ಜಿಲ್ಲೆ

ನೆನಪಿನ ಬುತ್ತಿಯೊಂದಿಗೆ ರಾಜ್ಯಗಳತ್ತ ಹೆಜ್ಜೆ

‘ಯಾ ನಿರಚಾವುದಿ ಕಾಲು ಆ್ಯಮ್ ನಿಗೊತಾಚಿ, ಜೀ ಉತ ಬಂದಿ ಕಾವು……’ ಇದೇನು ಎಂದು ನಿಮಗೆ ಆಶ್ಚರ್ಯ ಮೂಡಿಸಬಹುದು. ಆದರೆ, ಹೀಗೆಂದು ಹೇಳಿಕೊಂಡವರು 26ನೇ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ಪಾಲ್ಗೊಂಡಿದ್ದ ಸಿಕ್ಕಿಂನ ವಿದ್ಯಾರ್ಥಿ ಪ್ರತಿನಿಧಿ.
ಅಂದರೆ ಐದು ದಿನಗಳವರೆಗೆ ನಾವು ಧಾರವಾಡವನ್ನು ಅನುಭವಿಸಿದ್ದೇವೆ. ನಮ್ಮೂರಲ್ಲಿ ಹೆಚ್ಚು ಚಳಿ ಇರುತ್ತದೆ. ಇಲ್ಲಿ ಸೆಕೆ ಇದೆ. ಆದರೂ, ಈ ವಾತಾವರಣ ನಮಗೆ ಹೊಸ ಅನುಭವ ನೀಡಿದೆ ಎಂದು ಸಿಕ್ಕಿಂನ ಮುಸ್ಕಾನ್ ಪ್ರತಿಕ್ರಿಯಿಸಿದರು.
5 ದಿನಗಳ ಕಾಲ ನಗರದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ವಿವಿಧ ರಾಜ್ಯಗಳ ಯುವಕರ ಪಡೆ ಸಾಕಷ್ಟು ಸಂಭ್ರಮಿಸಿ ನೆನಪಿನ ಬುತ್ತಿ ಕಟ್ಟಿಕೊಂಡು ತಮ್ಮ ರಾಜ್ಯಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಐದು ದಿನಗಳ ಕಾಲ ಒಂದೊಂದು ರಾಜ್ಯದ ಯುವಕರಿಗೆ ಒಂದೊಂದು ರೀತಿಯ ಅನುಭವ ಸಿಕ್ಕಿದೆ.
ಸಿಕ್ಕಿಂನ ಸದ್ಯದ ಹವಾಮಾನ (10-15 ಡಿಗ್ರಿ ಸೆಲ್ಸಿಯಸ್)ಕ್ಕಿಂತ ಕರ್ನಾಟಕದಲ್ಲಿ ಎರಡು ಪಟ್ಟು ಹೆಚ್ಚು (28-30) ಇದೆ. ಆದಾಗ್ಯೂ ಯಾವುದೇ ಹವಾಮಾನಕ್ಕೆ ಹೊಂದಿಕೊಂಡು ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಪ್ರತಿನಿಧಿಗಳು. ಕೆಲವರಿಗೆ ಆಹಾರದಲ್ಲಿ ವ್ಯತ್ಯಾಸ…, ಇನ್ನೊಬ್ಬರಿಗೆ ಹವಾಮಾನ…. ಹೀಗೆ ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ರೀತಿಯ ಹೊಸ ಅನುಭವವಾಗಿದೆ.
ಯುವ ಜನೋತ್ಸವದಲ್ಲಿ ಪಾಲ್ಗೊಂಡಿದ್ದ ನೆಹರು ಯುವ ಕೇಂದ್ರದ ಯುವಕರು ಸೇರಿ ಎಲ್ಲ ಪ್ರತಿನಿಧಿಗಳು ಸಂಭ್ರಮಿಸಿದ್ದಾರೆ. ನೆಹರು ಯುವ ಕೇಂದ್ರದ ಪ್ರತಿನಿಧಿಗಳು ತಮ್ಮ ಕಲೆಯ ಅನಾವರಣಕ್ಕೆ ಸಿಕ್ಕ ವೇದಿಕೆಯ ಪ್ರಯೋಜನ ಪಡೆದು ತಮ್ಮ ಕಲೆಯನ್ನು ಇತರರಿಗೆ ಪರಿಚಯಿಸಿದ್ದಲ್ಲದೆ ಹೆಚ್ಚಿನ ವ್ಯಾಪಾರ-ವಹಿವಾಟು ಸಹ ನಡೆಸಿದ್ದಾರೆ.
ಇದರ ಹೊರತಾಗಿ ಯುವ ಪ್ರತಿನಿಧಿಗಳು ಸಮರ ಕಲೆ, ಜಾನಪದ ನೃತ್ಯ, ಸಂಗೀತ, ಚಿತ್ರಕಲೆ, ಕ್ಲೇ ಮಾಡೆಲಿಂಗ್, ಸಾಹಸ ಪ್ರದರ್ಶನಗಳ ಜತೆಗೆ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದಾರೆ. ಭಾಷೆ, ಸಂಸ್ಕೃತಿ ಹೀಗೆ ಎಲ್ಲ ಕಟ್ಟಳೆಗಳನ್ನು ಮೀರಿ ಎಲ್ಲರೊಂದಿಗೆ ಒಂದಾಗಿ ಸೇರಿ ಬಹುದಿನಗಳ ಗೆಳೆಯರಂತೆ ಕಾಲ ಕಳೆದಿದ್ದಾರೆ.
ಯುವ ಪ್ರತಿನಿಧಿಗಳು ತಮ್ಮ ಸಂಸ್ಕೃತಿಯನ್ನು ಇತರ ರಾಜ್ಯಗಳ ಪ್ರತಿನಿಧಿಗಳಿಗೆ ತಿಳಿಸುವುದರ ಜತೆಗೆ ಅವರ ಸಂಸ್ಕೃತಿಯನ್ನು ತಾವೂ ಅರಿಯುವ ಕೆಲಸ ಮಾಡಿದ್ದಾರೆ. ತಮ್ಮ ರಾಜ್ಯಗಳಿಗೆ ಭೇಟಿ ನೀಡಿ ಅಲ್ಲಿನ ಸಂಸ್ಕೃತಿ, ಕಲೆಯನ್ನು ಇನ್ನೂ ಹೆಚ್ಚಾಗಿ ಅರಿತು ಪ್ರಕೃತಿ ಸೌಂದರ್ಯವನ್ನೂ ಆಸ್ವಾದಿಸಲು ಭೇಟಿ ನೀಡಿ ಎಂದು ಆಹ್ವಾನ ನೀಡಿ ತಮ್ಮ ರಾಜ್ಯಗಳತ್ತ ಭಾರವಾದ ಮನಸ್ಸಿನಿಂದಲೇ ಹೆಜ್ಜೆ ಹಾಕಿದ್ದಾರೆ.

----ಕೋಟ್---
ಯುವ ಜನೋತ್ಸವದಲ್ಲಿ ಸಾಕಷ್ಟು ಆನಂದಿಸಿದ್ದೇವೆ. ಇಲ್ಲಿನ ಆಹಾರ ತುಂಬ ಸಿಹಿಯಾಗಿತ್ತು. ಜಾನಪದ ನೃತ್ಯದಲ್ಲಿ ಭಾಗವಹಿಸಿದ್ದೆ. ಊಟ, ವಸತಿ, ಸಾರಿಗೆ ಸೇರಿ ಯಾವುದೇ ಕೊರತೆ, ಸಮಸ್ಯೆ ಆಗದಂತೆ ಸಕಲ ವ್ಯವಸ್ಥೆ ಮಾಡಿದ್ದರು. ಇದೊಂದು ರೀತಿ ಹೊಸ ಅನುಭವ ನೀಡಿದೆ. ಜೀವನದಲ್ಲಿ ಸದಾ ನೆನಪಿಡುವ ಕ್ಷಣವಾಗಿದೆ.
*ಮುಸ್ಕಾನ್, ಸಿಕ್ಕಿಂ ಪ್ರತಿನಿಧಿ
-----------ಕೋಟ್------
ಯುವಜನೋತ್ಸವದಲ್ಲಿ ಭಾಗವಹಿಸಿದ್ದು ಅತ್ಯಂತ ಖುಷಿಯಾಗಿದೆ. ವಿವಿಧ ಪ್ರಕಾರಗಳ ಕಲೆ ಆಸ್ವಾದಿಸಿ ಅವುಗಳ ಬಗ್ಗೆ ಅರಿಯಲು ಉತ್ತಮ ಅವಕಾಶ ಸಿಕ್ಕಿದೆ. ಛತ್ತೀಸ್‌ಗಡದ ಮಟ್ಪರಿ ಶಿಲ್ಪಕಲೆಯನ್ನು ಯುವ ಕೃತಿಯಲ್ಲಿ ಪ್ರದರ್ಶನ ಮಾಡಿದ್ದೇನೆ. ಶಿಲ್ಪಕಲೆಯನ್ನು ಕಂಡ ಜನರು ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ಖರೀದಿಗೆ ಆರ್ಡ್‌ರ್ ಸಹ ನೀಡಿದ್ದಾರೆ.

  • ಅಭಿಷೇಕ ಸಪನ್, ಛತ್ತೀಸ್‌ಗಡ, ನೆಹರು ಯುವ ಕೇಂದ್ರದ ಸದಸ್ಯ,