ಜಿಲ್ಲೆ

ನೂರು ಬೈಕ್ ಸವಾರರಿಗೆ ‘ದಂಡಾಸ್ತ್ರ‘

ವಿಜಯವಾಣಿ ಸುದ್ದಿಜಾಲ ನರಗುಂದ

ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಸ್. ನೇಮಗೌಡ ನಿರ್ದೇಶನದಂತೆ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಿಲ್ಲೆಯ ವಿವಿಧ ಠಾಣೆಗಳ ಸಿಪಿಐ, ಪಿಎಸ್‌ಐ, ಎಎಸ್‌ಐ, ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ಶುಕ್ರವಾರ ವಿಶೇಷ ಕಾರ್ಯಾಚರಣೆ ನಡೆಸಿ, ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ವಶಪಡಿಸಿಕೊಂಡರು.

ಹೆಲ್ಮೆಟ್ ಧರಿಸದಿರುವುದು, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದಿರುವುದು, ವಿಮೆ ಮುಂತಾದ ದಾಖಲಾತಿಗಳಿಲ್ಲದೆ ಪಟ್ಟಣದಲ್ಲಿ ಎಲ್ಲೆಂದರಲ್ಲಿ ಸಂಚರಿಸುತ್ತಿದ್ದ 100ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಸ್ಥಳದಲ್ಲಿಯೇ 45 ಸಾವಿರ ರೂಪಾಯಿ ದಂಡ, ಕೋರ್ಟ್ ದಂಡ 72 ಸಾವಿರ ರೂ. ಸೇರಿ ಒಟ್ಟು 1.17 ಲಕ್ಷ ರೂ. ದಂಡ ಪಾವತಿಸಿಕೊಳ್ಳಲಾಯಿತು.

ರಸ್ತೆ ಸುರಕ್ಷತೆ ಹಾಗೂ ಸುರಕ್ಷಿತ ವಾಹನಗಳ ಸಂಚಾರ ನಿಯಮಗಳ ಕುರಿತು ವಾಹನ ಚಾಲಕ, ಮಾಲೀಕರು, ಸಾರ್ವಜನಿಕರಿಗೆ ತಿಳಿವಳಿಕೆ ನೀಡಿ ಜಾಗೃತಿ ಮೂಡಿಸಲಾಯಿತು. ಶಿವಾಜಿ ಸರ್ಕಲ್, ಎಪಿಎಂಸಿ ದ್ವಾರಬಾಗಿಲು, ಕೋರ್ಟ್ ಸರ್ಕಲ್, ಬಸವೇಶ್ವರ ವರ್ತುಲ, ನೀರಾವರಿ ಕಾಲನಿ, ಸೋಮಾಪುರ, ಮಾರುಕಟ್ಟೆ ಪ್ರದೇಶ ಸೇರಿ ಪ್ರಮುಖ ರಸ್ತೆ ಹಾಗೂ ವಿವಿಧ ವರ್ತುಲಗಳಲ್ಲಿ ಪೊಲೀಸರು ತಂಡೋಪತಂಡವಾಗಿ ನಿಂತು ಬೈಕ್ ಸವಾರರಿಂದ ದಂಡ ವಸೂಲಿ ಮಾಡಿದರು. ವಾಹನ ಸವಾರರು ಕೆಲಕಾಲ ಕಕ್ಕಾ-ಬಿಕ್ಕಿಯಾದರು.

ಡಿವೈಎಸ್‌ಪಿ ಪ್ರಭುಗೌಡ ಕಿರೇದಳ್ಳಿ, ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್‌ಐಗಳಾದ ಎಫ್.ಎಸ್. ಮಣ್ಣೂರ, ಪ್ರಕಾಶ ಬಣಕಾರ, ಧೀರಜ್ ಶಿಂಧೆ, ವಿ.ಜಿ. ಪವಾರ, ಶಿರಹಟ್ಟಿ ಸಿಪಿಐ, ಮುಳಗುಂದ ಪಿಐ, ಪೊಲೀಸ್ ಸಿಬ್ಬಂದಿ ಇತರರಿದ್ದರು.