ಜಿಲ್ಲೆ

ನೆಚ್ಚಿನ ಶಿಕ್ಷಕನಿಗೆ ಬೈಕ್ ನೀಡಿ ಬೀಳ್ಕೊಡುಗೆ

ನಾಗಮಂಗಲ: ಒಂದೇ ಶಾಲೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗುತ್ತಿರುವ ಸರ್ಕಾರಿ ಶಾಲೆ ಶಿಕ್ಷಕನಿಗೆ ಹಿರಿಯ ವಿದ್ಯಾರ್ಥಿಗಳು 1 ಲಕ್ಷ ರೂ. ಮೌಲ್ಯದ ಬೈಕ್ ನೀಡುವ ಮೂಲಕ ವಿಶಿಷ್ಟವಾಗಿ ಗುರುವಂದನೆ ಸಲ್ಲಿಸಿದ್ದಾರೆ.

ತಾಲೂಕಿನ ಬಿಂಡಿಗನವಿಲೆ ಹೋಬಳಿಯ ಮಾದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದುರ್ಗಸಿಂಗ್ ಎಂಬ ಶಿಕ್ಷಕ ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸಿದ್ದು, ಅ.31 ರಂದು ನಿವೃತ್ತಿಯಾಗುತ್ತಿದ್ದಾರೆ. ಹೀಗಾಗಿ ಶಾಲೆ ಆವರಣದಲ್ಲಿ ಸೋಮವಾರ ಹಿರಿಯ ವಿದ್ಯಾರ್ಥಿಗಳ ಬಳಗದಿಂದ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಶಿಕ್ಷಕನಿಗೆ ವಿದ್ಯಾರ್ಥಿಗಳು ಬೈಕ್ ಹಸ್ತಾಂತರಿಸಿ ಅಚ್ಚರಿ ಮೂಡಿಸಿದರು. ಶಿಕ್ಷಕ ವೃತ್ತಿ ಆರಂಭಿಸಿದ ಶಾಲೆಯಲ್ಲಿಯೇ ನಿವೃತ್ತಿ ಹೊಂದುತ್ತಿರುವುದು ಇವರ ಮತ್ತೊಂದು ವಿಶೇಷವಾಗಿದೆ.

ವಿದ್ಯಾರ್ಥಿಗಳು ಹಾಗೂ ಪಾಲಕರಿಗೆ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ಶಾಲೆಗೆ ಸೈಕಲ್‌ನಲ್ಲಿಯೇ 30ಕಿ.ಮೀ ನಿಂದ ಬಂದು ಪಾಠ ಹೇಳಿಕೊಡುತ್ತಿದ್ದ ಶಿಕ್ಷಕ ದುರ್ಗಸಿಂಗ್, ಕೆಲ ವರ್ಷಗಳ ಹಿಂದಷ್ಟೇ ಟಿವಿಎಸ್ ಸ್ಕೂಟರ್ ಖರೀದಿಸಿದ್ದರು. ಶಿಕ್ಷಕನ ಸರಳತೆ ಗಮನಿಸಿದ್ದ ವಿದ್ಯಾರ್ಥಿಗಳು 1 ಲಕ್ಷ ರೂ. ಮೌಲ್ಯದ ಬೈಕ್‌ನ್ನು ಶಿಕ್ಷಕನಿಗೆ ನೀಡುವ ಮೂಲಕ ಗುರು-ಶಿಷ್ಯರ ಬಾಂಧವ್ಯವನ್ನು ಮೆರೆದಿದ್ದಾರೆ.

ಹಿರಿಯ ವಿದ್ಯಾರ್ಥಿಗಳಾದ ಕೆ.ಟಿ.ಅರುಣ್‌ಕುಮಾರ್, ಅವಿನಾಶ್, ದರ್ಶನ್, ಮಹೇಶ್, ಪವನ್, ಸಂಜಯ್‌ಕುಮಾರ್, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶರತ್, ಗ್ರಾಮಸ್ಥರಾದ ರುದ್ರೇಶ್ ಮತ್ತಿತರಿದ್ದರು.