ಜಿಲ್ಲೆ

ನೃಪತುಂಗ ಬೆಟ್ಟಕ್ಕೆ ರೋಪ್​ವೇ ಮೆರುಗು?

ಹುಬ್ಬಳ್ಳಿ: ರೋಪ್​ವೇನಲ್ಲಿ ಏರ್ ಕಾರ್ ಮೂಲಕ ಓಡಾಡಬೇಕೆನ್ನುವ ಈ ಭಾಗದ ಜನರ ಬಹುದಿನದ ಕನಸು ಇನ್ನು ಕೆಲವೇ ದಿನಗಳಲ್ಲಿ ಈಡೇರುವ ಭರವಸೆ ಮೂಡಿದೆ. 10 ವರ್ಷಗಳಿಂದ ಈ ಬಗ್ಗೆ ಪ್ರಯತ್ನಗಳು ನಡೆದಿದ್ದರೂ ಫಲ ಸಿಕ್ಕಿರಲಿಲ್ಲ. ಈ ಬಾರಿ ಜಿಲ್ಲಾಡಳಿತದ ಮುತುವರ್ಜಿಯಿಂದಾಗಿ ಆಕಾಶದಲ್ಲಿ ವಿಹರಿಸುತ್ತ ನಮ್ಮ ಹುಬ್ಬಳ್ಳಿಯ ಸೌಂದರ್ಯ ವೀಕ್ಷಣೆ ಮಾಡಬಹುದಾದ ವಿಶ್ವಾಸ ಬಂದಿದೆ.

ವಾಣಿಜ್ಯ ನಗರಿ ಹುಬ್ಬಳ್ಳಿಯ ಮುಕುಟ ಮಣಿಯಂತಿರುವ ನೃಪತುಂಗ ಬೆಟ್ಟದಲ್ಲಿ ರೋಪ್​ವೇ ಯೋಜನೆ ಜಾರಿಗೆ ಚಿಂತನೆ ನಡೆದಿದೆ. ಇದು ಕೈಗೂಡಿದರೆ ವಾಯು ವಿಹಾರ, ಪಿಕ್ನಿಕ್ ಸ್ಪಾಟ್ ಆಗಿರುವ ಬೆಟ್ಟ ಇನ್ನು ಮುಂದೆ ಹೊಸದೊಂದು ಆಕರ್ಷಣೆಯ ತಾಣವಾಗಲಿದೆ. ರಾಜ್ಯದಲ್ಲೇ ಪ್ರಥಮ ರೋಪ್​ವೇ ಹೊಂದಿದ ತಾಣ ಎಂಬ ಹೆಗ್ಗಳಿಕೆಗೂ ಪಾತ್ರವಾಗಲಿದೆ.

ಏನಿದು ರೋಪ್​ವೇ?: ಹಿಮಾಚಲಪ್ರದೇಶದ ಮನಾಲಿ, ಹೃಷಿಕೇಶ- ಹರಿದ್ವಾರದಂತಹ ಹಿಮಾಲಯದ ತಪ್ಪಲಿನ ರಾಜ್ಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಏರ್ ಕಾರ್ ಸೌಲಭ್ಯವನ್ನು ನಮ್ಮ ಹುಬ್ಬಳ್ಳಿಯ ಉಣಕಲ್ಲ ನೃಪತುಂಗ ಬೆಟ್ಟಕ್ಕೂ ಪರಿಚಯಿಸುವ ಪ್ರಯತ್ನ ಇದು.

ಬೆಟ್ಟದ ತುದಿಯಿಂದ ನಿಗದಿತ ಸ್ಥಳದವರೆಗೆ ಭೂ ಸಂಪರ್ಕ ಇಲ್ಲದಂತೆ ಅಳವಡಿಸುವ ಹಗ್ಗದ ಮೇಲೆ ಕಾರಿನಲ್ಲಿ ಸಂಚರಿಸುವ ಅಮೋಘ, ಅದ್ಭುತ ಅನುಭವ ಇದಾಗಿದೆ. ಇಂತಹ ಸೌಕರ್ಯವನ್ನು ನೃಪತುಂಗ ಬೆಟ್ಟದಿಂದ ಉಣಕಲ್ಲ ಕೆರೆಯ ಉದ್ಯಾನವರೆಗೆ ಕಲ್ಪಿಸಲು ಇದೀಗ ಧಾರವಾಡ ಜಿಲ್ಲಾಡಳಿತ ಆಲೋಚಿಸಿ, ಈ ನಿಟ್ಟಿನಲ್ಲಿ ಯೋಜನೆ ರೂಪಿಸಲು ಮುಂದಾಗಿದೆ.

ದಶಕದ ಕನಸು: ರೋಪ್​ವೇ ಆನಂದವನ್ನು ಈ ಭಾಗದ ಜನರಿಗೆ ನೀಡುವ ಉದ್ದೇಶದಿಂದ 2010ರಲ್ಲಿ ಅಂದಿನ ಜಿಲ್ಲಾಧಿಕಾರಿ ದರ್ಪಣ ಜೈನ್ ಅವರು ಪ್ರಯತ್ನಿಸಿದ್ದರು. ಪಶ್ಚಿಮ ಬಂಗಾಲದ ಸಂಸ್ಥೆಯೊಂದಕ್ಕೆ ಅಧ್ಯಯನ ನಡೆಸುವಂತೆಯೂ ಹೇಳಿದ್ದರು. ಆದರೆ, ಅದು ಕಾರಣಾಂತರಗಳಿಂದಾಗಿ ಮುಂದುವರಿಯಲಿಲ್ಲ.

2009ರಲ್ಲಿ ಸುಮಾರು ಎಂಟು ಕೋಟಿ ರೂ. ವೆಚ್ಚದಲ್ಲಿ ನೃಪತುಂಗ ಬೆಟ್ಟ ಅಭಿವೃದ್ಧಿಪಡಿಸಿ ಉದ್ಘಾಟನೆ ಮಾಡಿದ ನಂತರ ಇಲ್ಲಿ ಏನಾದರೂ ಒಂದು ಸ್ಮರಣೀಯ ಕೆಲಸ ಆಗಬೇಕು ಎಂದು ಆಗಿನಿಂದ ಪ್ರಯತ್ನ ನಡೆಸಲಾಗುತ್ತಿದೆ. ಈ ಹಿಂದೆ ವಿಧಾನಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಜಗದೀಶ ಶೆಟ್ಟರ್ ಅವರು ಹೆಚ್ಚು ಒಲವು ತೋರಿದ್ದರು. ಈಗಲೂ ಅವರು ಈ ಯೋಜನೆ ಜಾರಿಗೆ ಉತ್ಸುಕರಾಗಿದ್ದಾರೆ. ಅದರಂತೆ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯವರು ಕೂಡ ಪ್ರಯತ್ನ ಮಾಡುತ್ತಿದ್ದಾರೆ ಎಂದು ನೃಪತುಂಗ ಬೆಟ್ಟ ವಾಯು ವಿಹಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಸಿದ್ದು ಮೊಗಲಿಶೆಟ್ಟರ ಹೇಳುತ್ತಾರೆ. ಮೊಗಲಿಶೆಟ್ಟರ ಹಾಗೂ ಇತರರು ಈ ಯೋಜನೆ ಇಲ್ಲಿಯೇ ಕೈಬಿಡಲಿಲ್ಲ. ಏನೇ ಆದರೂ ರೋಪ್ ವೇ ಮಾಡಿ ಬೆಟ್ಟಕ್ಕೆ ಇನ್ನಷ್ಟು ಮೆರುಗು ನೀಡಬೇಕೆಂದು ಮಾಡಿದ ಸತತ ಪ್ರಯತ್ನದ ಫಲವಾಗಿ ಮತ್ತೆ ಈ ಯೋಜನೆಗೆ ಜೀವ ಬಂದಿದೆ.

ಈಗಿನ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪಶ್ಚಿಮ ಬಂಗಾಳದ ಅದೇ ಸಂಸ್ಥೆಯನ್ನು ಸಂರ್ಪಸಿ ಪುನಃ ಅಧ್ಯಯನ ನಡೆಸಿ ಕಾರ್ಯಸಾಧ್ಯತೆ ವರದಿ ನೀಡುವಂತೆ ಸೂಚಿಸಿದ್ದಾರೆ. ಪಶ್ಚಿಮ ಬಂಗಾಳದ ದಾಮೋದರ ರೋಪ್​ವೇ ಸಂಸ್ಥೆಯವರು ಏರ್ ಕಾರ್ ಎಲ್ಲಿಂದ ಎಲ್ಲಿಗೆ ಹೋಗಬೇಕು, ನಿಲ್ದಾಣ ಎಲ್ಲಿ ಬರಬೇಕು ಎಂಬುದು ಸೇರಿ ಸಮಗ್ರ ಅಧ್ಯಯನ ನಡೆಸುತ್ತಿದ್ದಾರೆ. ಉಣಕಲ್ಲ ರೈಲು ನಿಲ್ದಾಣ ಬಳಿ ಒಂದು ನಿಲ್ದಾಣ ಮಾಡಿ ಮತ್ತೆ ಕೆರೆ ಉದ್ಯಾನಕ್ಕೆ ತಲುಪಿಸುವ ಬಗ್ಗೆ ಸಂಸ್ಥೆಯವರು ಪ್ರಸ್ತಾಪಿಸಿದ್ದಾರೆ. ಒಟ್ಟಾರೆ ಅವರ ಕಾರ್ಯಸಾಧ್ಯತೆ ವರದಿ ಬಂದ ನಂತರ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಿಂದ ಕನ್ಸಲ್ಟಂಟ್ ಬಂದಿದ್ದು, ಹಿಂದೆ ಅರ್ಧಕ್ಕೆ ಕೈಬಿಟ್ಟ ರೋಪ್​ವೇ ಯೋಜನೆ ಪುನಃ ರೂಪಿಸಿ ಕೊಡಲು ಹೇಳಿದ್ದೇವೆ. ಬೆಟ್ಟದಿಂದ ಕೆರೆವರೆಗೆ ಪ್ರಾಥಮಿಕ ಪರಿಶೀಲನೆ ವೇಳೆ ಕಾರ್ಯಸಾಧು ಎಂದು ಅವರು ಹೇಳಿದ್ದಾರೆ. ಈಗಾಗಲೇ ಎರಡು ಬಾರಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಮೂರು ತಿಂಗಳಲ್ಲಿ ವರದಿ ನೀಡಲಿದ್ದು, ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಟೆಂಡರ್ ಆಗುವವರೆಗೂ ಕನ್ಸಲ್ಟಂಟ್ ಇಲ್ಲೇ ಇದ್ದು ಅವಲೋಕಿಸಲಿದ್ದಾರೆ. | ನಿತೇಶ ಪಾಟೀಲ ಜಿಲ್ಲಾಧಿಕಾರಿ

ಹೀಗೂ ಮಾಡಬಹುದು: ನೃಪತುಂಗ ಬೆಟ್ಟದಿಂದ ಹೊರಟು ಶಿರಡಿನಗರ ಸಾಯಿ ಮಂದಿರ, ರೈಲು ನಿಲ್ದಾಣ ಹತ್ತಿರ ಹಾಯ್ದು ಕೆರೆ ಬಳಿಯ ಉದ್ಯಾನ ತಲುಪುವುದು. ಅಲ್ಲಿಂದ ಮತ್ತೆ ಹೊರಟು ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿದ್ಯಾಲಯದ ಸುತ್ತ ಹಾಯ್ದು ಬೆಟ್ಟಕ್ಕೆ ತಲುಪುವಂತೆ ಯೋಜನೆ ರೂಪಿಸಿದರೆ ರೋಪ್​ವೇ ಹೆಚ್ಚು ಆಕರ್ಷಕವಾಗಲಿದೆ. ಏರ್ ಕಾರ್ ಪ್ರಯಾಣ ಹೆಚ್ಚು ಮನರಂಜನೆ ಹಾಗೂ ಪ್ರಕೃತಿ ಸೌಂದರ್ಯ ಸವಿಯಲು ನೆರವಾಗಲಿದೆ. ಇದರ ಬಗ್ಗೆಯೂ ಗಮನ ಹರಿಸಬೇಕು ಎಂಬುದು ಇಲ್ಲಿಗೆ ನಿತ್ಯ ಬರುವ ಹಲವು ವಾಯುವಿಹಾರಿಗಳ ಆಶಯವಾಗಿದೆ.

ಸವಾಲಿನ ಕೆಲಸ: ನೃಪತುಂಗ ಬೆಟ್ಟ ಹಾಗೂ ಉಣಕಲ್ ಕೆರೆ ನಡುವೆ ರೈಲು ಹಳಿ ಮತ್ತು ಹುಬ್ಬಳ್ಳಿ- ಧಾರವಾಡ ರಸ್ತೆ ಹಾದುಹೋಗಿದೆ. ಇವೆರಡನ್ನು ದಾಟಿ ರೋಪ್​ವೇಯನ್ನು ಸುರಕ್ಷಿತವಾಗಿ ನಿರ್ವಿುಸುವುದು ಸವಾಲಿನ ಕೆಲಸವಾಗಿದೆ.