ಜಿಲ್ಲೆ

ನೆಪ್ರೋ, ಯುರಾಲಜಿ ಸಂಸ್ಥೆಯಲ್ಲಿ ಅತ್ಯಾಧುನಿಕ ಚಿಕಿತ್ಸೆ

ಮೈಸೂರು: ಕೆ.ಆರ್. ಆಸ್ಪತ್ರೆಯಲ್ಲಿರುವ ನೆಪ್ರೋ, ಯುರಾಲಜಿ ಸಂಸ್ಥೆಯಲ್ಲಿ ರೋಗಿಗಳಿಗೆ ಹೆಚ್ಚಿನ ಅತ್ಯಾಧುನಿಕ ಚಿಕಿತ್ಸೆ ನೀಡುವ ಸಲುವಾಗಿ ಹೋಲ್‌ಮಿಯಮ್ 35 ವ್ಯಾಟ್ ಲೇಸರ್ ಯಂತ್ರ ಅಳವಡಿಸಲಾಗಿದೆ ಎಂದು ರಾಜ್ಯ ನೆಪ್ರೋ, ಯುರಾಲಜಿ ಸಂಸ್ಥೆ ನಿರ್ದೇಶಕ ಡಾ. ಆರ್. ಕೇಶವಮೂರ್ತಿ ಹೇಳಿದರು.
ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಸಂಸ್ಥೆಯಲ್ಲಿ ನೂತನವಾಗಿ ಅಳವಡಿಸಿರುವ ಹೋಲ್‌ಮಿಯಮ್ ಲೇಸರ್ ಯಂತ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಯಂತ್ರದ ಸಹಾಯದಿಂದ ರೋಗಿಯ ಶರೀರದಲ್ಲಿ ಯಾವುದೇ ರಂಧ್ರ ಮಾಡದೆ, ಲೇಸರ್ ಕಿರಣಗಳ ಮುಖಾಂತರ 2 ಸೆಂ.ಮೀ. ಇರುವ ಕಿಡ್ನಿ ಕಲ್ಲುಗಳನ್ನು ಸಂಪೂರ್ಣವಾಗಿ ಚಿಕಿತ್ಸೆ ನೀಡಿ ತೆಗೆದು ಹಾಕಬಹುದು. ಈ ಯಂತ್ರವು ಮೈಸೂರಿನ ಸರ್ಕಾರಿ ಆಸ್ಪತ್ರೆಗಳಲ್ಲೇ ಪ್ರಥಮ ಲೇಸರ್ ಯಂತ್ರವಾಗಿದ್ದು, ಮೈಸೂರು, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಿಂದ ಬರುವ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ನೀಡಲು ಅನುಕೂಲವಾಗಿದೆ ಎಂದರು.
ಈ ಚಿಕಿತ್ಸೆಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಪಡೆಯಲು ರೂ. 60 ಸಾವಿರದಿಂದ 70 ಸಾವಿರದವರೆಗೆ ವೆಚ್ಚವಾಗುತ್ತದೆ. ಈ ಚಿಕಿತ್ಸೆ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಸಂಪೂರ್ಣ ಉಚಿತವಾಗಿದ್ದು, ಎಪಿಎಲ್ ಕಾರ್ಡ್‌ದಾರರು ಶೇ. 70 ರಷ್ಟು ಹಣವನ್ನು ಕಟ್ಟಬೇಕಾಗುತ್ತದೆ. ಉಳಿದ ಶೇ. 30 ರಷ್ಟು ಹಣವನ್ನು ಸರ್ಕಾರವೇ ಭರಿಸುತ್ತದೆ. ಪರಿಶಿಷ್ಟ ಜಾತಿ, ಪಂಗಡದ ರೋಗಿಗಳಿಗೆ ಉಚಿತವಿದ್ದು ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಸಹ ಲಭ್ಯವಿರುತ್ತದೆ ಎಂದ ತಿಳಿಸಿದರು.
ನೆಪ್ರೋ, ಯುರಾಲಜಿ ಸಂಸ್ಥೆಗೆ ಮೈಸೂರು ಜಯದೇವ ಆಸ್ಪತ್ರೆ ಪಕ್ಕದಲ್ಲಿ ಒಂದು ಎಕರೆ ಜಾಗ ಗುರುತಿಸಿದ್ದು ಜಾಗ ಹಸ್ತಾಂತರದ ನಂತರ 200 ಹಾಸಿಗೆಯುಳ್ಳ ಆಸ್ಪತ್ರೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಯುರಾಲಜಿ ಮುಖ್ಯಸ್ಥ ಡಾ. ಜೆ.ಬಿ. ನರೇಂದ್ರ ಮಾತನಾಡಿ, ನಮ್ಮ ಸಂಸ್ಥೆಗೆ ರೋಗಿಗಳ ಮೇಲೆ ಇರುವ ಕಾಳಜಿಯಿಂದ 22 ಲಕ್ಷ ರೂ. ಬೆಲೆಬಾಳುವ ಅತ್ಯಾಧುನಿಕ ಲೇಸರ್ ಯಂತ್ರವನ್ನು ಸರ್ಕಾರದಿಂದ ನೀಡಲಾಗಿದೆ. ನಮ್ಮ ಸಂಸ್ಥೆಯಲ್ಲಿ ಇದುವರೆಗೂ 40 ಸಾವಿರ ರೋಗಿಗಳಿಗೆ ಶಸ್ತ್ರಚಿಕಿತ್ಸೆ, 60 ಸಾವಿರ ರೋಗಿಗಳಿಗೆ ಡಯಾಲಿಸಿನ್ ಮಾಡಲಾಗಿದೆ. 20 ಡಯಲಿಸಿನ್ ಯಂತ್ರಗಳು ನಿರಂತರವಾಗಿ ಕೆಲಸ ಮಾಡುತ್ತಿದ್ದು ಈ ಹೊಸ ಲೇಸರ್ ಯಂತ್ರದಿಂದ ಮೈಸೂರು ಭಾಗದ ರೋಗಿಗಳಿಗೆ ಅನುಕೂಲವಾಗಿದೆ ಎಂದು ಹೇಳಿದರು.
ಅರಿವಳಿಕೆ ತಜ್ಞ ವೈದ್ಯ ಡಾ.ಕೈಲಾಸ್, ನೆಪ್ರೋಲಜಿಸ್ಟ್ ಡಾ. ಶಶಿಕಿರಣ್, ಶುಶ್ರೂಷಕರಾದ ಮೀನಾಕ್ಷಿ, ಸುಬ್ರಹ್ಮಣ್ಯ, ಅಮರ್‌ನಾಥ್, ಸೌಮ್ಯ ಇತರರು ಇದ್ದರು.