ಮೂಡಿಗೆರೆ ತಾಲೂಕಿನ ಗುಡ್ಡಟ್ಟಿ ಗ್ರಾಮದ ಅಕೇಶಿಯಾ ನೆಡುತೋಪಿನಲ್ಲಿ ಮರಗಳನ್ನು ಕಡಿದುಹಾಕಿರುವುದು. 
ಜಿಲ್ಲೆ

ನೆಡುತೋಪಿನಲ್ಲಿದ್ದ ಅಕೇಶಿಯಾ ಮರಗಳ ಕಳವು

ಎಸ್.ಎನ್.ರವೀಂದ್ರ

ಮೂಡಿಗೆರೆ: ಬಣಕಲ್ ಹೋಬಳಿ ಗುಡ್ಡಟ್ಟಿ ಗ್ರಾಮದ ಅರಣ್ಯ ಇಲಾಖೆಯ ನೆಡುತೋಪಿನಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯಲಾಗಿದೆ. ಇದರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾಗಿಯಾಗಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಗುಡಟ್ಟಿ ಗ್ರಾಮದ ಸರ್ವೇ ನಂಬರ್ 254ರಲ್ಲಿ ಅರಣ್ಯ ಇಲಾಖೆಯ ಸಾಮಾಜಿಕ ವಿಭಾಗದಿಂದ ಅಕೇಶಿಯಾ ಮರಗಳ ನೆಡುತೋಪು ಬೆಳೆಸಲಾಗಿದೆ. ಇದರಲ್ಲಿ ಬೆಲೆಬಾಳುವ ಮರಗಳನ್ನು ಕಳೆದವಾರ ಕಡಿಯಲಾಗಿದೆ. ಕಡಿದ ಮರದ ದಿಮ್ಮಿಗಳನ್ನು ಬಣಕಲ್ ಸಮೀಪದ ಪ್ಲೈನಿಂಗ್ ಕೇಂದ್ರಕ್ಕೆ ಸಾಗಿಸಲಾಗಿದೆ. ನೆಡುತೋಪಿನ ಉಸ್ತುವಾರಿ ಕರ್ತವ್ಯದಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅಕೇಶಿಯಾ ಮರದ ದಿಮ್ಮಿಗಳನ್ನು ತಂದು ಹಾಕಿದ್ದಾರೆ ಎಂದು ಪ್ಲೈನಿಂಗ್ ಕೇಂದ್ರದ ಮಾಲೀಕ ಹೇಳಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸ್ಥಳೀಯರು ದೂರು ಸಲ್ಲಿಸಿದ್ದಾರೆ. ಪ್ಲೈನಿಂಗ್ ಕೇಂದ್ರಕ್ಕೆ ಭೇಟಿ ನೀಡಿರುವ ಮೂಡಿಗೆರೆ ಆರ್‌ಎಫ್‌ಒ ಕಾವ್ಯಾ ಅವರು, ಪ್ಲೈನಿಂಗ್ ಕೇಂದ್ರದಲ್ಲಿದ್ದ ಮರಗಳನ್ನು ಪರಿಶೀಲಿಸಿ ಮರದ ದಿಮ್ಮಿಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಕುರಿತು ಆರ್‌ಎಫ್‌ಒ ಕಾವ್ಯಾ ಮಾಹಿತಿ ನೀಡಿದ್ದು, ಗುಡ್ಡಟ್ಟಿ ಗ್ರಾಮದ ಅರಣ್ಯ ಇಲಾಖೆ ನೆಡುತೋಪಿನಲ್ಲಿ ಮರಗಳನ್ನು ಅಕ್ರಮವಾಗಿ ಕಡಿದು ದಿಮ್ಮಿಗಳನ್ನಾಗಿ ಮಾಡಿ ಅದರಲ್ಲಿ ಫರ್ನಿಚರ್ ತಯಾರಿಸುವ ಸಲುವಾಗಿ ಬಣಕಲ್ ಪ್ಲೈನಿಂಗ್ ಕೇಂದ್ರಕ್ಕೆ ಸಾಗಿಸಲಾಗಿದೆ. ಪ್ಲೈನಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಮರದ ದಿಮ್ಮಿಗಳು ಪತ್ತೆಯಾಗಿವೆ. ಮರಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ಲೈನಿಂಗ್ ಕೇಂದ್ರದ ಮಾಲೀಕರಿಂದ ಮಾಹಿತಿ ಪಡೆಯಲಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.