ಜಿಲ್ಲೆ

ನೂತನ ಸೇತುವೆ ನಿರ್ಮಾಣಕ್ಕೆ ಶಾಸಕ ಎಆರ್‌ಕೆ ಒತ್ತಾಯ

ಕೊಳ್ಳೇಗಾಲ: ರಾಷ್ಟ್ರೀಯ ಹೆದ್ದಾರಿ(209)ಯಲ್ಲಿರುವ ಸುವರ್ಣವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಾಲೂಕಿನ ಮುಡಿಗುಂಡ ಸೇತುವೆ ಶಿಥಿಲಗೊಂಡಿದ್ದು ಸುರಕ್ಷಿತ ಸಂಚಾರಕ್ಕೆ ನೂತನ ಸೇತುವೆ ನಿರ್ಮಿಸಬೇಕೆಂದು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಒತ್ತಾಯಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಬುಧವಾರ ಕೊಳ್ಳೇಗಾಲ ತಾಲೂಕಿನ ಮುಡಿಗುಂಡ ಸೇತುವೆ ಸ್ಥಿತಿಗತಿಯ ಬಗ್ಗೆ ಸವಿಸ್ತಾರವಾಗಿ ಶಾಸಕ ಎ.ಆರ್.ಕೃಷ್ಣಮೂರ್ತಿ ಪ್ರಸ್ತಾಪಿಸಿದ್ದಾರೆ. 1934ರಲ್ಲಿ ನಿರ್ಮಾಣಗೊಂಡ ಸೇತುವೆ ಇದಾಗಿದೆ. ಈಗಾಗಲೇ ಸೇತುವೆಗೆ 90 ವರ್ಷ ತುಂಬಿದ್ದು ಶಿಥಿಲಗೊಂಡಿದೆ. ಬಹಳ ಕಿರಿದಾಗಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ. ಹಾಗಾಗಿ ಹೊಸ ಸೇತುವೆ ನಿರ್ಮಾಣ ಮಾಡಬೇಕು ಎಂದು ಕೋರಿದರು.

ಸಚಿವ ಪ್ರಿಯಾಂಕ್ ಖರ್ಗೆ ಉತ್ತರಿಸಿ ಶಾಸಕ ಎ.ಆರ್.ಕೃಷ್ಣಮೂರ್ತಿ ಹಳೆಯ ಕಾಲದ ಸೇತುವೆ ಎಂದು ಹೇಳುತ್ತಿದ್ದಾರೆ. ಈ ಸೇತುವೆಯನ್ನು ಆಧುನೀಕರಿಸಿ 12 ಮೀಟರ್ ಅಗಲದ ಸೇತುವೆ ಮಾಡಬೇಕಾದರೆ 10 ಕೋಟಿ ರೂ. ಅನುದಾನ ಅಗತ್ಯವಿದೆ. ಕಾಮಗಾರಿಯೂ ಈ ಆಯ್ಯವ್ಯಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿಲ್ಲ. ಆದ್ದರಿಂದ ಮುಂದಿನ ಆಯವ್ಯಯದಲ್ಲಿ ಸೇತುವೆ ನಿರ್ಮಾಣಕ್ಕೆ ಅನುದಾನ ಸೇರಿಸಿ ಕ್ರಮವಹಿಸಬೇಕಿದೆ. ಮುಂದಿನ ಆಯವ್ಯಯದಲ್ಲಿ ಮುಡಿಗುಂಡ ಸೇತುವೆ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು. ಬಳಿಕ ಕೃಷ್ಣಮೂರ್ತಿ ಅವರು ಪ್ರತಿಕ್ರಿಯಿಸಿ, ನೂತನ ಸೇತುವೆ ಸುಗಮ ಸಂಚಾರಕ್ಕೆ ಅಗತ್ಯವಾಗಿದೆ. ಹಾಗಾಗಿ ಸೇತುವೆ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.