ಜಿಲ್ಲೆ

ನೆನೆಗುದಿಗೆ ಬಿದ್ದ ಚಿಲ್ಲಿ ಮಾರುಕಟ್ಟೆ

ಬಳ್ಳಾರಿ : ಮೆಣಸಿನಕಾಯಿ ಬೆಳೆಯುತ್ತಿರುವ ರೈತರ ಅನುಕೂಲಕ್ಕಾಗಿ ಕಳೆದ ಮೂರು ವರ್ಷದ ಹಿಂದೆ ಜಿಲ್ಲೆಯಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದ ಸರ್ಕಾರ ಇನ್ನೂ ಭೂಮಿ ಪೂಜೆ ನೆರವೇರಿಸಿಲ್ಲ.
ಬಳ್ಳಾರಿ ಹಾಗೂ ನೆರೆಯ ಆಂಧ್ರದ ನೆರೆಯ ಜಿಲ್ಲೆಗಳಲ್ಲಿ ಬೆಳೆಯುವ ಮೆಣಸಿಕಾಯಿಯ ಬಹುಪಾಲು ಬ್ಯಾಡಗಿ ಮಾರುಕಟ್ಟೆಗೆ ರವಾನೆಯಾಗಲಿದೆ. ಆದರ ಬದಲು ಇಲ್ಲಿಯೇ ಪ್ರೋಸೆಸಿಂಗ್ ಯೂನಿಟ್ ಸ್ಥಾಪಿಸಿದರೆ ಸಾಗಣೆ ವೆಚ್ಚ ಉಳಿಯುವ ಜತೆಗೆ ಒಳ್ಳೆಯ ದರ ಸಿಗಲಿದೆ. ಉದ್ದಿಮೆದಾರರಿಗೂ ಅನುಕೂಲವಾಗಲಿದೆ ಎಂಬ ಉದ್ದೇಶದಿಂದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಘೋಷಿಸಿದ್ದರು. ಎರಡು ಸರ್ಕಾರ ಬದಲಾವಣೆಯಾದರೂ ಇಲ್ಲಿಯವರೆಗೆ ವಿವಿಧ ನೆಪ ಹೇಳುತ್ತಿದ್ದಾರೆ.
ಆರಂಭದಲ್ಲಿ ನಗರದ ಹೊರವಲಯದ ಆಲದಹಳ್ಳಿ ಬಳಿಯ ಸರ್ವೆ ನಂ 75, 87, 88 ರಲ್ಲಿ 26 ಎಕರೆ ಪ್ರದೇಶದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಶೌಚಲಯ, ಮಳಿಗೆಗಳು ಸೇರಿದಂತೆ ಬ್ಯಾಡಗಿ ರೀತಿಯಲ್ಲಿ ಎಲ್ಲ ಸೌಲಭ್ಯ ಒಳಗೊಂಡ ಮಾರುಕಟ್ಟೆ ನಿರ್ಮಾಣಕ್ಕೆ ಉದ್ದೇಶಿಸಲಾಗಿತ್ತು. ಆದರೆ, 87 ಮತ್ತು 88 ಸರ್ವೆ ನಂಬರ್ ವ್ಯಾಪ್ತಿಯಲ್ಲಿ ಹಳ್ಳ ಹರಿದು ಹೋಗುತ್ತಿದ್ದು, ಈ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಿಸಿದರೆ ರೈತರಿಗೆ ತೊಂದರೆಯಾಗಲಿದೆ ಹಾಗೂ ಸರ್ಕಾರದ ಹಣ ಪೋಲಾಗಲಿದೆ ಎಂಬ ಉದ್ದೇಶದಿಂದ ಅಧಿಕಾರಿಗಳು ಸ್ಥಳ ಬದಲಾವಣೆಗೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆಗಿನ ಜಿಲ್ಲಾ ಉಸ್ತುವಾರಿ ಸಚಿವರು, ಗ್ರಾಮೀಣ ಶಾಸಕರು ಮಾರುಕಟ್ಟೆ ನಿರ್ಮಾಣದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಸ್ಥಳ ಬದಲಾವಣೆಗೆ ಒಪ್ಪಿಗೆ ಸೂಚಿಸಿದ್ದರು. ಸದ್ಯ ಅದರ ಸಮೀಪದಲ್ಲಿರುವ ಸರ್ವೆ ನಂ. 25 ಸರ್ಕಾರಿ ಸ್ಥಳವಾಗಿದ್ದು, ಅಲ್ಲಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಮಾಡಿ ಎಂದು ಸರ್ಕಾರ ಸೂಚಿಸಿದೆ.
23.25 ಎಕರೆ ಪ್ರದೇಶದ 25 ಕೋಟಿ ರೂ. ವೆಚ್ಚದಲ್ಲಿ ಮೆಣಸಿಕಾಯಿ ಮಾರುಕಟ್ಟೆ ನಿರ್ಮಾಣಕ್ಕೆ ಎಪಿಎಂಸಿ ಅಧಿಕಾರಿಗಳು ಟೆಂಡರ್ ಕರೆಯಲಾಗಿತ್ತು. ಆದರೆ. ಯಾವ ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದಾರೆ. ಸದ್ಯ ಎಪಿಎಂಸಿ ಯು ಸರ್ಕಾರ ಸಂಸ್ಥೆಯ ನರ್ಬಾಡ್ ಮೂಲಕ ನಿರ್ಮಾಣ ಮಾಡಲು ಉದ್ದೇಶಿಸಿದೆ. ಮಾರುಕಟ್ಟೆ ನಿರ್ಮಾಣದ ವೆಚ್ಚದಲ್ಲಿ ಶೇ 25% ರಷ್ಟು ಎಪಿಎಂಸಿ ವ್ಯಯಿಸಿದರೆ, ಉಳಿದ ಹಣ ನರ್ಬಾಡ್ ಸಂಸ್ಥೆ ನೀಡುವುದು. ಈ ಮಾರುಕಟ್ಟೆ ಸಮೀಪದಲ್ಲಿಯೇ 11 ಕೋಟಿ ರೂ. ವೆಚ್ಚದಲ್ಲಿ ಕೋಲ್ಡ್ ಸೋರೇಜ್ ನಿರ್ಮಿಸಲು ಡಿಪಿಆರ್ ತಯಾರಿಸಲಾಗಿದೆ ಎಂದು ಎಪಿಎಂಸಿ ಅಧಿಕಾರಿಯೊಬ್ಬರು ತಿಳಿಸಿದರು. ಬಳ್ಳಾರಿಯ ಮೆಣಸಿಕಾಯಿಯನ್ನು 250 ಕಿ.ಮೀ. ದೂರದ ಬ್ಯಾಡಗಿ ಮಾರುಕಟ್ಟೆಗೆ ಸಾಗಿಸುವುದನ್ನು ತಡೆಯಲು ಸರ್ಕಾರ ಕೂಡಲೇ ಮಾರುಕಟ್ಟೆ ಕಾಮಗಾರಿ ಆರಂಭಿಸಲಿ ಎಂಬುದು ರೈತರ ಒತ್ತಾಯವಾಗಿದೆ.
ಬಾಕ್ಸ್… ಜಿಲ್ಲೆಯಲ್ಲಿ ಕಳೆದ ವರ್ಷ 45 ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿಕಾಯಿ ಬೆಳೆಯಲಾಗಿತ್ತು. ಆದರೆ, ಕೀಟಗಳ ಬಾಧೆ ಹಾಗೂ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಈಡಾಗಿದ್ದರು. ಈ ವರ್ಷ ಮುಂಗಾರು ಆರಂಭವಾದರೂ ಮೆಣಸಿಕಾಯಿ ಬಿತ್ತನೆ ಮಾತ್ರ ನಡೆದಿಲ್ಲ. ಇದಲ್ಲದೆ, ಲಕ್ಷಾಂತರ ಕ್ವಿಂಟಾಲ್ ನಷ್ಟು ಮೆಣಸಿಕಾಯಿಗಳನ್ನು ಜಿಲ್ಲಾ ಹಾಗೂ ಬ್ಯಾಡಗಿಯ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಲಾಗಿದೆ. ಆದ್ದರಿಂದ ಮುಂದಿನ ಬಾರಿಯು ಉತ್ತಮ ಬೆಲೆ ದೊರೆಯುವುದಿಲ್ಲ ಎಂಬ ಉದ್ದೇಶದಿಂದ ಮೆಣಸಿನಕಾಯಿ ಬೆಳೆಯಲು ರೈತರು ಹಿಂದೇಟು ಹಾಕಿದ್ದಾರೆ.

ಕೋಟ್… ಮೆಣಸಿಕಾಯಿ ಮಾರುಕಟ್ಟೆ ನಿರ್ಮಾಣ ಹಾಗೂ ಇತರೆ ಸೇರಿದಂತೆ ಅಧಿಕಾರಿಗಳ ಜತೆ ಎರಡ್ಮೂರು ದಿನಗಳಲ್ಲಿ ಸಭೆ ಕರೆದು ಚರ್ಚಿಸಲಾಗುವುದು. ರೈತರ ಅನುಕೂಲಕ್ಕಾಗಿ ಮೆಣಸಿನಕಾಯಿ ಮಾರುಕಟ್ಟೆ ನಿರ್ಮಾಣ ಮಾಡಲಾಗುವುದು.

  • ನಾಗರಾಜ ಕಟ್ಟಿಮನಿ, ಅಧ್ಯಕ್ಷ, ಎಪಿಎಂಸಿ.