ಸೇಡಂ ತಾಲೂಕಿನ ಆಡಕಿಯ ಇತಿಹಾಸ ಪ್ರಸಿದ್ಧ ಶ್ರೀ ಕಸ್ತೂರಿ ರಂಗನಾಥ ದೇವಾಲಯ ಆವರಣದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಗೋ ಪೂಜೆ ಸಲ್ಲಿಸಿದರು. ಸಂಸದ ಡಾ.ಉಮೇಶ ಜಾಧವ್ ಇತರರಿದ್ದರು. 
ಜಿಲ್ಲೆ

ನೃಪತುಂಗನ ನೆಲದಲ್ಲಿ ದಾಖಲೆ ಬರೆದ ಆರ್. ಅಶೋಕ್: 28947 ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಿಸಿದ ಕಂದಾಯ ಸಚಿವ

ಆಡಕಿ (ಕಲಬುರಗಿ): ಇಡೀ ಆಡಳಿತವನ್ನು ಹಳ್ಳಿಗರ ಮನೆ ಬಾಗಿಲಿಗೆ ಕೊಂಡೊಯ್ಯುವ ಮೂಲಕ ಕಂದಾಯ ಸಚಿವ ಆರ್.ಅಶೋಕ್, ಜನಸಾಮಾನ್ಯರ ದೂರು-ದುಮ್ಮಾನಗಳಿಗೆ ಕಿವಿಯಾಗಿದ್ದಾರೆ. ಅದರ ಫಲವಾಗಿ ಸೇಡಂ ತಾಲೂಕು ಮತ್ತು ಕಲಬುರಗಿ ಜಿಲ್ಲೆಯ ಸುಮಾರು 28947 ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತು ಶನಿವಾರ ಒಂದೇ ದಿನ ಸಿಗುವಂತಾಯಿತು. ಈ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಫಲಾನುಭವಿಗಳಿಗೆ ಸೌಲಭ್ಯ ಕೊಡಿಸಿದ ‘ಆಡಕಿ ಗ್ರಾಮ ವಾಸ್ತವ್ಯ’ ಎಂಬ ಹೊಸ ದಾಖಲೆ ಕೂಡ ಸೃಷ್ಠಿಯಾಯಿತು.

‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಅಂಗವಾಗಿ ಸೇಡಂ ತಾಲೂಕು ಆಡಕಿ ಗ್ರಾಮದಲ್ಲಿ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯದ ಮೂಲಕ ಗ್ರಾಮೀಣರ ಸಮಸ್ಯೆ ಆಲಿಸಿದರು. ಅಷ್ಟೇ ಅಲ್ಲ, ಅವರೊಂದಿಗೆ ಡಿಸಿ ಯಶವಂತ ಗುರುಕರ್ ಸೇರಿ ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳನ್ನು ಮುಂದೆ ಕೂರಿಸಿಕೊಂಡು ಅಹವಾಲುಗಳನ್ನು ಸ್ಥಳದಲ್ಲೇ ಪರಿಹರಿಸಲು ಪ್ರಯತ್ನಿಸಿದ್ದು, ದೂರು ಹೊತ್ತು ಬಂದ ಹಲವರ ಮೊಗದಲ್ಲಿ ನಗುವಿನ ಗೆರೆ ಮೂಡಿಸಿತು.

ಆಡಕಿಯ ಮುರಾರ್ಜಿ ದೇಸಾಯಿ ವಸತಿ ಶಾಲೆ ಆವರಣದಲ್ಲಿ ಆಯೋಜಿಸಿದ್ದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಕಂದಾಯ, ಕೃಷಿ ಇತರ ಇಲಾಖೆ ಮತ್ತು ಡಿಸಿಸಿ ಬ್ಯಾಂಕ್​ನಿಂದ ಸ್ವಸಹಾಯ ಸಂಘಗಳು ಸೇರಿ ಅರ್ಹ ಫಲಾನುಭವಿಗಳಿಗೆ ಚೆಕ್, ಪಿಂಚಣಿ ಪತ್ರ, ಭಾಗ್ಯಲಕ್ಷ್ಮೀ ಬಾಂಡ್​ಗಳನ್ನು ಸಚಿವರು ವಿತರಿಸಿದರು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ.ಬಸವರಾಜ ಪಾಟೀಲ್ ಸೇಡಂ, ಸಂಸದ ಡಾ.ಉಮೇಶ ಜಾಧವ್, ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಬಸವರಾಜ ಮತ್ತಿಮಡು, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್ ಇತರರು ಸಾಥ್ ನೀಡಿದರು.

ಬಳಿಕ ಆರ್.ಅಶೋಕ್ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಅಧಿಕಾರಿಗಳೇ ಹಳ್ಳಿಗಳಿಗೆ ಬಂದು ಕಂದಾಯ ದಾಖಲೆಗಳನ್ನು ಮಾಡಿಕೊಡುವ ಪದ್ಧತಿಯಿತ್ತು. ನಂತರ ಬದಲಾಗಿ ಜನರು ಕಚೇರಿಗೆ ಅಲೆದಾಡುವಂತಾಯಿತು. ಅದನ್ನು ತಪ್ಪಿಸಿ ಸರ್ಕಾರವನ್ನೇ ಜನರ ಮನೆ ಬಾಗಿಲಿಗೆ ಕೊಂಡೊಯ್ದು ಸವಲತ್ತುಗಳನ್ನು ನೀಡುವ ಮತ್ತು ಅಧಿಕಾರಿಗಳು ಜನರ ಬಳಿ ಹೋಗಿ ಸರ್ಕಾರಿ ಯೋಜನೆ ಲಾಭ ಪಡೆದುಕೊಳ್ಳಿ ಎಂದು ತಿಳಿಸಿ ಮಂಜೂರಾತಿ ಪತ್ರಗಳನ್ನು ಹಸ್ತಾಂತರ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಗ್ರಾಮ ವಾಸ್ತವ್ಯ ನನ್ನ ಪಾಲಿಗೆ ಪಾಠಶಾಲೆ ಇದ್ದಂತೆ. ಇದರಿಂದಾಗಿ ಜನರ ಸಮಸ್ಯೆಗಳನ್ನು ಅರಿತು ಯೋಜನೆಗಳ ಲಾಭ ಕೊಡಿಸುತ್ತಿರುವ ಖುಷಿ, ಸಂತೃಪ್ತ ಭಾವ ನನ್ನಲ್ಲಿದೆ ಎಂದಾಗ ಸಭಾಂಗಣದಲ್ಲಿ ಸೇರಿದ್ದ ಅಪಾರ ಜನಸ್ತೋಮ ಕರತಾಡನದ ಮೂಲಕ ಅಭಿನಂದಿಸಿತು.

ಕಂದಾಯ ಗ್ರಾಮಗಳಾಗಿ ತಾಂಡಾ, ಕಲಬುರಗಿಯಿಂದಲೇ ಆರಂಭ

ಲಂಬಾಣಿಗರ ತಾಂಡಾ ಮತ್ತು ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ಪ್ರಾಯೋಗಿಕವಾಗಿ ಕಲಬುರಗಿ ಜಿಲ್ಲೆಯಿಂದಲೇ ಆರಂಭಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಘೊಷಿಸಿದರು. ಇದರಿಂದಾಗಿ ರಾಜ್ಯದ ಎಲ್ಲ ತಾಂಡಾ-ಹಾಡಿಗಳಿಗೆ ಶೀಘ್ರದಲ್ಲೇ ಕಂದಾಯ ಗ್ರಾಮ ಭಾಗ್ಯ ಸಿಗಲಿದೆ. ರಾಜ್ಯಾದ್ಯಂತ ಸರ್ಕಾರಿ ಜಾಗದಲ್ಲಿ ಮನೆ ನಿರ್ವಿುಸಿಕೊಂಡು ವಾಸಿಸುತ್ತಿರುವವರಿಗೆ ಆ ಜಾಗವನ್ನು ಅವರ ಹೆಸರಿಗೆ ಮಾಡಿಕೊಡಲಾಗುವುದು. ಕಲಬುರಗಿ ಜಿಲ್ಲೆಯ 453 ತಾಂಡಾಗಳನ್ನು ಎರಡು ತಿಂಗಳಲ್ಲಿ ಕಂದಾಯ ಗ್ರಾಮಗಳನ್ನಾಗಿ ಮಾಡಲಾಗುವುದು. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಏಕಕಾಲಕ್ಕೆ ಈ ಕೆಲಸವನ್ನು ತಕ್ಷಣ ಆರಂಭಿಸಲಿದ್ದಾರೆ. ಇದು ರಾಜ್ಯದ ಮಹತ್ವದ ಕನಸಿನ ಯೋಜನೆ. ತಾಂಡಾ-ಹಾಡಿಗಳಲ್ಲಿ ವಾಸವಾಗಿರುವ ಇಲ್ಲವೇ ಮನೆ ಕಟ್ಟಿಸಿಕೊಂಡಿರುವ ಜಾಗವನ್ನು ಅವರ ಹೆಸರಿಗೆ ನೋಂದಣಿ ಮಾಡಿ ದಾಖಲೆ ಪತ್ರ ನೀಡಲಾಗುವುದು ಎಂದರು. ರಾಜ್ಯದಲ್ಲಿ ಇಂಥ ಸುಮಾರು 30 ಸಾವಿರ ನಿವೇಶನಗಳಾಗುವ ನಿರೀಕ್ಷೆಯಿದೆ. ಎರಡು ತಿಂಗಳ ನಂತರ ಏಕಕಾಲಕ್ಕೆ 30 ಸಾವಿರ ನಿವೇಶನಗಳ ದಾಖಲೆ ವಿತರಿಸುವ ಸಮಾರಂಭ ಆಯೋಜಿಸುವ ಮೂಲಕ ಗಿನ್ನೆಸ್ ದಾಖಲೆ ಮಾಡುವ ಉಮೇದು ವ್ಯಕ್ತಪಡಿಸಿದ ಸಚಿವರು, ಕಲಬುರಗಿ ಜಿಲ್ಲೆಯಲ್ಲಿ ಕಾರ್ಯಕ್ರಮ ಆಯೋಜಿಸಿ ಸಿಎಂ ಅವರನ್ನು ಕರೆತರುವೆ. ನಾನು ಸಹ ಐತಿಹಾಸಿಕ ಸಮಾರಂಭಧಲ್ಲಿ ಭಾಗಿಯಾಗುವೆ ಎಂದರು.

ಬಿಳಿಯಾನೆಗಳಂತಿರುವ ಪ್ರಾದೇಶಿಕ ಆಯುಕ್ತರ ಕಚೇರಿ ರದ್ದತಿಗೆ ಹಾರನಳ್ಳಿ ರಾಮಸ್ವಾಮಿ ಸೇರಿ ಅನೇಕ ಆಡಳಿತ ಸುಧಾರಣೆ ಆಯೋಗಗಳು ವರದಿ ನೀಡಿವೆ. ಹೀಗಾಗಿ 4 ವಿಭಾಗೀಯ ಕಚೇರಿ ರದ್ದುಪಡಿಸಿ ಅಲ್ಲಿನ ಸಿಬ್ಬಂದಿಯನ್ನು ಡಿಸಿ ಕಚೇರಿಗಳಿಗೆ ನಿಯೋಜಿಸಲಾಗುವುದು. ಜತೆಗೆ ಇತರ ಇಲಾಖೆಗಳಂತೆ ಜಿಲ್ಲಾಧಿಕಾರಿಗಳ ಮೇಲೆ ಕೇಂದ್ರೀಕೃತವಾಗಿ ರಾಜ್ಯದಲ್ಲಿ ಆಯುಕ್ತಾಲಯ ಸ್ಥಾಪಿಸಲಾಗುವುದು. | ಆರ್.ಅಶೋಕ್ ಕಂದಾಯ ಸಚಿವ

ದಲಿತರ ಮನೆಯಲ್ಲಿಂದು ಉಪಾಹಾರ: ಸಚಿವ ಆರ್.ಅಶೋಕ್ ಭಾನುವಾರ ಬೆಳಗ್ಗೆ ಆಡಕಿ ಗ್ರಾಮದ ದಲಿತರೊಬ್ಬರ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸುವರು. ಬಳಿಕ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸುವರು. ನಂತರ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.

ಮುರಾರ್ಜಿ ಶಾಲೆಯಲ್ಲಿ ವಾಸ್ತವ್ಯ: ವೇದಿಕೆ ಕಾರ್ಯಕ್ರಮದ ಬಳಿಕ ಮುರಾರ್ಜಿ ದೇಸಾಯಿ ವಸತಿ ಶಾಲೆ ಅವರಣಕ್ಕೆ ಸಚಿವ ಅಶೋಕ್ ತೆರಳಿದರು. ಅಲ್ಲಿ ಸೇರಿದ್ದ ಜನಸ್ತೋಮ ಕಂಡು ಇದು ಸರ್ಕಾರದ ವರ್ಚಸ್ಸು ಹೆಚ್ಚಿಸಿರುವುದಕ್ಕೆ ಸಾಕ್ಷಿ. ಇದರ ಹಿಂದೆ ಶಾಸಕ ತೆಲ್ಕೂರ ಶ್ರಮವೂ ಇದೆ ಎಂದು ಕೊಂಡಾಡಿದರು. ಹಾಸ್ಟೆಲ್​ನಲ್ಲಿ ಗಣ್ಯರೊಂದಿಗೆ ಊಟ ಸೇವಿಸಿ ಶಾಲೆ ಆವರಣದಲ್ಲಿ ಸುಮಾರು ಮೂರೂವರೆ ಗಂಟೆ ಜನರ ದೂರು-ದುಮ್ಮಾನ ಆಲಿಸಿ ಮನವಿಗಳನ್ನು ಸ್ವೀಕರಿಸಿದರು. ರಾತ್ರಿ ಶಾಲೆ ವಿದ್ಯಾರ್ಥಿಗಳೊಂದಿಗೆ ಭೋಜನ ಮಾಡಿದ ಬಳಿಕ ಪ್ರಾಚಾರ್ಯರ ಕೋಣೆಯಲ್ಲಿ ನಿದ್ದೆಗೆ ಜಾರಿದರು.

ಕುಶಲಕರ್ವಿುಗಳ ಮಕ್ಕಳ ಕಲಿಕೆಗೂ ವಿದ್ಯಾರ್ಥಿ ವೇತನ ಸೌಲಭ್ಯ: ರೈತರ ಮಕ್ಕಳಿಗೆ ಇಂಜಿನಿಯರಿಂಗ್, ಮೆಡಿಕಲ್​ನಂಥ ಉನ್ನತ ಶಿಕ್ಷಣ ಕಲಿಯಲು ವಿದ್ಯಾರ್ಥಿ ವೇತನ ನೀಡುವಂತೆ ರೈತರ ಜಮೀನುಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ವಿುಕರ ಮತ್ತು ಕಮ್ಮಾರ, ಬಡಿಗ ಇತರ ಕುಲಶಕರ್ವಿುಗಳ ಮಕ್ಕಳೂ ಶೈಕ್ಷಣಿಕವಾಗಿ ಮುಂದೆ ಬರಲು ವಿದ್ಯಾರ್ಥಿ ವೇತನ ನೀಡುವುದಾಗಿ ಸಿಎಂ ಘೊಷಿಸಿದ್ದಾರೆ ಎಂದು ಸಚಿವ ಆರ್.ಅಶೋಕ್ ಪ್ರಕಟಿಸಿದರು. ಸಮಾರಂಭದ ವೇದಿಕೆಯಲ್ಲಿದ್ದಾಗಲೇ ಸಿಎಂ ಬೊಮ್ಮಾಯಿ ಅವರು ಅಶೋಕ್​ಗೆ ಕರೆ ಮಾಡಿ ಸುಮಾರು ಹೊತ್ತು ರ್ಚಚಿಸಿದರು. ನಂತರ ಸಚಿವರು ಮಾತನಾಡಿ, ಸಿಎಂ ಕರೆ ಮಾಡಿದ್ದರು. ಒಂದಿಷ್ಟು ಹೊಸ ಯೋಜನೆಗಳನ್ನು ಪ್ರಕಟಿಸುವಂತೆ ಹೇಳಿದ್ದಾರೆ ಎಂದು ತಿಳಿಸಿದರು. ಕುಶಲಕರ್ವಿುಗಳ ಸ್ವಯಂ ಉದ್ಯೋಗಕ್ಕಾಗಿ 50 ಸಾವಿರ ರೂ. ಉದ್ಯೋಗ ನಿಧಿ ನೆರವು ನೀಡುವುದಾಗಿ ಸಿಎಂ ಹೇಳಿದ್ದಾರೆ ಎನ್ನುತ್ತಲೇ ಸಭಿಕರು ಚಪ್ಪಾಳೆಗಳ ಮಳೆ ಸುರಿಸಿದರು. ಅದೇ ವೇಳೆ ಪ್ರಧಾನಿ ಮೋದಿ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಹೊರಗೆ ಮಳೆ ಸುರಿಯಲಾರಂಭಿಸಿತು. ಮೋದಿ ಹೆಸರು ಹೇಳಿದರೆ ಮಳೆ ಬರುತ್ತದೆ. ಇದು ಶುಭ ಲಕ್ಷಣ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

ಹೈದರಾಬಾದ್ ನಾವೇ ತಗೋತಿವಿ!: ತೆಲಂಗಾಣದಲ್ಲಿ ಬಿಜೆಪಿ ಶಕ್ತಿ ಹೆಚ್ಚುತ್ತಿರುವುದ ರಿಂದ ಕಂಗೆಟ್ಟಿರುವ ಕೆ.ಸಿ. ಚಂದ್ರಶೇಖರರಾವ್ ಇದೀಗ ರಾಯಚೂರು ನಮಗೆ ಸೇರುತ್ತದೆ ಎನ್ನುವ ಮೂಲಕ ಗಡಿ ಕ್ಯಾತೆ ತೆಗೆದಿದ್ದಾರೆ. ನಿಮಗೆ ಕನ್ನಡದ ಒಂದಿಂಚು ಭೂಮಿಯೂ ಕೊಡುವುದಿಲ್ಲ. ಉದ್ಧಟತನ ಮುಂದುವರಿಸಿದರೆ ಹೈದರಾಬಾದ್ ಅನ್ನೇ ನಾವು ತೆಗೆದುಕೊಳ್ಳಬೇಕಾಗುತ್ತದೆ ಎಂದು ಅಶೋಕ್ ಖಡಕ್ ಎಚ್ಚರಿಕೆ ನೀಡಿದರು.

ನೆರೆದಿದ್ದ ಜನಸ್ತೋಮ

ನಾನು-ಬೊಮ್ಮಾಯಿ ಅಣ್ತಮ್ಮರಂತೆ: ನಾನು ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅಣ್ಣ-ತಮ್ಮ ಇದ್ದಂತೆ. ಇಬ್ಬರು ಹಳೆಯ ಗೆಳೆಯರು. ಯಡಿಯೂರಪ್ಪ ಸರ್ಕಾರದಲ್ಲಿ ನಾನು ಕಂದಾಯ, ಅವರು ಗೃಹ ಸಚಿವರಾಗಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಅವರು ಮುಖ್ಯಮಂತ್ರಿಗಳಾದರು. ನಾನು ಕಂದಾಯ ಸಚಿವನಾಗಿ ಮುಂದುವರಿದಿದ್ದೇನೆ ಎಂದು ಆರ್.ಅಶೋಕ್ ಹೇಳಿದರು. ಇನ್ನು ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ. ಅವರ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ಪಕ್ಷದ ವರಿಷ್ಠರೂ ಹೇಳಿದ್ದಾರೆ. ಬಿಜೆಪಿ ಅಧ್ಯಕ್ಷರು ಸಹ ಮುಂದುವರಿಯುತ್ತಾರೆ ಎಂದರು. ದೇಶದಲ್ಲಿ ಇನ್ನೂ 40 ವರ್ಷ ಬಿಜೆಪಿ ಸರ್ಕಾರ ಅಲುಗಾಡಿಸಲು ಯಾರಿಂದಲೂ ಆಗಲ್ಲ. ಹೀಗಾಗಿ ರಾಹುಲ್ ಗಾಂಧಿ ಕಾಯಂ ಬ್ರಹ್ಮಚಾರಿಯಾಗಿಯೇ ಉಳಿಯಲಿದ್ದಾರೆ. ಕಾಂಗ್ರೆಸ್​ನಲ್ಲಿ ನಾಯಕರೇ ಇಲ್ಲ. ಹೀಗಿರುವಾಗಲೂ ಅವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ತಿರುಗೇಟು ನೀಡಿದರು.

ಬೈಕ್ ರ್ಯಾಲಿಯ ಸ್ವಾಗತ: ಗ್ರಾಮ ವಾಸ್ತವ್ಯಕ್ಕಾಗಿ ಶನಿವಾರ ಮಧ್ಯಾಹ್ನ ಸೇಡಂ ತಾಲೂಕಿನ ಆಡಕಿಗೆ ಆಗಮಿಸಿದ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ಕೋರಿದರು. ಪೂರ್ಣಕುಂಭ, ಡೊಳ್ಳು ಕುಣಿತ, ವೀರಗಾಸೆ, ಪೂಜಾ ಕುಣಿತ, ಪಟ ಕುಣಿತದಂಥ ಜನಪದ ಶೈಲಿಯ ನೃತ್ಯಗಳೊಂದಿಗೆ ಮುಖ್ಯ ರಸ್ತೆಯಲ್ಲಿರುವ ಪ್ರವೇಶದ ದ್ವಾರದಿಂದ ಊರಿನಲ್ಲಿರುವ ಐತಿಹಾಸಿಕ ಕಸ್ತೂರಿ ರಂಗನಾಥ ಸ್ವಾಮಿ ದೇವಾಲಯವರೆಗೆ ಮೆರವಣಿಗೆ ಮೂಲಕ ಕರೆತಂದರು. ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದುಕೊಂಡ ಬಳಿಕ ಗೋ ಮಾತೆಗೆ ಗೋಧಿ-ಬೆಲ್ಲ ತಿನ್ನಿಸಿದರು. ಶುಕ್ರವಾರ ರಾತ್ರಿಯೇ ಸೇಡಂಗೆ ಆಗಮಿಸಿ ವಾಸ್ತವ್ಯ ಹೂಡಿದ್ದ ಅಶೋಕ್, ಶನಿವಾರ ಬೆಳಗ್ಗೆ ಸೇಡಂನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು. ಹಾಲಪ್ಪಯ್ಯ ವಿರಕ್ತ ಮಠಕ್ಕೆ ಭೇಟಿ ನೀಡಿದ ಬಳಿಕ ಕೊತ್ತಲ ಬಸವೇಶ್ವರ ದೇವಾಲಯದಿಂದ ಸಾವಿರಾರು ಯುವಕರು ಬೈಕ್ ರ‍್ಯಾಲಿ ಮೂಲಕ ಸಚಿವರನ್ನು ಆಡಕಿ ಗ್ರಾಮಕ್ಕೆ ಕರೆತಂದರು.