಾಗದ ಜನರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗ್ರಾಮ ಒನ್ ಯೋಜನೆ ಅಟಲ್‌ಜೀ ಸ್ನೇಹ ಕೇಂದ್ರದ ಸಿಬ್ಬಂದಿಯ ನೆಮ್ಮದಿ ಕಸಿದಿದೆ.

ಗ್ರಾಮೀಣ ಭಾಗದ ಜನರಿಗೆ ಕಂದಾಯ ಸೇರಿ ಇತರೆ ಸೇವೆಗಳು ಸ್ಥಳೀಯವಾಗಿ ಮತ್ತು ತ್ವರಿತವಾಗಿ ದೊರೆಯುವಂತೆ ಮಾಡಲು ಆರಂಭಿಸಲಾಗಿರುವ ಅಟಲ್‌ಜೀ ಸ್ನೇಹ ಕೇಂದ್ರಗಳಲ್ಲಿ ಸಾವಿರಾರು ಮಂದಿ ದುಡಿಯುತ್ತಿದ್ದಾರೆ. ರಾಜ್ಯ ಸರ್ಕಾರದ ಗ್ರಾಮ ಒನ್ ಯೋಜನೆಯಲ್ಲಿ ಕೇಂದ್ರಗಳನ್ನು ಸ್ಥಾಪಿಸುವ ಪ್ರಕ್ರಿಯೆ ಆರಂಭವಾಗುತ್ತಿದ್ದು, ಅಟಲ್‌ಜೀ ಕೇಂದ್ರದ ಬಹುತೇಕ ಎಲ್ಲ ಸಿಬ್ಬಂದಿಯ ಬದುಕು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ.

ಸೇವಾ ಭದ್ರತೆಯೇ ಇಲ್ಲ: ನೆಮ್ಮದಿ ಯೋಜನೆ 2006ರಲ್ಲಿ ಆರಂಭವಾಗಿದ್ದು ಸೇರಿ ಈಗಿನ ಅಟಲ್ಜೀ ಸ್ನೇಹ ಕೇಂದ್ರದವರೆಗೆ ಸತತ 14 ವರ್ಷಗಳಿಂದ ಹೋಬಳಿ ಮಟ್ಟದಲ್ಲಿ ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರತಿ ಅಟಲ್‌ಜೀ ಕೇಂದ್ರದಲ್ಲಿ ಇಬ್ಬರು ಡೇಟಾ ಎಂಟ್ರಿ ಆಪರೇಟರ್‌ಗಳಂತೆ ರಾಜ್ಯಾದ್ಯಂತ ಒಟ್ಟು 1,950 ಆಪರೇಟರ್‌ಗಳು ಹಾಗೂ 42 ಮಂದಿ ಜಿಲ್ಲಾ ಸಮಾಲೋಚಕರು ಕೆಲಸ ಮಾಡುತ್ತಿದ್ದಾರೆ. ಡೇಟಾ ಎಂಟ್ರಿ ಆಪರೇಟರ್‌ಗಳಿಗೆ 5 ಸಾವಿರ ರೂ. ವೇತನ ನೀಡಲಾಗುತ್ತಿದ್ದರೆ, ಕೆಲವು ಕಡೆ 11,300 ರೂ. ಪಾವತಿಸಲಾಗುತ್ತಿದೆ. ವಿಪರ್ಯಾಸವೆಂದರೆ ಕಳೆದ ವರ್ಷ ಕರೊನಾ ಕಾರಣ ನೀಡಿ ಇವರೆಲ್ಲರಿಗೂ ಕೇವಲ 3 ತಿಂಗಳು ಸಂಬಳ ನೀಡಲಾಗಿದೆ. ಸಂಕಷ್ಟದ ಸಮಯದಲ್ಲೂ ಸಿಬ್ಬಂದಿ ಸರ್ಕಾರದ ಕೈ ಬಿಡದೆ ಕಾರ್ಯನಿರ್ವಹಿಸಿದ್ದಾರೆ.

ಆದರೆ, ಇದೀಗ ಗ್ರಾಮ ಒನ್ ಸ್ಥಾಪನೆಗೆ ಸರ್ಕಾರ ಮುಂದಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಇದರಿಂದಾಗಿ ಸ್ನೇಹ ಕೇಂದ್ರದ ಸಿಬ್ಬಂದಿ ಉದ್ಯೋಗಕ್ಕೆ ಕುತ್ತು ಬಂದಿದೆ. ತಮ್ಮ ಸೇವೆಯನ್ನು ಸರ್ಕಾರ ಖಾಯಂ ಮಾಡಬಹುದು, ಸೇವಾ ಭದ್ರತೆ ಒದಗಿಸಬಹುದು ಎಂಬ ಕನಸಿನಲ್ಲಿ ಸಿಬ್ಬಂದಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ಈಗ ಅತಂತ್ರ ಸ್ಥಿತಿ ತಲುಪಿದ್ದಾರೆ. ಇವರಲ್ಲಿ ಹೆಚ್ಚಿನವರು ಯಾವುದಾದರೂ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಹಾಕುವ ವಯೋಮಿತಿಯನ್ನು ಮೀರಿದವರಾಗಿದ್ದಾರೆ. ನಮ್ಮ ಮತ್ತು ನಮ್ಮ ಕುಟುಂಬದ ಭವಿಷ್ಯವೇನು ಎಂಬ ಚಿಂತೆ ಅವರೆಲ್ಲರನ್ನೂ ಕಾಡುತ್ತಿದೆ.

ಪ್ರಶಂಸೆಗೆ ಪಾತ್ರ: ಪ್ರತಿ ಹೋಬಳಿ ಕೇಂದ್ರದಲ್ಲಿ ಗ್ರಾಮ ಒನ್ ಕೇಂದ್ರವನ್ನು ಸ್ಥಾಪನೆ ಮಾಡಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಗ್ರಾಮ ಒನ್ ಕೇಂದ್ರದಲ್ಲೇ ಅರ್ಜಿ ಸ್ವೀಕಾರ ಮತ್ತು ವಿಲೇವಾರಿ ಮಾಡಲಾಗುತ್ತಿದೆ. ಅಟಲ್‌ಜೀ ಸ್ನೇಹ ಕೇಂದ್ರಗಳು ಬಂದ್ ಆಗಲಿವೆ. ಇದರಿಂದ ಸ್ವಾಭಾವಿಕವಾಗಿ ಸಿಬ್ಬಂದಿಗೆ ಕೆಲಸ ಇಲ್ಲದಂತೆ ಆಗುತ್ತದೆ. ಆದರೆ, ರಾಜ್ಯದ ಒಟ್ಟು 42 ಅಟಲ್ಜೀ ಕೇಂದ್ರಗಳಲ್ಲಿ ಸಿಬ್ಬಂದಿಯ ಅವಿರತ ಶ್ರಮದ ಪ್ರತಿಫಲವಾಗಿ ರಾಜ್ಯ ಸರ್ಕಾರಕ್ಕೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಬಂದಿವೆ. ಆದರೂ ಇವರಿಗೆ ಸಲ್ಲಬೇಕಾದ ಪುರಸ್ಕಾರ ಸಲ್ಲದೆ, ಈಗ ಉದ್ಯೋಗಕ್ಕೂ ಸಂಚಕಾರ ಬಂದೊದಗಿದೆ.

ಸರ್ಕಾರ ಗಮನ ಹರಿಸಬೇಕಿದೆ: ಅಟಲ್‌ಜೀ ಸ್ನೇಹ ಕೇಂದ್ರಗಳ ಸಿಬ್ಬಂದಿಗೆ ಪರ್ಯಾಯ ಉದ್ಯೋಗ ಕಲ್ಪಿಸಲು ಸರ್ಕಾರ ಮುಂದಾಗಬೇಕು. ಇಲ್ಲವೇ ಗ್ರಾಮ ಒನ್ ಕೇಂದ್ರಗಳಲ್ಲಿ ಇವರ ಸೇವೆ ಮುಂದುವರಿಸಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಇವರನ್ನೇ ನಂಬಿಕೊಂಡಿರುವ ನೂರಾರು ಕುಟುಂಬಗಳು ಬೀದಿಗೆ ಬೀಳುವುದು ಖಚಿತ.

ಅಟಲ್‌ಜೀ ಸ್ನೇಹ ಕೇಂದ್ರಗಳಲ್ಲಿ ನಾವು ಜನಪರವಾಗಿ ಕೆಲಸವನ್ನು ಮಾಡುತ್ತಿದ್ದೇವೆ. ಇದೀಗ ಗ್ರಾಮ ಒನ್ ಕೇಂದ್ರ ಸ್ಥಾಪನೆಯಿಂದ ರಾಜ್ಯದ 2 ಸಾವಿರ ಮಂದಿಯ ಉದ್ಯೋಗಕ್ಕೆ ಕುತ್ತು ಬಂದಿದೆ. ನಮ್ಮ ಬದುಕು ಬೀದಿಗೆ ಬೀಳದಂತೆ ಸರ್ಕಾರ ನೋಡಿಕೊಳ್ಳಬೇಕಿದೆ. ಮುಜಾಯಿಲ್, ಅಟಲ್ ಜೀ ಸ್ನೇಹ ಕೇಂದ್ರ ನೌಕರರ ಸಂಘದ ಜಿಲ್ಲಾಧ್ಯಕ್ಷ