ಬೀದರ್: ಅನುಭವ ಮಂಟಪ ಮೂಲಕ ವಿಶ್ವಕ್ಕೆ ಪ್ರಥಮ ಬಾರಿಗೆ ಪ್ರಜಾಪ್ರಭುತ್ವ, ಸಂಸತ್ತಿನ ಪರಿಕಲ್ಪನೆ ಪರಿಚಯಿಸಿದ ಮಹಾತ್ಮ ಬಸವೇಶ್ವರರ ಪ್ರತಿಮೆ ನವದೆಹಲಿಯಲ್ಲಿ ನಿರ್ಮಿಸುತ್ತಿರುವ ನೂತನ ಸಂಸತ್ ಭವನದ ಪ್ರವೇಶ ದ್ವಾರದ ಎದುರು ಸ್ಥಾಪಿಸಬೇಕು ಎಂದು ಬಸವ ದಳ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಅವರು, ಪ್ರತಿಮೆ ಮೇಲೆ ಜಗತ್ತಿನ ಮೊಟ್ಟ ಮೊದಲ ಪ್ರಜಾಪ್ರಭುತ್ವ ವಿಚಾರಗಳ ಪ್ರತಿಪಾದಕ ಹಾಗೂ ಲೋಕಸಂಸತ್ತಿನ ಸಂಸ್ಥಾಪಕ ಎಂದು ಬರೆಸಬೇಕು. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಅನುಭವ ಮಂಟಪ ಚಿತ್ರ ಅಳವಡಿಸಬೇಕು. ಪ್ರಜಾಪ್ರಭುತ್ವ ಹಾಗೂ ವಿಶ್ವ ಕಲ್ಯಾಣದ ಸಂದೇಶ ಸಾರುವ ಬಸವಾದಿ ಶರಣರ ವಚನ ಫಲಕಗಳನ್ನು ತೂಗು ಹಾಕಬೇಕು ಎಂದು ಕೋರಿದ್ದಾರೆ.
12ನೇ ಶತಮಾನದಲ್ಲೇ ಬಸವಣ್ಣನವರು ಅನುಭವ ಮಂಟಪ ಮೂಲಕ ಲೋಕ ಸಂಸತ್ತಿನ ನಿರ್ಮಾಣ ಮಾಡಿದ್ದರು ಎಂದು ನೂತನ ಸಂಸತ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳುವ ಮೂಲಕ ವಿಶ್ವದೆದುರು ವಾಸ್ತವ ಸಂಗತಿಯನ್ನು ತೆರೆದಿಟ್ಟಿದ್ದಾರೆ ಎಂದು ಧನ್ನೂರ ಹೆಮ್ಮೆಪಟ್ಟಿದ್ದಾರೆ.
ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಈಗಾಗಲೇ 500 ಕೋಟಿ ರೂ. ಘೋಷಿಸಿದೆ. ಕೇಂದ್ರ ಸರ್ಕಾರವೂ ಅನುದಾನ ಕಲ್ಪಿಸಿ ಅನುಭವ ಮಂಟಪಕ್ಕೆ ಅಂತಾರಾಷ್ಟ್ರೀಯ ಸ್ಮಾರಕಗಳಲ್ಲಿ ಒಂದಾಗಿಸಬೇಕು. ನೂತನ ಅನುಭವ ಮಂಟಪದ ಶಿಲಾನ್ಯಾಸ ಶೀಘ್ರವೇ ಪ್ರಧಾನಿ ಮೋದಿ ಅವರಿಂದ ನೆರವೇರಲಿ ಎಂದು ಸದಾಶಯ ವ್ಯಕ್ತಪಡಿಸಿದ್ದಾರೆ.